ಪ್ರಧಾನಿ ಮೋದಿ ಸಾಧನೆ ಜನರ ಮುಂದಿಡಿ

ಹೊಸನಗರ: ಕೇವಲ ಐದು ವರ್ಷದಲ್ಲಿ ದೇಶದ ಚಿತ್ರಣ ಬದಲಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಚಿಂತನೆಗಳನ್ನು ಹಾಗೂ ಸಾಧನೆಗಳನ್ನು ಜನರ ಮುಂದಿಡಿ ಎಂದು ಶಿವಮೊಗ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು. ಕಾರಣಗಿರಿ ಸಿದ್ಧಿವಿನಾಯಕ ದೇವಾಲಯದಲ್ಲಿ ಬುಧವಾರ ಪೂಜೆ ಸಲ್ಲಿಸಿದ ಬಳಿಕ ಕಾರ್ಯಕರ್ತರನ್ನು ಭೇಟಿ ಮಾಡಿ ಮಾತನಾಡಿದರು. ಐದು ವರ್ಷದಲ್ಲಿ ಒಂದು ದಿನವೂ ವಿಶ್ರಾಂತಿ ಪಡೆಯದೆ, ದೇಶಕ್ಕಾಗಿ ಹಗಲು ರಾತ್ರಿ ದುಡಿದ ಪ್ರಧಾನಿ ಮೋದಿ ಜಗತ್ತಿನಲ್ಲಿಯೇ ದೇಶಕ್ಕೆ ವಿಶೇಷ ಗೌರವ ತಂದುಕೊಟ್ಟಿದ್ದಾರೆ. ಇದನ್ನು ಜನತೆ ಅರಿಯುವಂತೆ ಮಾಡುವ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದರು. ಲೋಕಸಭಾ ಉಪಚುನಾವಣೆ ನಂತರ ದೊರೆತ ಅತ್ಯಲ್ಪ ಕಾಲದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಹೇಳಬೇಕಿಲ್ಲ. ಅರಸಾಳು ರೈಲ್ವೆ ನಿಲ್ದಾಣ ಅಭಿವೃದ್ಧಿ, ಜನಶತಾಬ್ದಿ ರೈಲು ವಿಸ್ತರಣೆ, ತುಮರಿ ಸೇತುವೆ ಕಾಮಗಾರಿ ವಿಘ್ನಗಳ ನಿವಾರಣೆ ಸೇರಿ ಮಹತ್ವದ ಕೆಲಸಗಳನ್ನು ಮಾಡಿದ್ದೇನೆ ಎಂದು ತಿಳಿಸಿದರು. ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ, ಪದ್ಮನಾಭ ಭಟ್, ತಾಲೂಕು ಬಿಜೆಪಿ ಅಧ್ಯಕ್ಷ ಎ.ವಿ.ಮಲ್ಲಿಕಾರ್ಜುನ್, ಕೆ.ವಿ.ಕೃಷ್ಣಮೂರ್ತಿ, ಮಂಡಾನಿ ಮೋಹನ್, ತೀರ್ಥೇಶ್, ರಾಜಶ್ರೀ ಮತ್ತಿತರರಿದ್ದರು.

Leave a Reply

Your email address will not be published. Required fields are marked *