ಪ್ರಮಾಣ ಪತ್ರ ಪಡೆಯಲು ಪರದಾಟ

ಹಿರೇಕೆರೂರ: ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಸೆ. 30 ಕೊನೆಯ ದಿನವಾಗಿದ್ದು, ಮುಖ್ಯವಾಗಿ ಅಗತ್ಯವಿರುವ ಆಧಾರ್ ಕಾರ್ಡ್ ಮತ್ತು ನಿವಾಸಿ ದೃಢೀಕರಣ, ಆದಾಯ ಪ್ರಮಾಣ ಪತ್ರಗಳನ್ನು ಪಡೆಯಲು ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳ ಜನ ಹಗಲಿರುಳು ಹರಸಾಹಸ ಪಡುತ್ತಿದ್ದಾರೆ.

ಸರ್ಕಾರದಿಂದ 1 ರಿಂದ 10ನೇ ತರಗತಿವರೆಗೆ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳಿಗೆ ಪ್ರತಿ ವರ್ಷ ವಿದ್ಯಾರ್ಥಿ ವೇತನ ನೀಡುತ್ತಿದೆ. ತಾಲೂಕಿನಲ್ಲಿ 1 ರಿಂದ 10ನೇ ತರಗತಿಯವರೆಗೆ 24,480 ಮಕ್ಕಳು ಹೊಸದಾಗಿ ಮತ್ತು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕಿದೆ. ಇಲ್ಲಿಯವರೆಗೆ ಶೇ. 65ರಷ್ಟು ಮಕ್ಕಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಲು ಸೆ. 30 ಕೊನೆಯ ದಿನವಾಗಿದೆ. ನಿವಾಸಿ ದೃಢೀಕರಣ, ಆದಾಯ ಪ್ರಮಾಣ ಪತ್ರ ಮತ್ತು ಆಧಾರ ಕಾರ್ಡ್​ಗಳನ್ನು ಹೊಸದಾಗಿ ಮತ್ತು ತಿದ್ದುಪಡಿ ಮಾಡಿಸಲು ಪಾಲಕರು ತಮ್ಮ ನಿತ್ಯದ ಕೆಲಸಗಳನ್ನು ಬದಿಗಿಟ್ಟು, ಪಟ್ಟಣದ ತಹಸೀಲ್ದಾರ್ ಕಚೇರಿ ಮತ್ತು ಕೆವಿಜಿ ಬ್ಯಾಂಕ್ ಎದುರು ಕಾಯುವ ಸ್ಥಿತಿ ನಿರ್ವಣವಾಗಿದೆ. ಆದರೆ, ದಿನಕ್ಕೆ ಸುಮಾರು 20 ರಿಂದ 30 ಕಾರ್ಡ್​ಗಳು, ಪತ್ರಗಳನ್ನು ಮಾತ್ರ ವಿತರಿಸಲಾಗುತ್ತಿದೆ.

ಅಗತ್ಯ ವ್ಯವಸ್ಥೆ ಕಲ್ಪಿಸಿ

ಸರ್ಕಾರ ಇಂತಹ ಯೋಜನೆ ಜಾರಿ ವೇಳೆ ಜನರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ದಾಖಲೆ ದೊರಕಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಅಥವಾ ದಿನಾಂಕವನ್ನಾದರೂ ವಿಸ್ತರಿಸಬೇಕು. ತಾಲೂಕಿನಲ್ಲಿ ವೇತನಕ್ಕಾಗಿ ತಹಸೀಲ್ದಾರ್ ಕಚೇರಿ ಮತ್ತು ಕೆವಿಜಿ ಬ್ಯಾಂಕಿನಲ್ಲಿ ಎರಡು ಕೇಂದ್ರಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ದಿನಕ್ಕೆ 20 ರಿಂದ 30 ಅರ್ಜಿಗಳನ್ನು ಮಾತ್ರ ಸ್ವೀಕರಿಸಿ ಆಧಾರ್ ಕಾರ್ಡ್​ಗಳನ್ನು ವಿತರಿಸುತ್ತಿದ್ದಾರೆ. ಇದಕ್ಕೂ ಹೆಚ್ಚಿನ ಅರ್ಜಿಗಳಿದ್ದಲ್ಲಿ ಅಂತವರಿಗೆ 8-15 ದಿನ ಕಾಲಾವಕಾಶ ನೀಡಲಾಗುತ್ತಿದೆ. ಇತ್ತ ಸರ್ಕಾರ ಸೆ. 30 ಕೊನೆಯ ದಿನಾಂಕ ನಿಗದಿಗೊಳಿಸಿದ್ದರಿಂದ ಮಕ್ಕಳು, ಪಾಲಕರು ಈ ಎರಡೂ ಕೇಂದ್ರಗಳ ಎದುರು ರಾತ್ರಿ, ಹಗಲು ಎನ್ನದೆ ಸರದಿಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಶಿಕ್ಷಣ ಇಲಾಖೆಯ ಮೇಲಧಿಕಾರಿಗಳು ಮತ್ತು ಜಿಲ್ಲಾಡಳಿತ ಸಮಸ್ಯೆ ಗಮನಿಸಿ ದಿನಾಂಕವನ್ನು ಮುಂದೂಡಲು ಹಾಗೂ ಅಗತ್ಯ ದಾಖಲೆ ಪಡೆಯಲು ಇನ್ನೂ ಹೆಚ್ಚಿನ ಕೇಂದ್ರಗಳನ್ನು ತೆರೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧಾರ್ ಕಾರ್ಡ್ ದೊರಕಲು ವ್ಯವಸ್ಥೆ ಕಲ್ಪಿಸಲಾಗುವುದು. ದಿನಾಂಕ ಮುಂದೂಡುವುದು ಸರ್ಕಾರ ಮಟ್ಟದ್ದಾಗಿದೆ. ಆಧಾರ್ ಕಾರ್ಡ್ ನೀಡುವಲ್ಲಿ ವಿಳಂಬ ನೀತಿ ಮತ್ತು ಜನತೆಗೆ ಕಿರುಕುಳ ನೀಡಿದ ಬಗ್ಗೆ ಸಾರ್ವಜನಿಕರು ದೂರು ನೀಡಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

| ಎ.ವಿ. ಶಿಗ್ಗಾಂವಿ ತಹಸೀಲ್ದಾರ್

ಜಂಟಿ ಖಾತೆಗೆ ಬ್ಯಾಂಕ್​ಗಳ ಹಿಂದೇಟು

ಗುತ್ತಲ: ವಿದ್ಯಾರ್ಥಿ ಹಾಗೂ ಪಾಲಕರ ಜಂಟಿ ಖಾತೆ ಮಾಡಿಕೊಡಲು ಬ್ಯಾಂಕ್​ಗಳು ಹಿಂದೇಟು ಹಾಕುತ್ತಿದ್ದು, ಇನ್ನೊಂದೆಡೆ ಸಕಾಲಕ್ಕೆ ಜಾತಿ, ಆದಾಯದ ಪ್ರಮಾಣ ಪತ್ರ ದೊರಕದೇ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗುವ ಸನ್ನಿವೇಶ ನಿರ್ವಣವಾಗಿದೆ. 1ನೇ ತರಗತಿಯಿಂದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಮಕ್ಕಳೊಂದಿಗೆ ತಾಯಿ ಅಥವಾ ತಂದೆಯ ಜಂಟಿ ಖಾತೆ ಮಾಡಿಸುವುದು ಕಡ್ಡಾಯಗೊಳಿಸಿದೆ. ಅಲ್ಲದೆ, ಪಾಲಕರ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್​ನಲ್ಲಿ ಮೊಬೈಲ್ ಸಂಖ್ಯೆ ಜೋಡಿಸಿರಬೇಕೆಂಬ ಷರತ್ತನ್ನು ಬ್ಯಾಂಕ್ ಸಿಬ್ಬಂದಿ ಹೇಳುತ್ತಿರುವ ಕಾರಣ ಅನೇಕರು ವಿದ್ಯಾರ್ಥಿ ವೇತನದ ಸಹವಾಸವೇ ಬೇಡ ಎನ್ನುವಂತಾಗಿದೆ. ಪ್ಯಾನ್ ಕಾರ್ಡ್ ಇಲ್ಲದವರು ಅದಕ್ಕೆ ಅರ್ಜಿ ಸಲ್ಲಿಸಿರುವ ಸ್ವೀಕೃತಿ ಪ್ರತಿ ತೋರಿಸಿದರೂ ಬ್ಯಾಂಕ್​ಗಳು ಒಪ್ಪುತ್ತಿಲ್ಲ. ಬದಲಾಗಿ ಪ್ಯಾನ್ ಸಂಖ್ಯೆ ಕಡ್ಡಾಯ ಎನ್ನುತ್ತಿದ್ದಾರೆ. ಇನ್ನೂ ಕೆಲ ಬ್ಯಾಂಕ್​ನವರು 6ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಮಾತ್ರ ಜಂಟಿ ಖಾತೆ ಮಾಡಿಕೊಡುತ್ತೇವೆ. ಅದು ಪ್ರತಿ ಬುಧವಾರ ಮಾತ್ರ ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ಗುತ್ತಲ ಸೇರಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುವುದೇ ಕಾದು ನೋಡಬೇಕು.

ನನ್ನ ಮಗನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬ್ಯಾಂಕ್​ನಲ್ಲಿ ಜಂಟಿ ಖಾತೆ ಬೇಕಿತ್ತು. ಇದನ್ನು ಮಾಡಿಸಲು ಹೋದರೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕೆಂದು ಹೇಳಿದ್ದಾರೆ. ಇದು ಬರಲು ಕಡಿಮೆ ಎಂದರೂ, ಒಂದು ವಾರ ಬೇಕು. ಇದೀಗ ಏನು ಮಾಡಬೇಕು ತಿಳಿಯುತ್ತಿಲ್ಲ.

| ನಾಗೇಶ ಬಣಕಾರ ಹರಳಹಳ್ಳಿ ಗ್ರಾಮಸ್ಥ