ಪ್ರವಾಸೋದ್ಯಮ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವ

ಕಾರವಾರ: ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಮಾಡಲು ಸಮಗ್ರ ಯೋಜನೆ ರೂಪಿಸಲಾಗು ವುದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಸಕ್ಕರೆ ಸಚಿವ ಸಿ.ಟಿ.ರವಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮಗೆ ಸಂಬಂಧಪಟ್ಟ ಇಲಾಖೆಗಳ ಪ್ರಗತಿ ಪರಿಶೀಲನೆ ಶನಿವಾರ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು, ತಾಣಗಳು, ಅಲ್ಲಿನ ಮಹತ್ವ ಅಭಿವೃದ್ಧಿಯಾಗ ಬೇಕಾದ ಸ್ವರೂಪದ ಸಮಗ್ರ ಯೋಜನೆಯೊಂದನ್ನು ರೂಪಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಅದರಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಬೇಕು. ಮುಂದಿನ ದಿನದಲ್ಲಿ ಅದನ್ನು ರಾಜ್ಯಕ್ಕೂ ವಿಸ್ತರಿಸಲಾಗುವುದು. 2020 ರ ಹೊತ್ತಿಗೆ ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು. ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು ಎಂದರು.

ವಾಪಸ್ ನೀಡುತ್ತೇವೆ: ಸ್ವದೇಶ ದರ್ಶನ ಯೋಜನೆಯಲ್ಲಿ ಕಡಲ ತೀರಗಳ ಅಭಿವೃದ್ಧಿಗೆ ಅನುದಾನ ಪಡೆಯಲು ರಾಜ್ಯದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೇ 2016ರಲ್ಲಿ ಯೋಜನಾ ವರದಿ ಸಲ್ಲಿಸಿದ್ದರು. ಹಾಗಾಗಿ ಕೇಂದ್ರ ಸರ್ಕಾರ ಅನುದಾನ ನೀಡಲು ನಿರಾಕರಿಸಿದೆ. ಈಗಾಗಲೇ ಬಿಡುಗಡೆ ಮಾಡಿದ 19 ಕೋಟಿ ರೂ.ಗಳನ್ನು ವಾಪಸ್ ಕಳಿಸಿ ಹೊಸದಾಗಿ ಸಮಗ್ರ ಯೋಜನೆ ರೂಪಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಗ್ರಾಮಗಳ ಅಧ್ಯಯನ: ಪ್ರತಿ ಗ್ರಾಪಂ ನೇತೃತ್ವದಲ್ಲಿ ಪದವಿ ಕಲಾ ವಿಭಾಗದ ವಿದ್ಯಾರ್ಥಿಗಳ ನೆರವಿನಲ್ಲಿ ಜಿಲ್ಲೆಯ ಎಲ್ಲ ಕಂದಾಯ ಗ್ರಾಮಗಳ ಇತಿಹಾಸ, ಜಾನಪದ, ಸಂಸ್ಕೃತಿ ಅಧ್ಯಯನ ನಡೆಸಲು ಯೋಜಿಸಲಾಗಿದೆ. ಆ ವರದಿಯನ್ನು ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್​ಸೈಟ್​ನಲ್ಲಿ ವಿಕಿಪೀಡಿಯಾ ಮಾದರಿಯಲ್ಲಿ ಪ್ರಕಟಿಸಲಾಗುವುದು ಎಂದರು.

ಅಧಿಕಾರಿ ತರಾಟೆಗೆ: ಪೂರ್ವ ತಯಾರಿ ಇಲ್ಲದೆ, ಇಲಾಖೆ ಕಾಮಗಾರಿಗಳ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದೇ ಬಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಹಿಮಂತರಾಜು ಜಿ.ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಸಂಸದ ಅನಂತ ಕುಮಾರ ಹೆಗಡೆ, ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಕೆ.ಎನ್.ರಮೇಶ, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಜಿಪಂ ಸಿಇಒ ಎಂ.ರೋಶನ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪುರುಷೋತ್ತಮ ಇದ್ದರು.

ಮಧ್ಯಸ್ಥಿಕೆ ಸಾಧ್ಯವಿಲ್ಲ: ಹಳಿಯಾಳ ಕಬ್ಬು ಬೆಳೆಗಾರರಿಗೆ ಇಐಡಿ ಪ್ಯಾರಿ ಕಾರ್ಖಾನೆಯಿಂದ ಹಣ ಬಾಕಿ ಮಾಹಿತಿ ಇದೆ. ಆದರೆ, ಈ ವಿಷಯದಲ್ಲಿ ರೈತರು, ಕಾರ್ಖಾನೆ ನಡುವೆ ಮೌಖಿಕ ಒಪ್ಪಂದವಾಗಿದೆಯೇ ಹೊರತು ಯಾವುದೇ ಕರಾರು ಪತ್ರ ಇಲ್ಲ. ಕಾರಣ ಇಲಾಖೆ ಮಧ್ಯ ಪ್ರವೇಶ ಸಾಧ್ಯವಿಲ್ಲ. ಕಬ್ಬು ಸಾಗಣೆ ದರ ಕಿಮೀಗೆ ಇಂತಿಷ್ಟು ಎಂದು ಸರ್ಕಾರ ನಿಗದಿ ಮಾಡಿದೆ ಅದರಂತೆ ಹಳಿಯಾಳದಲ್ಲೂ ಜಾರಿಗೆ ಕ್ರಮ ವಹಿಸಲಾಗುವುದು ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.

ಸಚಿವರು ಹೇಳಿದ್ದೇನು..?: ಪ್ರವಾಸೋದ್ಯಮ ಇಲಾಖೆಯಲ್ಲಿ ಶೇ.82, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಶೇ.61 ಹಾಗೂ ಸಕ್ಕರೆ ಇಲಾಖೆಯಲ್ಲಿ ಶೇ.70 ಹುದ್ದೆಗಳು ಖಾಲಿ ಇದ್ದು. ಅವುಗಳನ್ನು ಭರ್ತಿ ಮಾಡಲು ಸಿಎಂಗೆ ಮನವಿ. ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸ ನಿರ್ಮಾಣ ಯೋಜನೆ ಮುಂದಿನ ವರ್ಷದಿಂದ ಬಂದ್. ಶಿರಸಿಯಲ್ಲಿ ಕಲಾ ಭವನ ನಿರ್ವಣಕ್ಕೆ ಮುಂದಿನ ವರ್ಷ ಆಯವ್ಯಯದಲ್ಲಿ ಯೋಜನೆ. ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿಗಳ ಜೊತೆ, ಜಲ ಕ್ರೀಡಾ ಸಾಧನಗಳ ಕೊಳ್ಳಲೂ ಸಬ್ಸಿಡಿ ಕೊಡಲು ಯೋಜನೆ ರೂಪಿಸಿ. ಡಿಮಾಂಡ್ ಸರ್ವೆ ಮಾಡಿ. ಜಾಗದ ತೊಂದರೆಯಿಂದ ವಿಳಂಬವಾದ ಪ್ರವಾಸೋದ್ಯಮ ಕಾಮಗಾರಿಗಳ ಹಣವನ್ನು ತಿಂಗಳಲ್ಲಿ ಮರು ಹಂಚಿಕೆ. ಜಲಪಾತ, ಕಡಲ ತೀರ ಮುಂತಾದ ಪ್ರವಾಸಿ ತಾಣಗಳಲ್ಲಿ ಮೊಬೈಲ್ ಟಾಯ್ಲೆಟ್​ಗೆ ವ್ಯವಸ್ಥೆ ಮಾಡಿ. ಜಾಗದ ಸಮಸ್ಯೆಯಿಂದ ನಿಂತ ಕನ್ನಡ ಸಂಸ್ಕೃತಿ ಇಲಾಖೆ ರಂಗಮಂದಿರ ಕಾಮಗಾರಿಗಳನ್ನು ಆಯಾ ಗ್ರಾಮದ ಶಾಲೆಗಳ ಸಮೀಪ ನಿರ್ವಿುಸಿ.

Leave a Reply

Your email address will not be published. Required fields are marked *