ಪ್ರವಾಸದಲ್ಲಿಯ ಜೀವನದರ್ಶನವೇ ಬರವಣಿಗೆಗೆ ಪ್ರೇರಣೆ

| ನೇಮಿಚಂದ್ರ ವಿಜ್ಞಾನಿ, ಲೇಖಕಿ

ಖ್ಯಾತ ಲೇಖಕಿ, ಚಿಂತಕಿ, ಮಹಿಳಾವಾದಿ ನೇಮಿಚಂದ್ರ ಮಹಿಳಾ ಚಿಂತನೆಯ ಬರಹಗಳಲ್ಲದೆ ವಿಜ್ಞಾನ-ತಂತ್ರಜ್ಞಾನ ಬರಹಗಳನ್ನು ಕನ್ನಡದಲ್ಲಿ ತುಂಬ ಸರಳವಾಗಿ ಬರೆದು ಓದುಗರಿಗೆ ತಲುಪಿಸುವಲ್ಲಿ ಯಶಸ್ವಿಯಾದವರು. ವೈಮಾನಿಕ ರಂಗದ ಮಹಿಳಾ ಪರಂಪರೆ ಮತ್ತು ಸಾಧನೆ ಇವರ ಆಸಕ್ತಿಯ ವಿಷಯ. ವೃತ್ತಿಯಿಂದ ಇಂಜಿನಿಯರ್ ಆಗಿರುವ ಇವರು ಪ್ರಸ್ತುತ ಎಚ್.ಎ.ಎಲ್ ಸಂಸ್ಥೆಯ ಚೀಫ್ ಡಿಸೈನರ್(ಮಾನವ ರಹಿತ ವಿಮಾನಗಳು). ನೇಮಿಚಂದ್ರ ಅವರಿಗೆ ಈ ಬಾರಿ ಕನ್ನಡ ಸಾಹಿತ್ಯ ಅಕಾಡೆಮಿ ಕೊಡಮಾಡುವ ಜೀವಮಾನದ ಪ್ರಶಸ್ತಿ ಹಾಗೂ ರಾಜ್ಯ ಸರ್ಕಾರ ಕೊಡುವ ಅತ್ತಿಮಬ್ಬೆ ಪ್ರಶಸ್ತಿಗಳು ಸಂದಿವೆ. ಈ ಹಿನ್ನೆಲೆಯಲ್ಲಿ ಅವರೊಂದಿಗಿನ ಮಾತುಕತೆ ಇಲ್ಲಿದೆ.

ಸಂದರ್ಶನ: ಭಾರತಿ ಹೆಗಡೆ

ನೀವು ಮೂಲತಃ ಇಂಜಿನಿಯರ್. ಕನ್ನಡ ಸಾಹಿತ್ಯದ ಒಲವು ಮೂಡಿದ್ದು ಹೇಗೆ?

ನನ್ನ ತಂದೆ ಪೊ›. ಜಿ. ಗುಂಡಣ್ಣ ಕನ್ನಡದ ಪ್ರಾಧ್ಯಾಪಕರು ಮತ್ತು ಲೇಖಕರು. ಮನೆಯ ತುಂಬಾ ಸಾವಿರ ಸಾವಿರ ಪುಸ್ತಕಗಳನ್ನು ಕೊಂಡು ತುಂಬಿದ್ದರು. ನನ್ನನ್ನು ಲೇಖಕಿಯಾಗಿ ಬೆಳೆಸಿದ್ದು ಈ ಸಾವಿರ ಸಾವಿರ ಪುಸ್ತಕಗಳು. ಅವುಗಳಲ್ಲಿ ಅರ್ಧ ಕೂಡ ಓದಿಲ್ಲದ ನಾನೂ ಲೇಖಕಿಯಾದೆ. ಕುವೆಂಪು, ಬೇಂದ್ರೆ, ಬಿ.ಎಂ.ಶ್ರೀ ಅವರ ಕವನಗಳನ್ನು ಕೇಳುತ್ತಾ ನಾನು ಬೆಳೆದೆ. ಶೇಕ್ಸ್​ಪಿಯರ್, ಬರ್ನಾಡ್ ಶಾ, ಬ್ರಾಂಟೆ, ಶೆಲ್ಲಿ, ಕೀಟ್ಸ್, ವರ್ಡ್ಸ್​ವರ್ತ್ ಎಲ್ಲರ ಪರಿಚಯ ಅಪ್ಪನ ಈ ಗ್ರಂಥಾಲಯದಲ್ಲಿ ನನಗಾಗಿತ್ತು. ಇಂತಹ ಪರಿಸರದಲ್ಲಿ ಬೆಳೆದ ನನಗೆ ಬರೆಯದಿರಲು ಸಾಧ್ಯವೇ ಇರಲಿಲ್ಲ.

ಸಾಹಿತ್ಯ ಮತ್ತು ಸ್ತ್ರೀವಾದದ ಕುರಿತಾದ ಚಿಂತನೆ ರೂಪುಗೊಳ್ಳುವಂಥ ವಾತಾವರಣ ನಿಮಗೆ ಬಾಲ್ಯದಿಂದಲೂ ಒದಗಿತ್ತೆ?

ನನ್ನ ಬರಹದ ಮೇಲೆ ತೀವ್ರವಾಗಿ ಪ್ರಭಾವ ಬೀರಿರುವ ಅಂಶ ಸ್ತ್ರೀವಾದ. ಸ್ತ್ರೀವಾದ ಎಂದರೇನು ಎಂದು ತಿಳಿಯುವ ಮೊದಲೇ ನಾನು ಸ್ತ್ರೀವಾದಿಯಾಗಿದ್ದೆ. ಸ್ತ್ರೀವಾದ ಮಾನವತಾವಾದಕ್ಕಿಂತ ಭಿನ್ನವಲ್ಲ. ‘ಹುಟ್ಟಿನಿಂದಲೇ ಒಂದು ಗುಂಪು ಇನ್ನೊಂದು ಗುಂಪಿಗಿಂತ ಶ್ರೇಷ್ಠ’ ಎಂಬ ಮೂಲ ಶ್ರೇಣೀಕೃತ ವ್ಯವಸ್ಥೆಯನ್ನೇ ಸ್ತ್ರೀವಾದವೂ ತಿರಸ್ಕರಿಸುತ್ತದೆ. ಅದು ಒಂದು ಜಾತಿ ಇನ್ನೊಂದು ಜಾತಿಗಿಂತ ಶ್ರೇಷ್ಠ ಎಂಬ ಭಾವನೆಯಾಗಿರಬಹುದು, ಬಿಳಿಯರು ಕರಿಯರಿಗಿಂತ ಉತ್ತಮ ಎಂಬ ವಾದವಾಗಿರಬಹುದು, ಗಂಡು ಹೆಣ್ಣಿಗಿಂತ ಮೇಲು ಎಂಬ ಭಾವನೆಯಾಗಿರಬಹುದು. ಆದರೆ ಜಾತಿವಾದ ಜನಾಂಗವಾದ ವರ್ಗವಾದಗಳಂತೆ, ಶೋಷಕರ ಶೋಷಿತರ ಸ್ಪಷ್ಟ ವಿಭಾಗವನ್ನು ಸ್ತ್ರೀವಾದದಲ್ಲಿ ಗುರುತಿಸುವುದು ಕಷ್ಟ. ಕಾರಣ ಸ್ತ್ರೀಯರೆಲ್ಲರೂ ಸ್ತ್ರೀವಾದಿಗಳಲ್ಲ, ಹಾಗೆಯೇ ಪುರುಷರೆಲ್ಲರೂ ಪುರುಷಪ್ರಾಧಾನ್ಯತೆಯನ್ನು ಒಪ್ಪಿಕೊಂಡವರಲ್ಲ.

ಬಾಲ್ಯದ ವಾತಾವರಣವನ್ನು ನೆನಪಿಸಿಕೊಳ್ಳಬೇಕು ಎಂದರೆ, ನನ್ನಮ್ಮ ಅಪ್ಪಟ ಅನಕ್ಷರಸ್ಥೆ. ಅಪ್ಪ ಕಾಲೇಜಿನ ಪೊ›ಫೆಸರ್. ಈ ತಂದೆ ತಾಯಿಯ ದಾಂಪತ್ಯದ ಸೋಲು-ಗೆಲವು, ಯಶಸ್ಸನ್ನು ನಿರ್ಧರಿಸುವ ಉದ್ಧಟತನಕ್ಕೆ ನಾನು ಹೋಗದಿದ್ದರೂ, ಅಲ್ಲೇನೋ ‘ಮಿಸ್ಸಿಂಗ್’ ಇತ್ತು. ಅದನ್ನು ಬೌದ್ಧಿಕ ಅಸಮಾನತೆ ಎನ್ನಲಾರೆ. ಅಮ್ಮನ ಬುದ್ಧಿಮತ್ತೆ, ವಿದ್ಯೆಯ ಗಂಧವಿಲ್ಲದಿದ್ದರೂ ಚುರುಕಿತ್ತು. ಯೋಚಿಸಬಲ್ಲಾಕೆ. ಆದರೂ ‘ಅವಿದ್ಯಾವಂತಳು. ನಿನಗೇನು ಅರ್ಥವಾಗುತ್ತೆ, ಸುಮ್ಮನಿರು’ ಎಂಬ ಅಸಡ್ಡೆಯ ಮಾತುಗಳನ್ನು ಪದೇಪದೆ ಕೇಳುತ್ತಾ ಬೆಳೆಯುವಾಗ, ಗಂಡು-ಹೆಣ್ಣಿನ ಸಂಬಂಧದಲ್ಲಿ ಸಮಾನತೆಗೆ ವಿದ್ಯೆ, ಆರ್ಥಿಕ ಸ್ವಾತಂತ್ರ್ಯ ಅತಿ ಮುಖ್ಯವೆಂದೇನೋ ಎಂದು ನನ್ನ ಎಳೆ ಮನಸ್ಸಿಗೆ, ಮಿದುಳಿಗೆ ಅನಿಸಿರಬೇಕು. ‘ಚೆನ್ನಾಗಿ ಓದಿ, ರ್ಯಾಂಕ್, ಫಸ್ಟ್ ಬರ್ಬೆಕು. ಈ ಕಸಮುಸುರೆಯಲ್ಲೇನಿದೆ?’ ಎಂದು ಅಡುಗೆ ಮನೆಗೆ ಹೋಗಿಸದೆ, ಕೂತಲ್ಲಿಗೆ ತಿಂಡಿ-ಊಟ ತಂದಿಟ್ಟು ಓದಲು ಹುರಿದುಂಬಿಸಿದ ಅಮ್ಮ, ತನ್ನ ಅನುಭವ ನಮ್ಮಲ್ಲಿ ಪುನರಾವರ್ತಿಸಬಾರದೆಂದು ಬಯಸಿದ್ದಳು ಎಂದು ಕಾಣುತ್ತದೆ. ಇವೆಲ್ಲವೂ ಸ್ತ್ರೀವಾದದತ್ತ ನನ್ನ ಮನಸ್ಸು ತುಡಿಯಲು ಕಾರಣವಾಗಿರಬಹುದು.

ಪ್ರವಾಸ ಕಥನ, ಕತೆ, ಕಾದಂಬರಿ ಮುಖ್ಯವಾಗಿ ಮಹಿಳಾ ವಿಜ್ಞಾನಿಗಳ ಜೀವನಚರಿತ್ರೆ, ಹೀಗೆ ಎಷ್ಟೊಂದು ವಿಸ್ತಾರವಿದೆ ನಿಮ್ಮ ಬರವಣಿಗೆಗೆ. ಇದಕ್ಕೆಲ್ಲ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತೀರಿ?

ನನಗೆ ಆರಾಮ ಕುರ್ಚಿಯ ಬರವಣಿಗೆಯಲ್ಲಿ ಆಸಕ್ತಿ ಇಲ್ಲ. ನನ್ನ ಬರಹಗಳಿಗಾಗಿ ನಾನು ಬಹಳಷ್ಟು ಅಲೆದಾಡಿದ್ದೇನೆ. ಭಾರತದ ಮಹಿಳೆಯರಿಗೆ ವೈದ್ಯರಂಗದ ಬಾಗಿಲು ತೆರೆಸಿದ ಮೇರಿ ಶರ್ಲಿಯನ್ನು ಹುಡುಕಿ ಮೂರು ಬಾರಿ ಮದ್ರಾಸಿಗೆ ಹೋಗಿದ್ದೆ. ಜಲಿಯನ್​ವಾಲಾ ಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮನಾದ ಪತಿಯ ಹೆಣಕ್ಕೆ ಹೆಗಲು ಕೊಟ್ಟು ಹೊತ್ತು ತಂದ ಸ್ವಾಭಿಮಾನಿ ಮಹಿಳೆ ಅತ್ತರ್ ಕೌರ್ ಹುಡುಕಿ ಅಮೃತಸರ ತಲುಪಿದ್ದೆ. ಆಕೆಯ ಮಗ ಭಾರತಿ ಅವರನ್ನು ಭೇಟಿಯಾಗಿದ್ದೆ. ಕೌಟುಂಬಿಕ ಕ್ರೌರ್ಯದಿಂದ ಜಿಗಿದು ಹೊರಬಂದು ನಲವತ್ತರ ವಯಸ್ಸಿನಲ್ಲಿ ವಿದ್ಯಾಭ್ಯಾಸ ಮಾಡಿ, ಲಾ ಓದಿ, ಸುಪ್ರಸಿದ್ಧ ನ್ಯಾಯವಾದಿಯಾದ ಫ್ಲೇವಿಯಾರ ಜೀವನಚರಿತ್ರೆಯನ್ನು ಪರಿಚಯಿಸಲು ಮುಂಬಯಿಗೆ ಮೂರ್ನಾಲ್ಕು ಬಾರಿ ಅಲೆದಾಡಿದೆ. ಈ ಅಲೆದಾಟಗಳೆಲ್ಲ ನನಗೆ ಬಲುಪ್ರಿಯವಾಗಿವೆ. ಮಹಿಳಾ ವಿಜ್ಞಾನಿಗಳ, ಮಹಿಳಾ ವೈಮಾನಿಕೆಯರ ಶತಶತಮಾನಗಳ ಚರಿತ್ರೆಯನ್ನು ಸಂಗ್ರಹಿಸುವ ಬಯಕೆ ನನ್ನನ್ನು ದೇಶ ವಿದೇಶಗಳ ಮೂಲೆಮೂಲೆಗೆ ಕೊಂಡೊಯ್ದಿತು. ಮಹಿಳಾ ಸಾಧಕಿಯರ ಪರಂಪರೆಯನ್ನು ಹುಡುಕಿ ಹೊರಟ ನನ್ನ ವೈಯಕ್ತಿಕ ಪ್ರವಾಸಗಳ ಅನುಭವ ‘ಪ್ರವಾಸ ಸಾಹಿತ್ಯ’ವಾಗಿಯೂ ಹೊರಬಂದಿತು.

ವರ್ಷ ವರ್ಷಗಳು ಕೂಡಿಟ್ಟ ಕುಡಿಕೆ ಹಣದಲ್ಲಿ ಕನಸಿನ ಪಯಣದ ತಯಾರಿ ಮಾಡಿದ್ದೆ. ಹೇಮಲತಾ ಮಹಿಷಿಯವರು ನನ್ನ ಯುರೋಪ್ ಪ್ರವಾಸದ ಸಂಗಾತಿಯಾದದ್ದು ಮತ್ತು ಮಾಲತಿಯವರು ಪೆರುವಿನ ಪ್ರವಾಸಕ್ಕೆ ಜೊತೆ ನೀಡಿದ್ದು ನನ್ನ ಅದೃಷ್ಟ. ಬ್ರಾಂಟೆಯ ‘ಮೂರ್’ಗಳಲ್ಲಿ ಅಲೆದು ಬಂದೆ, ಪ್ರಥಮ ಸ್ತ್ರೀವಾದಿ ಲೇಖಕಿ ಆಫ್ರಾಬೆನ್​ಳ ಹಳ್ಳಿಯನ್ನು ಹುಡುಕಿ ಹೋದೆ, ಆನ್ ಫ್ರಾಂಕ್​ಳ ಗುಪ್ತಗೃಹವನ್ನು ಕಂಡು ಬಂದೆ. ರೈಟ್ಸ್ ಸಹೋದರರು ಮೊಟ್ಟಮೊದಲ ವಿಮಾನ ಹಾರಿಸಿದ ಕಿಟ್ಟಿ ಹಾಕ್​ನ ಕಿಲ್ ಡೆವಿಲ್ ಗುಡ್ಡದ ಮೇಲೆ ನಿಂತೆ. ಕೀಟ್ಸ್​ನ ಕಾವ್ಯರಾತ್ರಿಗಳು ಕಳೆದ ಹ್ಯಾಂಪ್​ಸ್ಟೆಡ್ ಹೀತ್, ವರ್ಡ್ಸ್​ವರ್ತ್​ನ ಲೇಕ್ ಡಿಸ್ಟ್ರಿಕ್ಟ್, ಫ್ಲಾರೆನ್ಸ್ ನೈಟಿಂಗೇಲ್​ಳ ಆಸ್ಪತ್ರೆ, ಐನ್​ಸ್ಟೈನ್ ಅವರ ಮನೆ, ವ್ಯಾನ್ ಗೋನ ಬಿಸಿಲು ಹಳದಿ ಸೂರ್ಯಕಾಂತಿಗಳು- ಇವೆಲ್ಲವೂ ನನ್ನ ಪಯಣದ ಮರೆಯಲಾಗದ ಭಾಗಗಳಾದವು. ತನ್ನ ಬದುಕಿನ ನಲವತ್ತು ವರ್ಷಗಳನ್ನು ಪೆರುವಿನ ಅದ್ಭುತ ನಾಸ್ಕಾ ಚಿತ್ರಗಳ ಅಧ್ಯಯನದಲ್ಲಿ ಕಳೆದ ವಿಜ್ಞಾನಿ ಮರಿಯಾ ರೇಕಿಯನ್ನು ಹುಡುಕಿ, ದಕ್ಷಿಣ ಅಮೆರಿಕದ ಪೆರುವಿನ ಆ ಸಣ್ಣ ಹಳ್ಳಿಯನ್ನು ತಲುಪಿದ್ದೆ. ಆಂಡೀಸ್ ಪರ್ವತ ಶಿಖರಗಳಲ್ಲಿ ಅಲೆದು, ಪೆರುವಿನ ಪವಿತ್ರ ಕಣಿವೆಗಳಲ್ಲಿ ಇಳಿದು, ಅಮೆಜಾನ್ ಕಾಡುಗಳಲ್ಲಿ ರಾತ್ರಿ ಕಳೆದು, ಅಮೆಜಾನ್ ನದಿಯ ಮೇಲೆ, ಪೆರುವಿನಿಂದ ಬ್ರೆಜಿಲ್​ಗೆ, 28 ಗಂಟೆಗಳ ಕಾಲ ತೇಲಿ ಹೋದ ಅದ್ಭುತ ಅನುಭವ ನನ್ನದಾಯಿತು. ಈ ಎಲ್ಲ ಅನುಭವಗಳು ನನ್ನ ಬರಹದ ವಸ್ತುವಾದವು. ಸಾಧಕ ಮಹಿಳೆಯರನ್ನು ಹುಡುಕಿ ಹೋದ ನನ್ನ ಪ್ರವಾಸಗಳು ಅದ್ಭುತದ ಅನುಭವಗಳನ್ನು ನೀಡಿದವು. ನನ್ನ ಬದುಕು ಮತ್ತು ಪಯಣ ಜೊತೆ ಜೊತೆಯಾಗಿ ಸಾಗಿದೆ. ನನ್ನ ಪ್ರವಾಸದಲ್ಲಿಯ ಜೀವನದರ್ಶನ ನನಗೆ ಅಮೂಲ್ಯವೆನಿಸಿದೆ. ನಾನು ಕಂಡ ಜನರನ್ನು, ಜಗತ್ತನ್ನು ಪ್ರತಿಬಿಂಬಿಸುವ ಸಣ್ಣ ಪ್ರಯತ್ನ ನನ್ನ ಬರಹದ್ದಾಗಿದೆ.

ನಿಮ್ಮ ವೃತ್ತಿಯಲ್ಲಿ ಬಂದಿರುವಂಥ ಸವಾಲುಗಳ ಕುರಿತು ಹೇಳ್ತೀರಾ?

ನನ್ನ ವೃತ್ತಿ ನನಗೆ ಅತ್ಯಂತ ತೃಪ್ತಿ ನೀಡಿದೆ. ಮೈಸೂರಿನಲ್ಲಿ ಬಿ.ಇ. ಮುಗಿಸಿ, ಬೆಂಗಳೂರಿನ ಟಾಟಾ ಇನ್​ಸ್ಟಿಟ್ಯೂಟ್​ನಲ್ಲಿ ಎಂ.ಎಸ್. ಪದವಿ ಪಡೆದ ನಂತರ, ವಿಮಾನ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದೆ. ಆಗಷ್ಟೆ ದೇಶೀಯ ವಿನ್ಯಾಸದ ಮೊಟ್ಟ ಮೊದಲ ಹೆಲಿಕಾಪ್ಟರ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಪ್ರಾಜೆಕ್ಟ್ ಆರಂಭವಾಗಿತ್ತು. ಭಾರತದ ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ ‘ಧೃವ’, ಡ್ರಾಯಿಂಗ್ ಬೋರ್ಡಿನ ಗೀಟು ಗೆರೆಗಳಿಂದ ಮೇಲೆದ್ದು, ಮೈದುಂಬಿ ರೂಪು ತಳೆದು, ಮೆಲ್ಲನೆ ನೆಲದಿಂದ ಕೆಲವೇ ಅಡಿ ಹಾರಿದ ಮೊದಲ ಹಾರಾಟದಿಂದ ಹಿಡಿದು, ಜಗತ್ತಿನ ಅತಿ ಎತ್ತರದ ಹೆಲಿಪ್ಯಾಡ್​ನಲ್ಲಿ ಇಳಿಯುವವರೆಗಿನ ರೋಮಾಂಚನದ ಹಾದಿಯಲ್ಲಿ ಭಾಗಿಯಾದ ಖುಷಿ ನನ್ನದು. ನನ್ನ ವೃತ್ತಿ ನನಗೆ ಎಲ್ಲವನ್ನೂ ನೀಡಿದೆ.

ಹೆಲಿಕಾಪ್ಟರ್ ಸಂಶೋಧನೆ ಮತ್ತು ವಿನ್ಯಾಸ ವಿಭಾಗದಲ್ಲಿ ‘ಏವಿಯಾನಿಕ್ಸ್’, ‘ಮಿಷಿನ್ ಸೆನ್ಸರ್’ ಮತ್ತು ‘ವೆಪನ್ ಸಿಸ್ಟಮ್್ಸ’ ತಂಡಗಳಿಗೆ ಗ್ರೂಪ್ ಲೀಡರ್ ಆದ ನಾನು, ‘ಫಿಫ್ತ್ ಜೆನರೇಷನ್ ಫೈಟರ್ ಏರ್​ಕ್ರಾಫ್ಟ್’ನ ಹೆಡ್ ಆಫ್ ಡಿಪಾರ್ಟ್ ಮೆಂಟ್ ಆಗಿ ವಿಮಾನ ಸಂಶೋಧನೆ ಮತ್ತು ವಿನ್ಯಾಸ ವಿಭಾಗಕ್ಕೆ ಬಂದೆ. ಇಲ್ಲಿ ಜನರಲ್ ಮ್ಯಾನೇಜರ್ ಗ್ರೇಡ್​ಗೆ ಬಡ್ತಿಯಾಗಿ, ಇದೀಗ ‘ಅನ್​ವುನ್ಯಾನ್ಡ್ ಏರಿಯಲ್ ವೆಹಿಕಲ್ಸ್’ ಅಂದರೆ ಮಾನವರಹಿತ ವಾಯು ಯಂತ್ರಗಳ ಚೀಫ್ ಡಿಸೈನರ್ ಆಗಿರುವೆ. ಶಾಲೆ ಕಾಲೇಜುಗಳಿಗೆ ಹೋದಾಗೆಲ್ಲ ಅನೇಕರು ಹೆಣ್ಣುಮಕ್ಕಳಿಗೆ ವೈಮಾನಿಕ ರಂಗದಲ್ಲಿ ಅವಕಾಶ ಇದೆಯೆ ಎಂದು ಕೇಳುತ್ತಾರೆ. ಅವರಿಗೆ ವಿಮಾನ ಕಾರ್ಖಾನೆಯಲ್ಲಿಯ ನನ್ನ ಹೆಲಿಕಾಪ್ಟರ್, ವಿಮಾನ ಮತ್ತು ಮಾನವರಹಿತ ವಾಯುಯಂತ್ರಗಳ ಅದ್ಭುತ ಅನುಭವ ಮತ್ತು ಅವಕಾಶಗಳ ಬಗ್ಗೆ ಹೇಳುತ್ತೇನೆ. ವೈಮಾನಿಕ ರಂಗಕ್ಕೆ ಹೆಚ್ಚು ಹೆಚ್ಚು ಹೆಣ್ಣುಮಕ್ಕಳು ಪ್ರವೇಶಿಸಬೇಕು ಎಂಬುದು ನನ್ನ ಆಸೆ. ನನಗೆ ವಿಜ್ಞಾನ ತಂತ್ರಜ್ಞಾನದ ಮುಂಚೂಣಿಯಲ್ಲಿ ದುಡಿಯುವ ಈ ಅವಕಾಶ ಬಹಳ ಖುಷಿ ಕೊಟ್ಟಿದೆ. ನನ್ನ ಕಾರ್ಖಾನೆಯ ಕೆಲಸ, ನನ್ನ ಬರವಣಿಗೆಗೆ, ಸಾಹಿತ್ಯದ ಚಟುವಟಿಕೆಗಳಿಗೆ ಅತ್ಯಲ್ಪ ಸಮಯ ಉಳಿಸುತ್ತದೆ, ಆದರೆ ನನ್ನ ಬದುಕಿಗೆ ಮತ್ತು ಬರಹಕ್ಕೆ ಬೇರೆ ಬೇರೆ ಆಯಾಮಗಳನ್ನು ತಂದುಕೊಟ್ಟದ್ದು ಈ ನನ್ನ ಕೆಲಸವೆ.

ಸಾಹಿತ್ಯ ಮತ್ತು ವಿಜ್ಞಾನ ಎರಡರ ಬಗೆಗೂ ಒಟ್ಟಿಗೇ ಆಸಕ್ತಿ ತಮಗೆ. ಇದು ಹೇಗೆ ಸಾಧ್ಯವಾಯಿತು?

ವಿಜ್ಞಾನಿ ಮತ್ತು ಲೇಖಕಿ ಎರಡೂ ಪಾತ್ರಗಳೂ ನನ್ನ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳು. ನನ್ನ ವೃತ್ತಿ ನನಗೆ ತಂತ್ರಜ್ಞಾನದ ಮುಂಚೂಣಿಯಲ್ಲಿ ದುಡಿಯುವ ಅಪೂರ್ವವಾದ ಅನುಭವಗಳನ್ನು ನೀಡಿದೆ. ಇಂಜಿನಿಯರ್ ಆಗುವ ಮೊದಲೇ ಲೇಖಕಿಯಾಗಿದ್ದೆ. ನಿವೃತ್ತಳಾದ ಮೇಲೆ ವೈಮಾನಿಕ ರಂಗದ ವಿಜ್ಞಾನಿಯ ಪಾತ್ರ ಕೊನೆಗೊಳ್ಳುತ್ತದೆ. ಆದರೆ ಬದುಕಿನ ಕೊನೆಯ ದಿನದವರೆಗೂ ನಾನು ಲೇಖಕಿಯಾಗಿ ಮುಂದುವರಿಯುವುದು ಖಂಡಿತ.

Leave a Reply

Your email address will not be published. Required fields are marked *