ಪ್ರಯಾಣಿಕರ ದೋಣಿಗೆ ಮೀನುಗಾರಿಕಾ ಬೋಟ್ ಡಿಕ್ಕಿ

ಪ್ರಯಾಣಿಕರನ್ನು ಹತ್ತಿಸುವ ವೇಳೆ ಘಟನೆ *ತಪ್ಪಿದ ಭಾರಿ ದುರಂತ

ವಿಜಯವಾಣಿ ಸುದ್ದಿಜಾಲ ಮಂಗಳೂರು
ತೋಟಬೆಂಗ್ರೆ ಹಾಗೂ ಬಂದರು ಮಧ್ಯೆ ಪ್ರಯಾಣಿಕರನ್ನು ಸಾಗಿಸುವ ದೋಣಿಗೆ ಮೀನುಗಾರಿಕಾ ಟ್ರಾಲ್ ಬೋಟ್ ಬುಧವಾರ ಸಾಯಂಕಾಲ ಡಿಕ್ಕಿಯಾಗಿದೆ. ಪ್ರಯಾಣಿಕರನ್ನು ಹತ್ತಿಸುವ ವೇಳೆ ತೀರದಲ್ಲಿ ಘಟನೆ ನಡೆದ ಕಾರಣ ಸಂಭಾವ್ಯ ದುರಂತ ತಪ್ಪಿದೆ.
ಬೆಂಗ್ರೆ ಮಹಾಜನ ಸಭಾ ನಡೆಸುತ್ತಿದ್ದ ತೋಟಬೆಂಗ್ರೆಗೆ ತೆರಳುವ ಬೋಟ್ ಬಂದರಿನಲ್ಲಿ ಪ್ರಯಾಣಿಕರನ್ನು ಹತ್ತಿಸುವ ಜೆಟ್ಟಿಯಲ್ಲಿ ನಿಂತಿತ್ತು. ಕೆಲವು ಪ್ರಯಾಣಿಕರು ಹತ್ತಿ ಕುಳಿತಿದ್ದರು. ಅಷ್ಟರಲ್ಲಿ ಮೀನುಗಾರಿಕೆಯ ‘ಸಾಹಿಲ್ ಹಸನ್’ ಸ್ಟೀಲ್ ಟ್ರಾಲ್ ಬೋಟ್ ಏಕಾಏಕಿ ಬಂದು ಫೆರ‌್ರಿ ಬೋಟ್‌ಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಬೋಟ್‌ನಲ್ಲಿದ್ದ ನಳಿನಿ ಎಂಬುವರು ನೀರಿಗೆ ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಯಾದವ್ ಹಾಗೂ ಇತರರು ಅವರನ್ನು ರಕ್ಷಿಸಿದ್ದಾರೆ. ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನೀರಿನ ಮಧ್ಯೆ ಘಟನೆ ನಡೆದಿದ್ದರೆ ದೊಡ್ಡ ದುರಂತ ಸಂಭವಿಸುವ ಸಾಧ್ಯತೆಯಿತ್ತು.
ಟ್ರಾಲ್‌ಬೋಟ್ ನಾವಿಕ ಕುಡಿದ ಮತ್ತಿನಲ್ಲಿ ಬೋಟ್ ಚಲಾಯಿಸಿದ್ದು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಪ್ರಯಾಣಿಕರಿಗೆ ಸಂಕಷ್ಟ:  ತೋಟಬೆಂಗ್ರೆಯನ್ನು ಮಂಗಳೂರು ನಗರಕ್ಕೆ ಸಂಪರ್ಕಿಸುವ ಈ ಫೆರ‌್ರಿ ಸೇವೆಯಲ್ಲಿ ಎರಡು ಬೋಟ್‌ಗಳಷ್ಟೇ ಇವೆ. ಅದರಲ್ಲೊಂದು ಇದೀಗ ಅವಘಡಕ್ಕೆ ಸಿಲುಕಿದ್ದು ದುರಸ್ತಿಗೆ ಕನಿಷ್ಠ 10 ದಿನವಾದರೂ ಬೇಕು. ಪ್ರತಿದಿನ 450 ವಿದ್ಯಾರ್ಥಿಗಳ ಸಹಿತ 2 ಸಾವಿರಕ್ಕೂ ಮಿಕ್ಕಿ ಪ್ರಯಾಣಿಕರಿಗೆ ಸಂಚರಿಸಲು ಬೋಟ್ ನೆರವಾಗಿತ್ತು. ಇನ್ನು ಒಂದೇ ಬೋಟ್‌ನಲ್ಲಿ ಸಂಚರಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.