ಪ್ರಧಾನ ಸುತ್ತಿಗೇರಿದ ಪ್ರಜ್ಞೇಶ್

ಮೆಲ್ಬೋರ್ನ್: ಭಾರತದ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಧಾನ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. 29 ವರ್ಷದ ಚೆನ್ನೈ ಆಟಗಾರ ಇದೇ ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಆಡಲಿದ್ದು, ಕಳೆದ 5 ವರ್ಷಗಳಲ್ಲಿ ಗ್ರಾಂಡ್ ಸ್ಲಾಂ ಸಿಂಗಲ್ಸ್ ವಿಭಾಗದ ಪ್ರಧಾನ ಸುತ್ತಿನಲ್ಲಿ ಆಡಲಿರುವ 3ನೇ ಭಾರತೀಯರೆನಿಸಿದ್ದಾರೆ. ಹಿಂದಿನ ಇಬ್ಬರೆಂದರೆ ಸೋಮ್ೇವ್ ದೇವವರ್ಮನ್ ಮತ್ತು ಯೂಕಿ ಭಾಂಬ್ರಿ. ಶುಕ್ರವಾರ ನಡೆದ ಟೂರ್ನಿಯ ಅರ್ಹತಾ ಸುತ್ತಿನ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಪ್ರಜ್ಞೇಶ್ 6-7 (5), 6-4, 6-4 ನೇರಸೆಟ್​ಗಳಿಂದ ಜಪಾನ್​ನ ಯೊಸುಕೆ ವಾಟಾನುಕಿ ವಿರುದ್ಧ ಜಯ ದಾಖಲಿಸಿದರು. ‘ವೈಯಕ್ತಿಕವಾಗಿ ಇದೊಂದು ದೊಡ್ಡ ಸಾಧನೆ. ಹಲವು ವರ್ಷಗಳ ಕನಸು ನನಸಾಗಿದೆ. ಈ ಕ್ಷಣವನ್ನು ವಿವರಿಸಲು ಪದಗಳೇ ಸಿಗುತ್ತಿಲ್ಲ’ ಎಂದು ಪ್ರಜ್ಞೇಶ್ ಪ್ರತಿಕ್ರಿಯಿಸಿದ್ದಾರೆ. ಅರ್ಹತಾ ಸುತ್ತಿನ 3 ಪಂದ್ಯಗಳಲ್ಲೂ ಜಯ ದಾಖಲಿಸಿದ ಪ್ರಜ್ಞೇಶ್ ಈಗಾಗಲೇ 20 ಲಕ್ಷ ರೂ. ಬಹುಮಾನ ಮೊತ್ತ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *