ಪ್ರವಾದಿಯವರ ಬೋಧನೆಗಳು

ಇಸ್ಲಾಂನ ಸಂಸ್ಥಾಪಕರಾದ ಪ್ರವಾದಿ (ಸ) ಮುಹಮ್ಮದ್ ಅವರ ಪ್ರಕಾರ – ಇಸ್ಲಾಂ ಧರ್ಮದ ತಳಹದಿಯು ಐದು ವಿಷಯಗಳಲ್ಲಿ ಅಡಕವಾಗಿದೆ. ಒಂದು, ಅಲ್ಲಾಹನ ಹೊರತು ಬೇರಾರೂ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ಸಾಕ್ಷ್ಯವನ್ನು ನುಡಿಯುವುದು. ಎರಡು, ದಿನಕ್ಕೆ ಐದು ಬಾರಿ ತಪ್ಪದೆಯೇ ನಮಾಜು ಮಾಡುವುದು. ಮೂರು, ಝುಕಾತ್ (ದಾನ) ನೀಡುವುದು. ನಾಲ್ಕು, ಹಜ್ ಯಾತ್ರೆ ಮಾಡುವುದು. ಐದು, ರಮ್ಜಾನ್ ತಿಂಗಳಿನಲ್ಲಿ ಮೂವತ್ತು ದಿನಗಳ ಕಾಲ ಉಪವಾಸವನ್ನು ಆಚರಿಸುವುದು. ಬರಡಾದ ಬಂಜರು ಭೂಮಿಯ ಮೇಲೆ ಎಷ್ಟು ಪ್ರಮಾಣದಲ್ಲಿ ಮಳೆ ಸುರಿದರೂ ಪ್ರಯೋಜನ ಆಗುವುದಿಲ್ಲ. ಹಾಗೆಯೇ ಪ್ರವಾದಿಗಳು ತಿಳಿಸುವ ಸತ್ಯಸಂಗತಿಗಳು, ಬೋಧಿಸುವ ಜ್ಞಾನ ಮತ್ತು ತೋರಿಸುವ ಸನ್ಮಾರ್ಗದಿಂದ ಕಠಿಣ ಹೃದಯಗಳಿಗೆ ಯಾವ ಪ್ರಯೋಜನವೂ ಉಂಟಾಗುವುದಿಲ್ಲ. ಪ್ರವಾದಿಗಳೇ ಹೀಗೆಂದು ನೊಂದು ನುಡಿದಿದ್ದಾರೆ. ಏಕೆಂದರೆ ಕಠಿಣ ಹೃದಯಿಗಳಾದವರು ಸದ್ಗುಣಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನೇ ಕಳೆದುಕೊಂಡುಬಿಟ್ಟಿರುತ್ತಾರೆ.

ಗೋರಿಗಳನ್ನು ಪೂಜಿಸುವುದು, ಗೋರಿಗಳ ಎದುರು ನಿಂತು ಸಾಷ್ಟಾಂಗ ಎರಗುವುದು – ಇವೆಲ್ಲ ಇಸ್ಲಾಂನ ಏಕದೇವ ಪೂಜಾವಿಶ್ವಾಸಕ್ಕೆ ವಿರುದ್ಧವಾದುದು. ಆದ್ದರಿಂದ ಗೋರಿಗಳನ್ನು ಗಾರೆ ಅಥವಾ ಸಿಮೆಂಟಿನಿಂದ ಜೋಪಾನ ಮಾಡುವುದು, ಅವುಗಳ ಮೇಲೆ ಕುಳಿತುಕೊಳ್ಳುವುದು, ಕಟ್ಟಡ ನಿರ್ವಿುಸುವುದು ಇವು ಸರಿಯಾದುದಲ್ಲ.

ಪ್ರವಾದಿ ಮರಣೋತ್ತರ ಜೀವನದ ಬಗ್ಗೆ ಹೀಗೆ ಹೇಳಿದ್ದಾರೆ; ‘ಸತ್ತವನ ಜೊತೆಗೆ ಅವನ ಸಂಪತ್ತು ಮತ್ತು ಮನೆಯ ಸದಸ್ಯರೇನೂ ಹೋಗುವುದಿಲ್ಲ. ಅವನ ಕರ್ಮಗಳು ಮಾತ್ರ ಜೊತೆಗೆ ಹೋಗುತ್ತವೆ. ಆದ್ದರಿಂದ ಮನುಷ್ಯನು ಯಾವಾಗಲೂ ಒಳ್ಳೆಯ ಕರ್ಮಗಳನ್ನು ಮಾಡಬೇಕು. ಆ ಮೂಲಕ ಪರಲೋಕವು ಸುಖಮಯವಾಗುವಂತೆ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ತಾತ್ಕಾಲಿಕ ಸುಖದ ಹಿಂದೆ ಬೀಳಬಾರದು.’