More

    ಪ್ರಯಾಣಿಕರ ಇಳಿಸಿ ಟ್ಯಾಕ್ಸಿ ವಶ, ಚುನಾವಣಾ ಕಾರ್ಯಗಳಿಗೆ ಬಳಕೆ, ಪೊಲೀಸರ ಕ್ರಮಕ್ಕೆ ಆಕ್ರೋಶ

    ಮಂಗಳೂರು: ನಗರದ ಹಲವೆಡೆ ಸೋಮವಾರ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ ಸಂಚರಿಸುತ್ತಿದ್ದ ಟ್ಯಾಕ್ಸಿಗಳನ್ನು ಪೊಲೀಸರು ಅಡ್ಡಹಾಕಿ ಪ್ರಯಾಣಿಕರನ್ನು ಇಳಿಸಿ ವಾಹನಗಳನ್ನು ವಶಪಡಿಸಿಕೊಳ್ಳಲು ಆರಂಭಿಸಿದ್ದಾರೆ ಎನ್ನುವ ಆರೋಪ ಟ್ಯಾಕ್ಸಿ ಮಾಲೀಕರಿಂದ ಕೇಳಿಬಂದಿವೆ.

    ಚುನಾವಣೆ, ಪ್ರಾಕೃತಿಕ ವಿಕೋಪ, ವಿವಿಐಪಿಗಳ ಭೇಟಿಯಂತಹ ವಿಶೇಷ ಸಂದರ್ಭಗಳಲ್ಲಿ ಜಿಲ್ಲಾಡಳಿತ ಖಾಸಗಿ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಮುಂತಾದ ವಾಹನಗಳನ್ನು ಸರ್ಕಾರ ನಿಗದಿಪಡಿಸಿದ ದರದಲ್ಲಿ ಪಡೆದು ಬಳಸಿಕೊಳ್ಳುವುದು ಕ್ರಮ. ಚುನಾವಣೆ ಹಾಗೂ ಮೇ 3 ರಂದು ಮೂಲ್ಕಿಯಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಭದ್ರತೆ ಮುಂತಾದ ಕಾರ್ಯಕ್ರಮಗಳಿಗೆ ಪೊಲೀಸರು ಮುನ್ಸೂಚನೆ ಇಲ್ಲದೆ ಸೋಮವಾರ ಖಾಸಗಿ ಟ್ಯಾಕ್ಸಿಗಳನ್ನು ಅವುಗಳು ಇರುವ ಸ್ಥಳದಲ್ಲಿಯೇ ವಶಪಡಿಸಲು ಮುಂದಾದಾಗ ಸಮಸ್ಯೆ ಸೃಷ್ಟಿಯಾಯಿತು. ಪೊಲೀಸ್ ಠಾಣೆಗಳಿಗೆ ತುರ್ತಾಗಿ ಒದಗಿಸಬೇಕಾದ ವಾಹನಗಳ ಕುರಿತು ಟಾರ್ಗೆಟ್ ಒದಗಿಸಿದ್ದ ಕಾರಣ ಬಡ ಟ್ಯಾಕ್ಸಿ ಚಾಲಕರು ಹಾಗೂ ಬಡಪಾಯಿ ಪ್ರಯಾಣಿಕರು ಬಲಿಪಶುಗಳಾಗಿದ್ದಾರೆ.

    ಅದಾನಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಬೆಳಗ್ಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ಸಮಸ್ಯೆ ಎದುರಿಸಿದರು. ಪೊಲೀಸರ ಜತೆ ಮಾತುಕತೆ ಬಳಿಕ ಕಿಶೋರ್ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಜಿಲ್ಲಾಧಿಕಾರಿ ಸೂಚನೆಯ ಬಳಿಕ ಕಿಶೋರ್ ಆಳ್ವ ಪ್ರಯಾಣಿಸುತ್ತಿದ್ದ ವಾಹನಕ್ಕೆ ಬಿಡುಗಡೆ ದೊರೆಯಿತು.

    ಪ್ರಧಾನಿ ಅವರ ಭದ್ರತೆ ಹಾಗೂ ಚುನಾವಣೆ ಕೆಲಸಗಳಿಗೆ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದಿರಬಹುದು. ಆದರೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿರುವ ದೂರುಗಳು ಬಂದಿಲ್ಲ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.

    ಹಳೆ ಪಾವತಿ ಬಾಕಿಯಿಟ್ಟ ಜಿಲ್ಲಾಡಳಿತ!

    ಸರ್ಕಾರದ ಕೆಲಸಗಳ ನಿಯೋಜನೆಯಿಂದ ಟ್ಯಾಕ್ಸಿ ಚಾಲಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಪುತ್ತೂರು ಕ್ಯಾಂಪ್ಕೊಗೆ ಎರಡು ತಿಂಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ನೀಡಿದ ಸಂದರ್ಭ ಭದ್ರತಾ ಕಾರ್ಯಗಳಿಗೆ ಜಿಲ್ಲಾಡಳಿತ ಪಡೆದುಕೊಂಡ ಸುಮಾರು 40 ವಾಹನಗಳ ಆರು ಲಕ್ಷ ರೂ.ಬಾಡಿಗೆ ಇನ್ನೂ ಪಾವತಿಯಾಗಿಲ್ಲ ಎಂದು ದಕ್ಷಿಣ ಕನ್ನಡ ಟ್ಯಾಕ್ಸಿ ಮೆನ್ಸ್ ಆ್ಯಂಡ್ ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಅಧ್ಯಕ್ಷ ಆನಂದ್ ಕೆ. ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts