ಸಿನಿಮಾ

ಪ್ರವಾಸಿಗರಿಗೆ ಪ್ರವೇಶ ಇಲ್ಲ : ಮತದಾನ ಪ್ರಮಾಣ ಹೆಚ್ಚಳ ಮಾಡಲು ಅರಣ್ಯ ಇಲಾಖೆ ಕ್ರಮ

ಮಡಿಕೇರಿ : ವಿಧಾನಸಭೆ ಚುನಾವಣೆ ನಡೆಯುವ ಮೇ 10 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಿರುವುದರಿಂದ ಯಾರೂ ಮತದಾನದಿಂದ ದೂರ ಉಳಿಯದಂತೆ ತಡೆಯಲು ಕುಶಾಲನಗರ ತಾಲೂಕಿನಲ್ಲಿರುವ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ.


ಮತದಾನ ಪ್ರಮಾಣ ಹೆಚ್ಚಳ ಮಾಡುವ ಉದ್ದೇಶದಿಂದ ಸರ್ಕಾರ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೂ ಪ್ರಜ್ಞಾವಂತ ಮತದಾರರು ರಜೆ ದಿನವನ್ನು ಮತದಾನ ಮಾಡಲು ಬಳಸಿಕೊಳ್ಳದೆ ಪ್ರವಾಸ ಮಾಡುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.


ಕೊಡಗು ರಕ್ಷಣಾ ವೇದಿಕೆ, ಕರ್ನಾಟಕ ಕಾವಲು ಪಡೆ ಮತ್ತಿತರ ಸಂಘಟನೆಗಳು ಮತದಾನದ ದಿನ ಪ್ರವಾಸಿ ತಾಣಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಕುಶಾಲನಗರದ ಕಾವೇರಿ ನಿಸರ್ಗಧಾಮ, ಹಾರಂಗಿಯ ಆನೆ ಕ್ಯಾಂಪ್ ಹಾಗೂ ದುಬಾರೆ ಆನೆ ಕ್ಯಾಂಪ್‌ಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.


ವಾರಾಂತ್ಯದಲ್ಲಿ ಜಿಲ್ಲೆಯ ಎಲ್ಲ ಲಾಡ್ಜ್ ಸ್ಟೇ ಹಾಗೂ ರೆಸಾರ್ಟ್‌ಗಳು ಪ್ರವಾಸಿಗರಿಂದ ಭರ್ತಿಯಾಗುತ್ತವೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ಪ್ರವಾಸೋದ್ಯಮ ಇಲ್ಲಿದೆ. ಹೀಗಾಗಿ ಐಟಿ, ಬಿಟಿ, ಖಾಸಗಿ ಕಂಪನಿಗಳ ಅಧಿಕಾರಿಗಳು, ನೌಕರರು ಚುನಾವಣೆ ರಜೆಯಲ್ಲಿ ಪ್ರವಾಸ ಹೊರಡುವುದರಿಂದ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಹೀಗಾಗಿ ಅರಣ್ಯ ಇಲಾಖೆ ಈ ನಿರ್ಧಾರ ಜೈಗೊಂಡಿದೆ.


ಕುಶಾಲನಗರದ ಅತಿಥಿ ಹೋಟೆಲ್‌ನಲ್ಲಿ ಮೇ 10ರಂದು ಮತದಾನ ಮಾಡಿ ಬಂದವರಿಗೆ ಹೋಟೆಲ್‌ನ ಆಹಾರದಲ್ಲಿ, ಲಾಡ್ಜ್ ಮತ್ತು ನಮ್ಮಲ್ಲಿ ಸಿಗುವ ಸೌಲಭ್ಯಗಳಿಗೆ ಶೇ.10 ರಿಯಾಯಿತಿ ನೀಡಲಾಗುವುದು ಎಂದು ಮಾಲೀಕ ಭಾಸ್ಕರ್ ಘೋಷಿಸಿದ್ದಾರೆ. ಅನ್ಯ ರಾಜ್ಯದವರಿಗೆ ರಿಯಾಯಿತಿಯೂ ಇಲ್ಲ, ಯಾವುದೇ ಷರತ್ತುಗಳು ಇಲ್ಲ.

ಶೇ.10 ರಿಯಾಯಿತಿ ನೀಡುವ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಪ್ರವಾಸಿ ಕೇಂದ್ರಗಳು ವರ್ಷದ 365 ದಿನವೂ ಇರುತ್ತೆ. ಆದರೆ ಮತದಾನ ಮಾಡಲು ಈಗ ಬಿಟ್ಟರೆ ಇನ್ನು 5 ವರ್ಷ ಕಾಯಬೇಕು. ಆದ್ದರಿಂದ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಭಾಸ್ಕರ್ ಮಾಲೀಕರು, ಅತಿಥಿ ಕಂಪರ್ಟ್ಸ್, ಕುಶಾಲನಗರ

ಸಂವಿಧಾನಬದ್ಧವಾದ ನಮ್ಮ ಹಕ್ಕು ಚಲಾಯಿಸಲು ಹಿಂಜರಿಕೆ ಏಕೆ? ಅಭ್ಯರ್ಥಿಗಳು ಇಷ್ಟವಿಲ್ಲದಿದ್ದರೆ ನೋಟಾಕ್ಕೆ ಮತ ನೀಡಬಹುದು. ಅದರ ಮೂಲಕವಾದರೂ ಮತದಾನ ಎನ್ನುವ ಹಬ್ಬದಲ್ಲಿ ಪ್ರತಿಯೊಬ್ಬ ನಾಗರಿಕನು ಪಾಲ್ಗೊಳ್ಳಲು ಮನವಿ. ಆದ್ದರಿಂದ ಜಿಲ್ಲೆಯ ಎಲ್ಲ ಪ್ರವಾಸಿ ಕೇಂದ್ರಗಳನ್ನು ಮುಚ್ಚಲು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದೇವೆ.
ಎಂ.ಕೃಷ್ಣ ಜಿಲ್ಲಾಧ್ಯಕ್ಷ, ಕರ್ನಾಟಕ ಕಾವಲು ಪಡೆ

ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಕುಶಾಲನಗರ ವ್ಯಾಪ್ತಿಯ ಎಲ್ಲ ಪ್ರವಾಸಿ ಕೇಂದ್ರಗಳಿಗೆ ಮೇ 10ರಂದು ಪ್ರವೇಶ ನಿಷೇಧಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ಹಕ್ಕು ಚಲಾಯಿಸಲು ಪಾಳಿ ಆಧಾರದಲ್ಲಿ ಕೆಲಸ ನಿರ್ವಹಿಸಲು ಆದೇಶಿಸಲಾಗಿದೆ.
> ಶಿವರಾಮ್ ಆರ್‌ಎಫ್‌ಒ ಕುಶಾಲನಗರ ವಲಯ

Latest Posts

ಲೈಫ್‌ಸ್ಟೈಲ್