ಪ್ರವಾಸಿ ತಾಣಗಳು ಪ್ಲಾಸ್ಟಿಕ್ ಮುಕ್ತ

ರಾಮನಗರ: ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರೇ ಎಚ್ಚರ! ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್​ಗಳನ್ನು ಎಸೆದರೆ ದಂಡ ಭರಿಸಬೇಕಾಗುತ್ತದೆ…!

ರಾಮನಗರ ಜಿಲ್ಲೆಯ 14 ಸುಪ್ರಸಿದ್ಧ ಪ್ರವಾಸಿ ತಾಣಗಳನ್ನು ಪ್ಲಾಸ್ಟಿಕ್ ಮುಕ್ತವೆಂದು ಘೋಷಿಸಲಾಗಿದ್ದು, 1986ರ ಪರಿಸರ ಸಂರಕ್ಷಣೆ ಕಾಯ್ದೆ ಪ್ರಕಾರ ಪರಿಸರಕ್ಕೆ ಹಾನಿಉಂಟು ಮಾಡುವ ಪ್ಲಾಸ್ಟಿಕ್ ಬ್ಯಾಗ್, ಕ್ಯಾರಿಬ್ಯಾಗ್, ಪೋಸ್ಟರ್, ಟೇಬಲ್ ಕವರ್, ಪ್ಲಾಸ್ಟಿಕ್ ಧ್ವಜ, ಥರ್ವಕೋಲ್ ಇನ್ನಿತರ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಲಾಗಿದೆ.

ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಚಾರಣ ಪ್ರಿಯರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಅಲ್ಲಿನ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಂಡು ಖುಷಿ ಪಡುತ್ತಾರೆ. ಪ್ರವಾಸಿ ತಾಣದಲ್ಲೇ ತಿಂಡಿ, ತಿನಿಸುಗಳನ್ನು ತಿಂದು ನಂತರ ಪ್ಲಾಸ್ಟಿಕ್ ಕವರ್​ಗಳನ್ನು ಅಲ್ಲಿಯೇ ಬಿಸಾಡಿ ಸ್ವಚ್ಛತೆ ಹಾಳು ಮಾಡಲಾಗುತ್ತಿದೆ.

ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವುದರಿಂದ ಪ್ಲಾಸ್ಟಿಕ್ ವಿಲೇವಾರಿ ತಲೆನೋವಾಗಿ ಪರಿಣಮಿಸಿದೆ. ಇದನ್ನು ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೊಷಿಸಿದೆ.

ಈ ತಾಣಗಳಿಗೆ ಪ್ಲಾಸ್ಟಿಕ್​ನಲ್ಲಿ ಸುತ್ತಿದ ತಿಂಡಿ-ತಿನಿಸುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ. ಪ್ರವೇಶ ದ್ವಾರದಲ್ಲೇ ಪ್ರವಾಸಿಗರನ್ನು ಪರಿಶೀಲಿಸಿ, ಪ್ಲಾಸ್ಟಿಕ್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಒಳ ಬಿಡಲಾಗುತ್ತಿದೆ.

ಜಿಲ್ಲಾ ಕೇಂದ್ರ ರಾಮನಗರದಲ್ಲಿರುವ ಐತಿಹಾಸಿಕ ಕ್ಷೇತ್ರ ರಾಮದೇವರ ಬೆಟ್ಟದ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿರುವ ಅರಣ್ಯ ಇಲಾಖೆ ಆ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವೆಂದು ಈಗಾಗಲೇ ಘೊಷಿಸಿದೆ.

ಜಾಗೃತಿಗೆ ಕ್ರಮ: ಪ್ಲಾಸ್ಟಿಕ್ ಬಳಸದಂತೆ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಪ್ಲಾಸ್ಟಿಕ್ ನಿಷೇಧ ಕುರಿತು ಅರಿವು ಮೂಡಿಸಲು ಗೃಹರಕ್ಷಕ ದಳ ಸಿಬ್ಬಂದಿಗೆ ತರಬೇತಿ ನೀಡಿ, ಪ್ರತಿ ಪ್ರವಾಸಿ ತಾಣಗಳಿಗೆ ಇಬ್ಬರಂತೆ ನಿಯೋಜಿಸಲಾಗಿದೆ. ಅವರನ್ನೇ ಪ್ರವಾಸಿ ಮಿತ್ರರೆಂದು ಸಂಬೋಧಿಸುವ ಮೂಲಕ ಗೌರವ ಹುದ್ದೆ ನೀಡಲಾಗಿದೆ. ಇವರಿಗೆ ಪ್ರವಾಸಿಗರ ಚಲನವಲನಗಳನ್ನು ಗಮನಿಸುವ ಜತೆಗೆ ಪ್ರವಾಸಿಗರ ರಕ್ಷಣೆ ಸೇರಿ ಮತ್ತಿತರ ಜವಾಬ್ದಾರಿ ವಹಿಸಲಾಗಿದೆ.

ಪ್ಲಾಸ್ಟಿಕ್​ವುುಕ್ತ ತಾಣಗಳಿವು: ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯಲ್ಲಿ ಒಟ್ಟು 56 ಪ್ರವಾಸಿ ತಾಣಗಳನ್ನು ಗುರುತಿಸಿದೆ. ಅದರಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಪ್ರಮುಖ 14 ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲಾಗಿದೆ. ರಾಮನಗರ ತಾಲೂಕಿನ ಐತಿಹಾಸಿಕ ಪ್ರಸಿದ್ಧ ರಾಮದೇವರ ಬೆಟ್ಟ, ಜಾನಪದ ಲೋಕ, ರೇವಣ್ಣಸಿದ್ದೇಶ್ವರ ಬೆಟ್ಟ, ವಂಡರ್​ಲಾ, ಇನೋವೇಟಿವ್ ಫಿಲ್ಮ್​ಸಿಟಿ, ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯ, ಸಾವನದುರ್ಗ, ತಿರುಮಲ ಶ್ರೀ ರಂಗನಾಥಸ್ವಾಮಿ ದೇವಾಲಯ, ಚನ್ನಪಟ್ಟಣ ತಾಲೂಕಿನ ಕೆಂಗಲ್ ಹನುಮಂತರಾಯ ದೇವಾಲಯ, ಬೇವೂರು ತಿಮ್ಮಪ್ಪನ ಬೆಟ್ಟ, ದೊಡ್ಡಮಳೂರು ಅಪ್ರಮೇಯ ಸ್ವಾಮಿ ದೇವಸ್ಥಾನ, ಕನಕಪುರ ತಾಲೂಕಿನ ಸಂಗಮ ಮತ್ತು ಮೇಕೆದಾಟು, ಕಬ್ಬಾಳಮ್ಮ ದೇವಾಲಯ ಮತ್ತು ಬೆಟ್ಟ, ವೆಂಕಟರಮಣ ದೇವಸ್ಥಾನ, ಚಿಕ್ಕ ತಿರುಪತಿಯನ್ನುಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೊಷಿಸಲಾಗಿದೆ.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ ರಾಜೇಂದ್ರ ಆದೇಶದ ಮೇರೆಗೆ ಜಿಲ್ಲೆಯ ಆಯ್ದ 14 ಪ್ರವಾಸಿ ತಾಣಗಳಲ್ಲಿ ಪರಿಸರ ಮತ್ತು ಪ್ಲಾಸ್ಟಿಕ್ ನಿಷೇಧ ಕುರಿತು ಅರಿವು ಮೂಡಿಸುವ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಪ್ರವಾಸಿ ಮಿತ್ರರು ಈ ಬಗ್ಗೆ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

| ಎಸ್. ಶಂಕರಪ್ಪ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ, ರಾಮನಗರ

Leave a Reply

Your email address will not be published. Required fields are marked *