Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಪ್ರಭುತ್ವ ಮತ್ತು ಸೃಜನಶೀಲತೆಯ ಸಂಬಂಧ

Sunday, 10.12.2017, 3:02 AM       No Comments

ಕನ್ನಡ ಸಾಹಿತ್ಯ ಪರಂಪರೆಯನ್ನು ಗಮನಿಸಿದರೆ ಸೃಜನಶೀಲತೆ ಪ್ರಭುತ್ವದ ಜೊತೆ ಸಂಬಂಧ ಇಟ್ಟುಕೊಂಡೇ ಅದರಿಂದ ಅಂತರವನ್ನೂ ಕಾಯ್ದುಕೊಂಡು ಬಂದಿದೆ. ಸಾಹಿತಿ ಎಲ್ಲ ವಿಷಯಗಳ ಬಗ್ಗೆಯೂ ರ್ಚಚಿಸಬಹುದು. ಆದರೆ ತನ್ನ ಸ್ವಾಯತ್ತತೆಯನ್ನು ಕಾಯ್ದುಕೊಳ್ಳುವುದು ಮುಖ್ಯ. 

ನಾನು ಸಾಹಿತ್ಯ ಸಮ್ಮೇಳನದ ಕಡೆಯ ದಿನ ಭಾನುವಾರ ಹೋಗಿದ್ದೆ. ಊಹಿಸಿದ್ದಂತೆ ಕನ್ನಡ ಜಾತ್ರೆಯ ವಾತಾವರಣವೇ ಇತ್ತು. ಕನ್ನಡ ಮಣ್ಣಿನ ಧೂಳು ಎಲ್ಲ ಕಡೆ ಆವರಿಸಿತ್ತು. ವಿವಿಧ ಬಗೆಯ ವ್ಯಾಪಾರ ನಡೆಯುತ್ತಿತ್ತು. ಪ್ರವೇಶದ ಹಾದಿಯಲ್ಲಿ ಮೊದಲು ಸಿಕ್ಕಿದ್ದು ಊಟದ ಸಭಾಂಗಣ. ವಿಶಾಲವಾಗಿತ್ತು. ಹೊತ್ತು ಮೀರಿದ್ದರೂ ಅಲ್ಲಿ ಊಟದ ಚಟುವಟಿಕೆ ಇನ್ನೂ ಇದ್ದಂತಿತ್ತು. ಸಾಹಿತ್ಯ ಸಮ್ಮೇಳನವೆಂದರೆ ನಮ್ಮ ಸುದ್ದಿ ಮಾಧ್ಯಮಗಳು ಮೊದಲು ನೀಡುವುದು ಊಟದ ಮೆನು. ಯಾವ ಯಾವ ದಿನ ಯಾವ ಬಗೆಯ ಆಹಾರ ಪದಾರ್ಥಗಳಿರುತ್ತವೆ ಎಂಬ ವಿವರಗಳೆಲ್ಲವೂ ಅಲ್ಲಿ ಇರುತ್ತದೆ. ಆದರೆ ಸಮ್ಮೇಳನದಲ್ಲಿ ಯಾವ ಯಾವ ಗೋಷ್ಠಿಗಳಿರುತ್ತವೆ, ಯಾರು ಯಾರು ಭಾಗವಹಿಸುತ್ತಾರೆ ಎಂಬ ವಿವರ ಹೆಚ್ಚಾಗಿ ಕಾಣಿಸುವುದಿಲ್ಲ. ಹಾಗಿದ್ದರೆ ಮಾಧ್ಯಮಗಳಿಗೆ ಸಮ್ಮೇಳನದಲ್ಲಿ ಯಾವುದು ಮುಖ್ಯ? ಅಥವಾ ನಮ್ಮ ಓದುಗರಿಗೂ ಆ ವಿವರಗಳೇ ಬೇಕೇನೋ! ನಾನೊಮ್ಮೆ ಈ ಬಗ್ಗೆ ಸಂಬಂಧಪಟ್ಟವರ ಜೊತೆ ರ್ಚಚಿಸಿದ್ದೆ. ಆದರೆ ಕೇಳಿಸಿಕೊಳ್ಳುವ ಮನಸ್ಸುಗಳು ಬೇಕಲ್ಲ? ಯಾವುದಾದರೊಂದು ಬಾತ್, ಜೊತೆಗೆ ಮೊಸರನ್ನ ಮಾಡಿಸಿದರೆ ಬಡಿಸುವುದೂ ಸುಲಭ, ಸಾಲುವುದಿಲ್ಲ ಎಂಬ ಸಮಸ್ಯೆಯೂ ಇರುವುದಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಔತಣದ ಅಗತ್ಯವಿದೆಯೇ? ಸಮ್ಮೇಳನಕ್ಕೆ ಬರುವವರು ಊಟ ಮಾಡಲೆಂದೇ ಬರುತ್ತಾರೆಯೇ? ಪ್ರತಿ ವರ್ಷವೂ ಊಟದ ಬಗೆಗಿನ ಗೊಂದಲಗಳನ್ನು ಗಮನಿಸುತ್ತಲೇ ಇರುತ್ತೇವೆ. ಊಟಕ್ಕಾಗಿ ನಡೆಯುವ ಗಲಾಟೆ ಸಮ್ಮೇಳನಕ್ಕೆ ಶೋಭೆಯೇ? ಬಗೆಬಗೆಯ ಭಕ್ಷ್ಯ ಭೋಜ್ಯಗಳನ್ನು ಬಡಿಸಲು ಇದೇನು ಆಹಾರ ಮೇಳವೇ? ಪುಸ್ತಕಗಳ ಮಳಿಗೆಗಳನ್ನು ಒಂದು ಸುತ್ತು ಹಾಕಿದೆ. ಅನೇಕ ಗೆಳೆಯರು ಅಲ್ಲಿ ಭೇಟಿಯಾದರು. ಕೆಲವರು ವ್ಯವಸ್ಥೆಯ ಬಗ್ಗೆ ದೂರಿದರು. ವ್ಯಾಪಾರ ಚೆನ್ನಾಗಿಲ್ಲವೆಂದರು. ಮತ್ತೆ ಕೆಲವರು ವ್ಯಾಪಾರ ಅಡ್ಡಿಯಿಲ್ಲವೆಂದರು. ಹೊಸ ತಲೆಮಾರು ಹೆಚ್ಚಿನ ಸಂಖ್ಯೆಯಲ್ಲಿದ್ದದ್ದು ಗಮನ ಸೆಳೆಯಿತು. ಕೆಲವರು ಸೆಲ್ಪಿ ತೆಗೆಸಿಕೊಂಡರು. ಮತ್ತೆ ಕೆಲವರು ಹಸ್ತಾಕ್ಷರ ಪಡೆದುಕೊಳ್ಳುವ ಉತ್ಸಾಹ ತೋರಿದರು. ಹಳೆಯ ದಿನಗಳು ನೆನಪಾದವು. ಮುಖ್ಯ ಮಂಟಪದ ಕಡೆ ಹೆಜ್ಜೆ ಹಾಕಿದೆ.

ವಿಶಾಲವಾದ ಭವ್ಯ ಸಭಾಂಗಣ. ನನ್ನ ಜೊತೆಗಿದ್ದವರು ಈ ಪೆಂಡಾಲ್​ಗೆ ಎಷ್ಟು ಹಣ ಖರ್ಚಾಗಿರಬಹುದು ಎಂದು ಕೇಳಿದರು. ಮಾತು ಹಾಗೇ ಸಮ್ಮೇಳನಕ್ಕೆ ಖರ್ಚಾಗುವ ಒಟ್ಟು ಹಣದತ್ತ ಹೊರಳಿತು. ಅದರ ಸಾರ್ಥಕತೆಯ ಬಗ್ಗೆಯೂ ಜೊತೆಗಿದ್ದ ಗೆಳೆಯರು ಮಾತನಾಡುತ್ತಿದ್ದರು. ನಾನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆ. ಇವೆಲ್ಲ ಪ್ರತಿ ವರ್ಷವೂ ನಡೆಯುವ ಚರ್ಚೆಗಳೇ! ಸಮ್ಮೇಳನಗಳೂ ನಡೆಯುತ್ತಿರುತ್ತವೆ, ಇಂತಹ ಚರ್ಚೆಗಳೂ ಆ ಸಮ್ಮೇಳನದ ಸಭಾಂಗಣದಲ್ಲೇ ನಡೆಯುತ್ತಿರುತ್ತವೆ. ಯಾರಿಗಾಗಿ ಈ ಸಮ್ಮೇಳನ ಎಂಬ ಚರ್ಚೆಯೂ ಗೆಳೆಯರ ನಡುವೆ ಜೋರಾಗಿಯೇ ನಡೆಯುತ್ತಿತ್ತು. ಗೆಳೆಯರೆಲ್ಲಾ ಸಾಹಿತ್ಯದ ಗಂಭೀರ ವಿದ್ಯಾರ್ಥಿಗಳು. ಅವರೀಗ ವಿಶಾಲ ಪೆಂಡಾಲಿನ ಒಂದು ಭಾಗದ ಧೂಳು ತುಂಬಿದ್ದ ಖಾಲಿ ಕುರ್ಚಿಗಳನ್ನು ಅಲ್ಲಿ ಚೆಲ್ಲಾಡುತ್ತಿದ್ದ ಪೇಪರ್ ಚೂರುಗಳಿಂದ ಒರೆಸಿ, ಅಲ್ಲಿ ಕುಳಿತು ರ್ಚಚಿಸುತ್ತಿದ್ದರು. ಸುತ್ತಮುತ್ತ ಧೂಳು ತುಂಬಿದ್ದ ಖಾಲಿ ಕುರ್ಚಿಗಳೇ ಇದ್ದು, ಸಭಾಂಗಣದ ಮುಂಭಾಗದ ಕೆಲವು ಸಾಲುಗಳಲ್ಲಿ ಮಾತ್ರ ಸಹೃದಯ ಸಾಹಿತ್ಯಾಸಕ್ತರಿದ್ದುದರಿಂದ ಗೆಳೆಯರ ಚರ್ಚೆಯ ಮಾತುಗಳೆಲ್ಲ ನನಗೆ ಸ್ವಗತದಂತೆ ಕೇಳಿಸುತ್ತಿತ್ತು.

ವೇದಿಕೆಯ ಮೇಲೆ ಸಮ್ಮೇಳನಾಧ್ಯಕ್ಷರೊಡನೆ ಸಂವಾದ ನಡೆಯುತ್ತಿತ್ತು. ಅಧ್ಯಕ್ಷರೊಂದಿಗೆ ಅನೇಕ ಗಣ್ಯರು ಆಸೀನರಾಗಿದ್ದರು. ಅವರೆಲ್ಲರಿಗೂ ಒಂದೊಂದು ಪ್ರಶ್ನೆ ಕೇಳುವ ಅವಕಾಶವಿತ್ತು. ಪ್ರಶ್ನೆಯೊಂದು ಹೀಗಿತ್ತು: ‘ಸಾಹಿತ್ಯ ಸಮ್ಮೇಳನದಲ್ಲಿ ನೀವು ರಾಜಕೀಯದ ಬಗ್ಗೆ ಮಾತನಾಡಿದ್ದು ಸರಿಯೇ?’

ಈ ಪ್ರಶ್ನೆ ಅಲ್ಲಿ ಮಾತ್ರವಲ್ಲ, ಚಂದ್ರಶೇಖರ ಪಾಟೀಲರು ಅಧ್ಯಕ್ಷ ಭಾಷಣ ಮಾಡಿದ ನಂತರದಲ್ಲಿ ಎಲ್ಲ ಕಡೆ ಈ ಬಗ್ಗೆ ಚರ್ಚೆ ಆರಂಭವಾಗಿತ್ತು. ನನಗೆ ನಮ್ಮ ಕಾವ್ಯಚಿಂತಕರ ನೆನಪಾಯಿತು.

ರಾಜಶೇಖರ ತನ್ನ ‘ಕಾವ್ಯ ಮೀಮಾಂಸಾ’ ಗ್ರಂಥದಲ್ಲಿ ಕವಿಗೆ ಪ್ರತಿಭೆಯ ಜೊತೆಗೆ ವ್ಯುತ್ಪತ್ತಿಯೂ ಅಗತ್ಯವೆಂದು ಹೇಳುತ್ತಾ- ‘ಬಹುಜ್ಞತಾ ವ್ಯುತ್ಪತ್ತಿಃ’, ಅಂದರೆ ಅನೇಕ ವಿಷಯಗಳನ್ನು ತಿಳಿದಿರುವುದೇ ವ್ಯುತ್ಪತ್ತಿ, ಇದರ ತಿಳಿವು ನನಗೆ ಅನವಶ್ಯಕ ಎಂದು ಕವಿ ನಿರಾಕರಿಸಬಹುದಾದ ಸಂಗತಿಯೇ ಜಗತ್ತಿನಲ್ಲಿ ಇಲ್ಲ ಎನ್ನುತ್ತಾನೆ. ಭಾಮಹನು ಕವಿಗೆ ಶಬ್ದಾರ್ಥದಷ್ಟೇ ಕಲೆ, ನ್ಯಾಯ, ಇತಿಹಾಸ – ಹೀಗೆ ಎಲ್ಲ ಜ್ಞಾನಶಿಸ್ತುಗಳ ತಿಳಿವಳಿಕೆಯೂ ಅಗತ್ಯವೆನ್ನುತ್ತಾನೆ. ಮಮ್ಮಟ ತನ್ನ ‘ಕಾವ್ಯಪ್ರಕಾಶ’ದಲ್ಲಿ ಕವಿಗೆ ಮೂರು ವಿಷಯಗಳಲ್ಲಿ ಜ್ಞಾನ ಬೇಕಾಗುತ್ತದೆ ಎಂದು ಹೇಳುತ್ತಾನೆ. ಮೊದಲನೆಯದು- ಸಚರಾಚರವಾದ ಲೋಕದ ನಡವಳಿಕೆಯ ಪರಿಜ್ಞಾನ. ಈ ಲೋಕಜ್ಞಾನವೇ ಕಾವ್ಯದ ಮೂಲಸಾಮಗ್ರಿ. ಎರಡನೆಯದು- ಕಾವ್ಯನಿರ್ವಣಕ್ಕೆ ಅಗತ್ಯವಾದ ಛಂದಸ್ಸು, ವ್ಯಾಕರಣ, ಶಬ್ದಾಭಿಧಾನ(ನಿಘಂಟು) ಮೊದಲಾದವುಗಳ ತಿಳುವಳಿಕೆ. ಜೊತೆಗೆ ಇತರ ಜ್ಞಾನಶಿಸ್ತುಗಳ ಜ್ಞಾನ. ಮೂರನೆಯದು- ಮಹಾಕಾವ್ಯ, ಇತಿಹಾಸ ಇವುಗಳ ಅನುಶೀಲನ. ಒಳ್ಳೆಯ ಕಾವ್ಯ ರಚನೆಗೆ ಇವೆಲ್ಲ ಅತ್ಯಗತ್ಯ ಎಂಬುದು ಮಮ್ಮಟನ ಅಭಿಮತ. ಕ್ಷೇಮೇಂದ್ರ ತನ್ನ ‘ಕವಿಕಂಠಾಭರಣ’ದಲ್ಲಿ ಸಂಗ್ರಹಿಸಿರುವ ‘ಶಿಕ್ಷಾಶತ’ದಲ್ಲಿ ಕವಿ ತಿಳಿದಿರಬೇಕಾದ ಒಂದು ದೊಡ್ಡ ಪಟ್ಟಿಯನ್ನೇ ನೀಡುತ್ತಾನೆ. ಆತನ ಪಟ್ಟಿಯಲ್ಲಿ ಸೇರದ ವಿಷಯವೇ ಇಲ್ಲ ಎನ್ನಬಹುದು.

ಈ ಎಲ್ಲವನ್ನೂ ಗಮನಿಸಿದಾಗ ಸಾಹಿತಿ ರಾಜಕೀಯವನ್ನು ಮಾತನಾಡಬಾರದೆಂಬ ಸಂಗತಿ ಎಷ್ಟು ಸಂಗತ? ಜಗತ್ತಿನ ಯಾವುದಾದರೂ ಸಾಹಿತ್ಯದ ವಸ್ತುವಾಗಬಹುದಾದರೆ ರಾಜಕೀಯ ಮಾತ್ರ ಏಕೆ ಬೇಡ? ಕೆಎಸ್​ನ ಕೇಳುತ್ತಾರೆ: ‘ಅದನಿದನೆ ಹಾಡೆಂಬ ಕಡ್ಡಾಯವೇಕೆ?/ವೇದಿಕೆಯ ಮೇಲಿನಿಂದುಪದೇಶವೇಕೆ?/ಕಬ್ಬಿಗನು ಬೆದರುವನೆ ಸ್ವಾತಂತ್ರ್ಯಪ್ರೇಮಿ?/ತಾರೆಗಳಾನುವಾಳುವನು ಸಾಲದೀ ಭೂಮಿ/’. ಕವಿ ಅದನ್ನು ಹೇಳಬೇಕು, ಇದನ್ನು ಹೇಳಬಾರದು ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ? ಕವಿಯ ಕಾವ್ಯಕ್ಕೆ ಯಾವುದು ಬೇಕಾದರೂ ವಸ್ತುವಾಗಬಹುದು. ಈ ಭೂಮಿಯ ಸಮಸ್ತವೂ ಆತನ ಆಸಕ್ತಿಯ ಕ್ಷೇತ್ರ, ಮಾತ್ರವಲ್ಲ, ತಾರೆಗಳ ಲೋಕದ ಬಗೆಗೂ ಆತನಿಗೆ ಕುತೂಹಲವಿದೆ. ಕವಿಗಿರಬಹುದಾದ ಸಹಜ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಎಲ್ಲ ಬಗೆಯ ಶಕ್ತಿಯನ್ನೂ ಕೆಎಸ್ ನ ವಿರೋಧಿಸುತ್ತಾರೆ. ಹಾಗೆ ನೋಡಿದರೆ ಕವಿಯ ಶಕ್ತಿಯೇ ಈ ‘ಸ್ವಾತಂತ್ರ್ಯ’. ಯಾವುದಕ್ಕೂ ಆತ ಅಂಜುವುದಿಲ್ಲ. ಹಾಗಾಗಿಯೇ ಪ್ರಭುತ್ವಕ್ಕೆ ಸೃಜನಶೀಲತೆಯ ಬಗ್ಗೆ ಸದಾ ಭಯ.

ಕುವೆಂಪು ಅವರನ್ನು ಒಮ್ಮೆ ಲೋಹಿಯಾ ಭೇಟಿಯಾದಾಗ ಅವರನ್ನು ರಾಜಕೀಯಕ್ಕೆ ಆಹ್ವಾನಿಸಿದರಂತೆ. ಆಗ ಕುವೆಂಪು , ‘ನೀವು ಯಾವುದನ್ನು ರಾಜಕೀಯ ಪರಿಭಾಷೆಯಲ್ಲಿ ಹೇಳುತ್ತೀದ್ದೀರೋ ಅದನ್ನೇ ನಾನು ಸಾಂಸ್ಕೃತಿಕ ಪರಿಭಾಷೆಯಲ್ಲಿ ಹೇಳುತ್ತಿದ್ದೇನೆ. ನಾವಿಬ್ಬರೂ ಅದೇ ಕೆಲಸ ಮಾಡುತ್ತಿದ್ದೇವೆ’ಎಂದರಂತೆ. ರಾಜಕೀಯ ಹಾಗೂ ಸಾಹಿತ್ಯದ ಸಂಬಂಧವನ್ನು ಇದಕ್ಕಿಂತ ಪರಿಣಾಮಕಾರಿಯಾಗಿ ಹೇಳುವುದು ಕಷ್ಟ.

ಕನ್ನಡ ಕಾವ್ಯ ಪರಂಪರೆ ಆರಂಭವಾಗುವುದೇ ರಾಜಕೀಯ ಕಾವ್ಯ ‘ವಿಕ್ರಮಾರ್ಜುನ ವಿಜಯ’ದಿಂದ ಅಲ್ಲವೇ? ಅಲ್ಲಿಂದಲೇ ರಾಜಕೀಯದ ಚರ್ಚೆ ಆರಂಭವಾಗುತ್ತದೆ. ರಾಜಕೀಯ ಹಾಗೂ ಸೃಜನಶೀಲತೆಯ ಸಂಬಂಧದ ಚರ್ಚೆಗೆ ಪಂಪ ಅತ್ಯುತ್ತಮ ಮಾದರಿ. ಕನ್ನಡ ಸಾಹಿತ್ಯದ ಆರಂಭ ಘಟ್ಟ – ರಾಜಾಶ್ರಯದ ಕಾಲ. ರಾಜರು ಕಲೆ ಸಾಹಿತ್ಯಗಳಿಗೆ ಪೋ›ತ್ಸಾಹ ನೀಡುವ ಆಶ್ರಯದಾತರಾಗಿದ್ದರು. ಅದಕ್ಕೆ ಪ್ರತಿಯಾಗಿ ಕವಿಗಳು ರಾಜರನ್ನು ವೈಭವಿಸಿ ಬರೆಯುತ್ತಿದ್ದರು. ಆ ಕಾಲದ ಸಾಹಿತ್ಯದ ಸ್ವರೂಪ ಗಮನಿಸಿದರೆ ಸಾಹಿತ್ಯ ಧರ್ಮ ಹಾಗೂ ಪ್ರಭುತ್ವವನ್ನು ಪ್ರತಿಪಾದಿಸುವ ಸಾಧನವಾಗಿತ್ತು. ಪಂಪನೇ ಇದಕ್ಕೆ ಅತ್ಯುತ್ತಮ ನಿದರ್ಶನ. ರಾಜಕೀಯ ಹಾಗೂ ಧರ್ಮ ನಮ್ಮ ಸಾಮಾಜಿಕ ರಚನೆಯನ್ನು ರೂಪಿಸುವ ಪ್ರಮುಖ ಶಕ್ತಿಗಳು. ಇವೆರಡರ ಅನುಸಂಧಾನವಿಲ್ಲದೆ ಯಾವುದೇ ಚರ್ಚೆಯೂ ಅಪೂರ್ಣವೇ. ಆದರೆ ಇವೆರಡೂ ಚರ್ಚೆಯನ್ನು ಬಯಸುವುದಿಲ್ಲ. ಅಧಿಕಾರ ಕೇಂದ್ರಗಳಾದ ಇವು ಚರ್ಚೆಯನ್ನು ಹೊರಗಿಡುತ್ತವೆ. ತಮ್ಮ ಆದೇಶವನ್ನು ಪ್ರಶ್ನಿಸದೆ ಪಾಲಿಸಬೇಕೆಂಬುದೇ ಇವುಗಳ ನೀತಿ. ಹೀಗಾಗಿಯೇ ‘ಜೀ ಹುಜೂರ್’ ಸಂಸ್ಕೃತಿಯನ್ನು ಇವು ಬೆಳೆಸುತ್ತವೆ. ಅಧೀನ ಮನಸ್ಸುಗಳನ್ನು ಪೋಷಿಸುತ್ತವೆ. ಪ್ರಶ್ನಿಸುವ ಮನಸ್ಸುಗಳನ್ನು ದೂಷಿಸುತ್ತವೆ. ಈ ಬಗೆಯ ಪ್ರಭುತ್ವದ ಮನೋಭಾವವನ್ನು ಎಲ್ಲ ದೇಶದ ಎಲ್ಲ ಕಾಲದ ಸೃಜನಶೀಲ ಮನಸ್ಸುಗಳು ಪ್ರತಿಭಟಿಸುತ್ತಲೇ ಬಂದಿವೆ.

ಪಂಪನ ಉದಾಹರಣೆಯನ್ನೇ ತೆಗೆದುಕೊಳ್ಳೋಣ: ಅರಿಕೇಸರಿ ಒಬ್ಬ ಸಾಮಂತ ರಾಜ. ಆತನ ಆಸ್ಥಾನದಲ್ಲಿ ಪಂಪ ಆಶ್ರಯ ಪಡೆದಿರುತ್ತಾನೆ. ಇಬ್ಬರೂ ಒಳ್ಳೆಯ ಸ್ನೇಹಿತರೂ ಹೌದು. ಹೀಗಾಗಿ ಪಂಪ ‘ವಿಕ್ರಮಾರ್ಜುನ ವಿಜಯ’ ಬರೆಯುವಾಗ ತನ್ನ ರಾಜ ಅರಿಕೇಸರಿಯನ್ನು ಅರ್ಜುನನ ಜೊತೆ ಸಮೀಕರಿಸಿ ಕಾವ್ಯದ ವಿನ್ಯಾಸ ರೂಪಿಸುತ್ತಾನೆ. ಹೀಗಾಗಿಯೇ ವ್ಯಾಸರ ಮಹಾಭಾರತ ಇಲ್ಲಿ ‘ವಿಕ್ರಮಾರ್ಜುನ ವಿಜಯ’ವಾಗುತ್ತದೆ. ಅರ್ಜುನನನ್ನು ವೈಭವೀಕರಿಸುವುದರ ಮೂಲಕ ಅರಿಕೇಸರಿಯನ್ನು ಮೆಚ್ಚಿಸುವುದು ಪಂಪನ ಉದ್ದೇಶ. ಒಂದು ರೀತಿ ಸೃಜನಶೀಲತೆ ಪ್ರಭುತ್ವವನ್ನು ವೈಭವಿಸುವ ಕ್ರಮವನ್ನು ನಾವಿಲ್ಲಿ ಕಾಣುತ್ತೇವೆ. ಇದೇ ಕಾವ್ಯದ ಆಶಯವಾಗಿದ್ದರೆ ಪಂಪ ನಮಗೆ ಮಹತ್ವದ ಕವಿಯಾಗುತ್ತಿರಲಿಲ್ಲ. ಕಾವ್ಯ ರಚನೆಯಲ್ಲಿ ಸೃಜನಶೀಲ ಪ್ರತಿಭೆ ತನ್ಮಯವಾಗುತ್ತಿದ್ದಂತೆ ಮೂಲ ಆಶಯ ಮರೆಯಾಗುತ್ತದೆ. ಕವಿಪ್ರತಿಭೆ ಲೌಕಿಕದ ಹಂಗು ತೊರೆದು ಮುಕ್ತವಾಗುತ್ತದೆ. ಆ ಹಂತದಲ್ಲಿ ಪಂಪ-

ನೆನೆಯದಿರಣ್ಣ ಭಾರತದೊಳಿಂ ಪೆರರಾರುಮನ್,

ಒಂದೆ ಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯ

ಕರ್ಣನೊಳ್ ಆರ್ ದೊರೆ, ಕರ್ಣನೇರು, ಕರ್ಣನ ಕಡುನನ್ನಿ, ಕರ್ಣನಳವು

ಅಂಕದ ಕರ್ಣನ ಚಾಗಮ್ ಎಂದು ಕರ್ಣನ ಪಡೆಮಾತಿನೊಳ್ ಪುದಿದು

ಕರ್ಣರಸಾಯನಮಲ್ತೆ ಭಾರತಂ

ಎನ್ನುತ್ತಾನೆ. ಪಂಪ ಬರೆಯುತ್ತಿರುವುದು ಅರಿಕೇಸರಿಯನ್ನು ಸಮೀಕರಿಸಿ ಅರ್ಜುನನನ್ನು ವೈಭವಿಸುತ್ತಿರುವ ‘ವಿಕ್ರಮಾರ್ಜುನ ವಿಜಯ’. ಇದನ್ನು ಆತ ಅರಿಕೇಸರಿಯ ಮುಂದೆ ಪ್ರಸ್ತುತ ಪಡಿಸುತ್ತಿದ್ದಾನೆ. ಆದರೆ ಬರೆದದ್ದು ಕರ್ಣನ ಕತೆಯನ್ನು. ಮಾತ್ರವಲ್ಲ, ಮಹಾಭಾರತದಲ್ಲಿ ನೆನೆಸಿಕೊಳ್ಳುವುದಾದರೆ ಕರ್ಣನನ್ನು ಮಾತ್ರ ನೆನೆಸಿಕೊಳ್ಳಬೇಕು ಎನ್ನುತ್ತಾನೆ. ಇದು ಪ್ರಭುತ್ವದ ಎದುರು ಸೃಜನಶೀಲತೆಯ ಗೆಲುವು.

ಕನ್ನಡ ಸಾಹಿತ್ಯ ಪರಂಪರೆಯನ್ನು ಗಮನಿಸಿದರೆ ಸೃಜನಶೀಲತೆ ಪ್ರಭುತ್ವದ ಜೊತೆ ಸಂಬಂಧ ಇಟ್ಟುಕೊಂಡೇ ಅದರಿಂದ ಅಂತರವನ್ನೂ ಕಾಯ್ದುಕೊಂಡು ಬಂದಿದೆ. ಕುವೆಂಪು ಹೇಳುತ್ತಾರೆ: ‘ವಸಂತವನದಲಿ ಕೂಗುವ ಕೋಗಿಲೆ/ ರಾಜನ ಬಿರುದನು ಬಯಸುವುದಿಲ್ಲ/ಹೂವಿನ ಮರದಲಿ ಜೇನುಂಬುಳುಗಳು/ಮೊರೆವುದು ರಾಜನ ಭಯದಿಂದಲ್ಲ/ ವನದೇಕಾಂತದಿ ಪೆಣ್ ನವಿಲೆಡೆಯಲಿ/ಮಯೂರ ನೃತ್ಯೋನ್ಮತ್ತ ವಿಲಾಸಕೆ ರಾಜನ ಕತ್ತಿಯ ಗಣನೆಯೆ ಇಲ್ಲ/ ವಿಪ್ಲವ ಮೂರ್ತಿಯ ಸಖನಾಗಿಹನೈ/ಕವಿಗರಸುಗಿರಸುಗಳ ಋಣವಿಲ್ಲ/ಅವನಗ್ನಿಮುಖಿ, ಪ್ರಳಯಶಿಖಿ/’

ಮೇಲಿನ ಸಾಲುಗಳು ಪ್ರಭುತ್ವದ ನಿರಾಕರಣೆಯನ್ನು ನಿಸ್ಸಂದಿಗ್ಧ ರೀತಿಯಲ್ಲಿ ಸ್ಥಾಪಿಸಲು ಪ್ರಯತ್ನಿಸುತ್ತವೆ. ಪ್ರಕೃತಿಯ ಯಾವ ವ್ಯಾಪಾರವೂ, ಪ್ರಾಣಿಲೋಕದ ಯಾವ ಚಟುವಟಿಕೆಯೂ ಅರಸನ ಅಪೇಕ್ಷೆಯಂತೆ, ಆತನನ್ನು ಓಲೈಸಲು ನಡೆಯುವುದಿಲ್ಲ. ಅವುಗಳಿಗೆ ಪ್ರಭುತ್ವದ ಹಂಗಿಲ್ಲ. ಮಾನವ ಲೋಕ ಮಾತ್ರ ಪ್ರಭುತ್ವದ ಕೃಪಾದೃಷ್ಟಿಗೆ ಹಂಬಲಿಸುತ್ತದೆ. ವಿಧಾನಸೌಧದ ಆಸುಪಾಸಿನಲ್ಲಿ ಅಲೆದಾಡುತ್ತಿರುವ ನಮ್ಮ ಸಾಹಿತಿಗಳನ್ನು ಗಮನಿಸಿ. ಆದರೆ ಮಾನವ ಲೋಕದ ಸಂವೇದನಾಶೀಲ ಪ್ರತಿನಿಧಿಯಾದ ಕವಿ ಪ್ರಭುತ್ವವನ್ನು ನಿರಾಕರಿಸಿ ನಿಲ್ಲುತ್ತಾನೆ, ಹಾಗೆ ನಿಲ್ಲಬೇಕೆಂಬುದು ಕುವೆಂಪು ಅಪೇಕ್ಷೆ. ಕವಿಗರಸುಗಿರಸುಗಳ ಋಣವಿಲ್ಲ/ಅವನಗ್ನಿಮುಖಿ, ಪ್ರಳಯಶಿಖಿ/.

ಈಗ ಮೊದಲು ಬಿಟ್ಟಲ್ಲಿಗೆ ಬರೋಣ. ಧರ್ಮ ಮತ್ತು ರಾಜಕೀಯ ನಮ್ಮ ಸಮಾಜದ ಮೇಲೆ ಗಾಢ ಪ್ರಭಾವ ಬೀರುತ್ತಿರುವ ಪ್ರಮುಖ ಸಂಗತಿಗಳು. ಆದರೆ ನಮ್ಮ ಕಾಲದಲ್ಲಿ ಅವೆರಡೂ ಭ್ರಷ್ಟವಾಗಿವೆ. ಇಂತಹ ಹೊತ್ತಿನಲ್ಲಿ ಮಾರ್ಗದರ್ಶಕ ಭರವಸೆಯ ದನಿಯೆಂದರೆ ಸಾಹಿತಿ ಎಂದು ಮಾರ್ಕೆಜ್ ಹೇಳುತ್ತಾನೆ. ಸಾಹಿತಿ ಇವುಗಳ ಬಗ್ಗೆ ರ್ಚಚಿಸಲೇ ಬೇಕು. ಆದರೆ ಸಾಹಿತಿ ತನ್ನ ಸ್ವಾಯತ್ತತೆಯನ್ನು ಕಾಯ್ದುಕೊಳ್ಳಬೇಕಷ್ಟೆ. ಆದರೆ ಸಮ್ಮೇಳನದಲ್ಲಿ ಆದದ್ದು ಏನು?

ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯುತ್ತಿದ್ದಾಗ ಮಂತ್ರಿಯೊಬ್ಬರು ಆಗಮಿಸಿದರು. ಪರಿಷತ್ತಿನ ಅಧ್ಯಕ್ಷರು ಗಡಿಬಿಡಿಯಿಂದ ಅತ್ತ ಓಡಿದರು. ಅವರನ್ನು ಸ್ವಾಗತಿಸಿ ವೇದಿಕೆಗೆ ಕರೆತಂದರು. ಅವರಿಗೂ ಅಲ್ಲಿ ನಡೆಯುತ್ತಿದ್ದ ಸಭೆಗೂ ಯಾವ ಸಂಬಂಧವೂ ಇರಲಿಲ್ಲ. ಅವರನ್ನು ವೇದಿಕೆಗೆ ಕರೆತರುವ ಅಗತ್ಯವೂ ಇರಲಿಲ್ಲ. ಆದರೂ ಕರೆತಂದರು. ಅವರೂ ಬೇಡವೆನ್ನಲಿಲ್ಲ. ಅವರ ಒಂದು ಪಕ್ಕ ಸಮ್ಮೇಳನಾಧ್ಯಕ್ಷರು, ಮತ್ತೊಂದು ಪಕ್ಕ ಪರಿಷತ್ತಿನ ಅಧ್ಯಕ್ಷರು. ನಡುವೆ ಮಂತ್ರಿ ಮಹಾಶಯರು ವಿರಾಜಮಾನರಾದರು. ಅತ್ತ ಮತ್ತೊಂದು ಕಡೆ ಅದೇ ಸಮಯಕ್ಕೆ ಸಭೆಗೆ ಬಂದ ಸಾಹಿತಿಯೊಬ್ಬರು ಮುಂದಿನ ಸಾಲಿನಲ್ಲಿ ಜಾಗಕ್ಕಾಗಿ ಹುಡುಕಾಡುತ್ತಿದ್ದರು.

(ಲೇಖಕರು ಖ್ಯಾತ ವಿಮರ್ಶಕರು)

 

Leave a Reply

Your email address will not be published. Required fields are marked *

Back To Top