ಪ್ರವಾಹಕ್ಕೊಳಗಾದ ಅತಿಕ್ರಮಣದಾರರಿಗೂ ಪರಿಹಾರ

ಕುಮಟಾ: ಅತಿವೃಷ್ಟಿ ಹಾಗೂ ಪ್ರವಾಹದಿಂದ ತತ್ತರಿಸಿದ ಅರಣ್ಯ ಅತಿಕ್ರಮಣದಾರರಿಗೂ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಬಗ್ಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಗುರುವಾರ ಕುಮಟಾ ತಾಲೂಕಿನ ಖೈರೆ ಕ್ರಾಸ್, ತಂಡ್ರಕುಳಿಯಲ್ಲಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಜಿಲ್ಲೆಯಲ್ಲಿ ಪ್ರವಾಸ ಮಾಡಿದಾಗ ಕಂಡು ಬಂದ ಪ್ರಮುಖ ಅಂಶ ಇದಾಗದ್ದು, ಹಲವು ದಶಕಗಳಿಂದ ಅರಣ್ಯ ಪ್ರದೇಶದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಅಲ್ಲಿ ಮನೆಗಳು ಕುಸಿದರೆ ನಿಯಮ ಪ್ರಕಾರ ಪರಿಹಾರ ಕೊಡಲಾಗದು. ಅವರಿಗೂ ಪರಿಹಾರ ಲಭಿಸುವಂತೆ ಮಾಡಲು ಜಿಲ್ಲಾಧಿಕಾರಿಯಿಂದ ವರದಿ ಪಡೆದು ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ 7-8 ಕಡೆ ತೂಗು ಸೇತುವೆಗಳು ನಾಶವಾಗಿವೆ. ಅಲ್ಲಿ ಸಂಪರ್ಕ ಕಲ್ಪಿಸಲು ತಾತ್ಕಾಲಿಕ ಹಾಗೂ ಶಾಶ್ವತ ಕ್ರಮಕ್ಕಾಗಿ ಎರಡೂ ಬಗೆಯ ವರದಿಯನ್ನು ಜಿಲ್ಲಾಧಿಕಾರಿಗಳಿಂದ ಪಡೆಯುತ್ತೇವೆ. ಸಂಪರ್ಕ ಕಡಿತಗೊಂಡಲ್ಲಿ ಶೀಘ್ರ ಸೇತುವೆ ನಿರ್ವಿುಸಲಾಗುವುದು ಎಂದರು.

ಪ್ರವಾಹ ಬಂದಾಗ ಹಾನಿಯಾದ ಮನೆಗಳಿಗೆ ಎನ್​ಡಿಆರ್​ಎಫ್ ನಿಯಮ ಪ್ರಕಾರ 3800 ಮಾತ್ರ ಕೊಡಲು ಸಾಧ್ಯವಿತ್ತು. ಈಗ ರಾಜ್ಯ ಸರ್ಕಾರವೂ 6800 ರೂ. ಸೇರಿಸಿ ಒಟ್ಟು 10 ಸಾವಿರ ರೂ. ಕೊಡುತ್ತಿದ್ದೇವೆ. ತೊಂದರೆಗೊಳಗಾದವರಿಗೆ ತಕ್ಷಣ ಪರಿಹಾರ ಸಿಗುತ್ತಿದೆ. ಪೂರ್ಣ ಮನೆ ನಾಶವಾದಾಗ ಎನ್​ಡಿಆರ್​ಎಫ್ ನಿಯಮ ಪ್ರಕಾರ 95 ಸಾವಿರ ರೂ. ಮಾತ್ರ ಕೊಡಲು ಅವಕಾಶವಿತ್ತು. ಆದರೆ, ಈಗ ನಮ್ಮ ಸರ್ಕಾರ 5 ಲಕ್ಷದವರೆಗೆ ಹಣ ಕೊಟ್ಟು ಹೊಸ ಮನೆ ನಿರ್ವಣಕ್ಕೆ ಅನುವು ಮಾಡಿಕೊಡುತ್ತಿದ್ದೇವೆ ಎಂದರು.

ಇದಕ್ಕೂ ಮುನ್ನ ತಾಲೂಕಿನ ಖೈರೆ ಕ್ರಾಸ್ ಬಳಿ ಚತುಷ್ಪಥ ಕಾಮಗಾರಿಯ ಅವಾಂತರವನ್ನು ಶಾಸಕ ದಿನಕರ ಶೆಟ್ಟಿ ಅವರು ಸಚಿವರಿಗೆ ವಿವರಿಸಿದರು. ತಂಡ್ರಕುಳಿಯಲ್ಲೂ ಗ್ರಾಮಸ್ಥರು ಗುಡ್ಡ ಕುಸಿತ ಹಾಗೂ ಪ್ರವಾಹದ ಸಮಸ್ಯೆ ಎದುರಿಸುತ್ತಿರುವುದನ್ನು ಸಚಿವರ ಗಮನಕ್ಕೆ ತರಲಾಯಿತು.

ಶಾಸಕ ಅರವಿಂದ ಲಿಂಬಾವಳಿ, ಕಂದಾಯ ಇಲಾಖೆ ಕಾರ್ಯದರ್ಶಿ ಮನೀಷ ಮೌದ್ಗಿಲ್, ಜಿಲ್ಲಾಧಿಕಾರಿಗಳ ಸಹಿತ ಎಲ್ಲ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು, ಬಿಜೆಪಿ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ ಹಾಗೂ ಪದಾಧಿಕಾರಿಗಳು ಇದ್ದರು.

ಐಆರ್​ಬಿಯವರು ಚತುಷ್ಪಥ ಕಾಮಗಾರಿ ನಡೆಸಿರುವ ಕಡೆ ಗುಡ್ಡ ಕುಸಿತವಾಗುತ್ತಿದೆ. ಶಾಸಕ ದಿನಕರ ಶೆಟ್ಟಿ ಇದನ್ನು ತೋರಿಸಿದ್ದಾರೆ. ತಂಡ್ರಕುಳಿಯಲ್ಲಿ ಹಿಂದೆ ಗುಡ್ಡ ಕುಸಿದು ಮೂವರ ಪ್ರಾಣ ಹೋಗಿದೆ. ಇದಕ್ಕೆಲ್ಲ ಕೆಲವೊಂದು ಮೂಲ ಸಮಸ್ಯೆಗಳಿವೆ. ಐಆರ್​ಬಿ ಕಂಪನಿ ಕಾಮಗಾರಿ ಸರಿಯಾಗಿ ಮಾಡುತ್ತಿಲ್ಲ ಎಂಬುದು ಕಂಡು ಬಂದ ಹಿನ್ನೆಲೆಯಲ್ಲಿ ಐಆರ್​ಬಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಇಂದೇ ಮಾತನಾಡುತ್ತೇವೆ. | ಜಗದೀಶ ಶೆಟ್ಟರ್ ಸಚಿವ

ಚಿಕ್ಕುಮನೆ ಸ್ಥಳೀಯರ ಜೊತೆ ಮಾತುಕತೆ

ಯಲ್ಲಾಪುರ: ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಜಗದೀಶ ಶೆಟ್ಟರ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅರಬೈಲ್ ಘಟ್ಟ ಪ್ರದೇಶದಲ್ಲಿನ ರಾಷ್ಟ್ರೀಯ ಹೆದ್ದಾರಿ ಬಿರುಕು ಬಿಟ್ಟ ಸ್ಥಳ ವೀಕ್ಷಿಸಿದರು. ನಂತರ ಗುಳ್ಳಾಪುರದ ಚಿಕ್ಕುಮನೆಯಲ್ಲಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಅವರು, ಸರ್ಕಾರದಿಂದ ನೆರೆ ಸಂತ್ರಸ್ತರಿಗೆ ನೀಡಲಾದ ಸೌಲಭ್ಯ ಹಾಗೂ ಪರಿಹಾರ ಸಮರ್ಪಕವಾಗಿ ತಲುಪಿದೆಯೇ, ಇಲ್ಲವೇ ಎಂದು ಮಾಹಿತಿ ಪಡೆದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಬೇರೆ ಜಿಲ್ಲೆಗಳಿಗೆ ಹೋಗಿದ್ದಾರೆ, ನಮ್ಮ ಜಿಲ್ಲೆಗೆ ಮಾತ್ರ ಮಳೆ ಹಾನಿ ವೀಕ್ಷಣೆಗೆ ಬಂದಿಲ್ಲ, ಈ ತಾರತಮ್ಯ ಏಕೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್, ತಾರತಮ್ಯವಿಲ್ಲ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ಜಿಲ್ಲೆಗೆ ಬರುತ್ತಾರೆ. ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ. ಸರ್ಕಾರ ಸಂತ್ರಸ್ತರ ಜೊತೆಗಿರುತ್ತದೆ ಎಂದರು.

ಮನವಿ ಸಲ್ಲಿಕೆ: ಇದಕ್ಕೂ ಮುನ್ನ ವಿವಿಧೆಡೆ ಮಳೆಯಿಂದ ಉಂಟಾದ ಹಾನಿಗಳ ಕುರಿತು ಜನಪ್ರತಿನಿಧಿಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪಟ್ಟಣದ ಅರಣ್ಯ ಪ್ರವಾಸಿ ಮಂದಿರದಲ್ಲಿ ಸಚಿವರಿಗೆ ಮನವಿ ಸಲ್ಲಿಸಿದರು. ಅಡಕೆ ಬೆಳೆಗೆ ಕೊಳೆ ರೋಗದಿಂದ ಉಂಟಾಗಿರುವ ಹಾನಿಗೆ ಸರ್ಕಾರದಿಂದ ಪರಿಹಾರ ನೀಡುವಂತೆ ಟಿಎಂಎಸ್ ವತಿಯಿಂದ ಮನವಿ ಸಲ್ಲಿಸಲಾಯಿತು. ಇದಕ್ಕೆ ಸ್ಪಂದಿಸಿದ ಸಚಿವ ಶೆಟ್ಟರ್, ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಲು ಪ್ರಯತ್ನ ಮಾಡುತ್ತೇವೆ ಎಂದರು. ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ, ಜಿಲ್ಲಾಧಿಕಾರಿ ಡಾ. ಹರೀಶಕುಮಾರ, ಜಿ.ಪಂ. ಸಿಇಒ ಎಂ. ರೋಶನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಶ್ ಮೌದ್ಗಿಲ್, ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ, ತಹಸೀಲ್ದಾರ್ ಡಿ. ಜಿ. ಹೆಗಡೆ, ಜಿ.ಪಂ. ಸದಸ್ಯೆಯರಾದ ಶ್ರುತಿ ಹೆಗಡೆ, ರೂಪಾ ಬೂರ್ಮನೆ, ತಾ.ಪಂ. ಸದಸ್ಯರಾದ ಚಂದ್ರಕಲಾ ಭಟ್ಟ, ನಾಗರಾಜ ಕವಡಿಕೆರೆ, ಸುಬ್ಬಣ್ಣ ಬೋಳ್ಮನೆ, ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಜಿ. ನಾಯ್ಕ, ಮಾಜಿ ಶಾಸಕರಾದ ವಿ.ಎಸ್. ಪಾಟೀಲ, ಸುನೀಲ ಹೆಗಡೆ ಇತರರಿದ್ದರು.

Leave a Reply

Your email address will not be published. Required fields are marked *