ಪ್ರಮುಖ ಪಕ್ಷಗಳಲ್ಲಿ ಚಟುವಟಿಕೆ ಬಿರುಸು

ಗದಗ: ಲೋಕಸಭೆ ಚುನಾವಣೆಯ ದಿನಾಂಕ ಘೊಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದೆ.
ಜಿಲ್ಲೆಯ ಶಿರಹಟ್ಟಿ, ಗದಗ ಮತ್ತು ರೋಣ ವಿಧಾನಸಭೆ ಕ್ಷೇತ್ರಗಳು ಹಾವೇರಿ ಲೋಕಸಭೆ ಕ್ಷೇತ್ರ ಮತ್ತು ನರಗುಂದ ವಿಧಾನಸಭೆ ಕ್ಷೇತ್ರ ಬಾಗಲಕೋಟೆ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿದ್ದು, ಕಾಂಗ್ರೆಸ್ ಬಿಜೆಪಿ ಮಧ್ಯೆ ನೇರ ಹಣಾಹಣಿ ಇರುವ ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಕಸರತ್ತು ಆರಂಭಿಸಿವೆ.
ಹಾಲಿ ಸಂಸದ ಬಿಜೆಪಿಯ ಶಿವಕುಮಾರ ಉದಾಸಿ ಕಳೆದ ಒಂದು ತಿಂಗಳಿಂದ ಕ್ಷೇತ್ರ ಸಂಚಾರ ಜೋರಾಗಿ ನಡೆಸಿದ್ದಾರೆ. ಕಳೆದ ಐದು ವರ್ಷಗಳ ಕೇಂದ್ರ ಸರ್ಕಾರದ ಸಾಧನೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಬಿರುಗಾಳಿಯ ಆರ್ಭಟ ಕಮಲ ಪಡೆಯಲ್ಲಿ ಕೊಂಚ ಉತ್ಸಾಹ ಹೆಚ್ಚಿಸಿದೆ. ಕಾರ್ಯಕರ್ತರು ಅತ್ಯುತ್ಸಾಹದಿಂದ ಸಂಘಟನೆ ಆರಂಭಿಸಿದ್ದಾರೆ. ಹ್ಯಾಟ್ರಿಕ್ ಗೆಲುವಿಗೆ ಶಿವಕುಮಾರ ಉದಾಸಿ ರಣತಂತ್ರ ಹೆಣೆದು ಅಖಾಡಕ್ಕೆ ಇಳಿದಿದ್ದಾರೆ.
ಮತದಾರರ ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಿಸುವುದು, ಕಮಲ ಜ್ಯೋತಿ ಹೀಗೆ ಅನೇಕ ತಂತ್ರಗಳನ್ನು ಅನುಸರಿಸಿ ಮತದಾರರನ್ನು ಸೆಳೆಯುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಪೈಕಿ ಮೂರರಲ್ಲಿ ಬಿಜೆಪಿ ಶಾಸಕರಿದ್ದು, ಗದಗ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಇದು ಕೂಡಾ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಲು ಪೂರಕವಾಗಿದೆ.
ಪ್ರತಿ ಚುನಾವಣೆಯಂತೆ ಈ ಸಲವೂ ಕಾಂಗ್ರೆಸ್ ಸ್ಥಿತಿ ಬೇರೆ ಏನಿಲ್ಲ. ಚುನಾವಣೆ ಘೊಷಣೆಯಾಗಿ ನಾಮಪತ್ರ ಸಲ್ಲಿಕೆ ಅವಧಿಯ ಕೊನೆಯ ಗಳಿಗೆಯಲ್ಲಿ ಅಭ್ಯರ್ಥಿಯ ಘೊಷಣೆಯಾಗುತ್ತದೆ. ಅಲ್ಲಿವರೆಗೂ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಸ್ಪಷ್ಟತೆಯೇ ಇರುವುದಿಲ್ಲ. ಹಾಗಾಗಿ ಕಾರ್ಯಕರ್ತರು, ಮುಖಂಡರು ಅರೆ ಮನಸ್ಸಿನಿಂದ ಕೆಲಸ ಮಾಡುತ್ತಿರುತ್ತಾರೆ. ಈ ಸಲವೂ ಅದೇ ವಾತಾವರಣವಿದ್ದು, ಕಳೆದ ಸಲ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಪರಾಭವಗೊಂಡಿರುವ ಸಲೀಂ ಅಹ್ಮದ್ ಈ ಸಲ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸುವುದು ಡೌಟು ಎಂದು ಹೇಳಲಾಗುತ್ತಿದೆ. ಹಾಗಾದರೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಚರ್ಚೆ ನಡೆದಿದೆ. ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಮತದಾರರು ಹೆಚ್ಚಿದ್ದು, ಅದೇ ಸಮುದಾಯದರಿಗೆ ಟಿಕೆಟ್ ನೀಡಬೇಕು ಎಂಬ ಮಾತುಕತೆ ನಡೆದಿವೆ. ಮಾಜಿ ಸಚಿವರು, ಮಾಜಿ ಶಾಸಕರು ಟಿಕೆಟ್​ಗಾಗಿ ಪ್ರಯತ್ನ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅದೇನೆ ಇದ್ದರೂ ಕಾಂಗ್ರೆಸ್ ಮುಖಂಡರು ಸಹ ಚುನಾವಣೆ ತಯಾರಿ ಆರಂಭಿಸಿದ್ದು, ಬೂತ್​ವುಟ್ಟದಲ್ಲಿ ಪಕ್ಷ ಸಂಘಟನೆ ಕುರಿತು ಸರಣಿ ಸಭೆ ಹಮ್ಮಿಕೊಂಡಿದ್ದಾರೆ.
ಕೈ ಟಿಕೆಟ್​ಗೆ ಮಾಜಿ ಶಾಸಕರ ಪ್ರಯತ್ನ: ಗದಗ ಜಿಲ್ಲೆಗೆ ಸ್ವಂತ ಲೋಕಸಭೆ ಕ್ಷೇತ್ರವಿಲ್ಲ. ನಾಲ್ಕು ವಿಧಾನಸಭೆ ಕ್ಷೇತ್ರಗಳ ಪೈಕಿ ಮೂರು ಹಾವೇರಿ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟರೆ ನರಗುಂದ ಬಾಗಲಕೋಟೆ ಕ್ಷೇತ್ರಕ್ಕೆ ಬರುತ್ತದೆ. ಹೀಗಾಗಿ ಜಿಲ್ಲೆಯ ಜನರು ಅನ್ಯ ಜಿಲ್ಲೆಯ ಅಭ್ಯರ್ಥಿಗಳಿಗೆ ಮತ ನೀಡುವುದು ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮಾಜಿ ಶಾಸಕರಿಬ್ಬರು ಟಿಕೆಟ್​ಗಾಗಿ ಪ್ರಯತ್ನ ನಡೆಸಿದ್ದಾರೆ. ಆದರೆ, ಕೆಪಿಸಿಸಿಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬ ಮಾತಿದೆ.