ಪ್ರಧಾನಿ ಮೋದಿಯಿಂದ ರೈತರ ಕಡೆಗಣನೆ

ರಿಪ್ಪನ್​ಪೇಟೆ: ಪ್ರಧಾನಿಯಾದ ಮೇಲೆ ವಿದೇಶ ಪ್ರಯಾಣಕ್ಕಾಗಿ 1,600 ಕೋಟಿ ರೂ. ವ್ಯಯ ಮಾಡಿ ದೇಶದ ರೈತರನ್ನು ಕಡೆಗಣಿಸಿರುವ ನರೇಂದ್ರ ಮೋದಿ ಅವರನ್ನು ಮತದಾರರು ಮನೆಗೆ ಕಳಿಸಿ, ದೇಶವನ್ನು ಉಳಿಸಿ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಪಟ್ಟಣದ ವಿನಾಯಕ ವೃತ್ತದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ 2 ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡಿ ಅವರ ಬದುಕಿಗೆ ಆಸರೆಯಾಗಿದ್ದಾರೆ. ಆದರೆ ನರೇಂದ್ರ ಮೋದಿ ಅವರು ರೈತರ ಭದ್ರತೆಗಾಗಿ ಯಾವುದೆ ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತ್ತವರ ತಂದೆ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ ಸತತವಾಗಿ ಸಂಸದರಾಗಿ ಆಯ್ಕೆಯಾಗಿ ಪೈಪೋಟಿಯಲ್ಲಿ ಆಸ್ತಿ ಮಾಡಿದ್ದಾರೆ. ಅಭಿವೃದ್ಧಿಗಾಗಿ ಶ್ರಮಿಸಲಿಲ್ಲ. ಈ ಬಾರಿ ಜನರು ಅಭಿವೃದ್ಧಿ ವೈಫಲ್ಯದ ಬಗ್ಗೆ ಪ್ರಶ್ನಿಸುತ್ತಾರೆ ಎಂದು ಅರಿತು ನರೇಂದ್ರ ಮೋದಿ ಹೆಸರಿನಲ್ಲಿ ಮತ ಕೇಳಲಾರಂಭಿಸಿದ್ದಾರೆ. ಬಂಗಾರಪ್ಪ ಹಾಗೂ ಮೈತ್ರಿ ಸರ್ಕಾರಗಳ ಕಾರ್ಯಕ್ರಮ ಅನುಷ್ಠಾನಗೊಳಿಸಲು ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಿ ಎಂದರು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಈ ಚುನಾವಣೆ ರೈತ ಪರವಾದ ಮಹಾಸಮರ. ಆರು ಸಾವಿರ ರೈತರನ್ನು ಒಕ್ಕಲೆಬ್ಬಿಸಲು ಬಿಎಸ್​ವೈ ಮತ್ತು ಮಕ್ಕಳು ಸೇರಿ ತಂದ ಕಾಯ್ದೆಯ ವಿರುದ್ಧದ ಜನಪರ ಹೋರಾಟ. ಆದ್ದರಿಂದ ಸಾಮಾನ್ಯ ಜನರೆಲ್ಲರೂ ಒಗ್ಗೂಡಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಬೇಕು ಎಂದರು.

ಇಲ್ಲೊಬ್ಬ ಶಾಸಕ ಮಾವ-ಅಳಿಯ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ನಾವು ಮಾಡಿದ ಅಭಿವೃದ್ಧಿ ಜನರಿಗೆ ಕೇಳಲಿ, ಕ್ಷೇತ್ರವನ್ನು ಸಂಚರಿಸಲಿ ಆಗ ಅರಿವಾಗುತ್ತದೆ. ಈಗಾಗಲೆ ಮಂಗನ ಕಾಯಿಲೆಯಿಂದ 20 ಜನ ಮೃತಪಟ್ಟಿದ್ದಾರೆ. ಸಮಸ್ಯೆಯಿಂದ ಬಳಲುತ್ತಿರುವ ಜನರ ಬಳಿಗೆ ತೆರಳದಿರುವುದೆ ಇವರ ಸಾಧನೆ ಎಂದು ಆರೋಪಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ, ತಾಲೂಕು ಅಧ್ಯಕ್ಷ ಜಯರಾಮ, ಬಿ.ಜಿ.ನಾಗರಾಜ್, ಜಿಪಂ ಸದಸ್ಯರಾದ ಕಲಗೋಡು ರತ್ನಾಕರ, ಶ್ವೇತಾಬಂಡಿ, ತಾಪಂ ಅಧ್ಯಕ್ಷ ವಾಸಪ್ಪಗೌಡ, ಉಪಾಧ್ಯಕ್ಷೆ ಸುಶೀಲಾ ರಘುಪತಿ, ಸದಸ್ಯರಾದ ಎನ್.ಚಂದ್ರೇಶ್, ಏರಗಿ ಉಮೇಶ್, ಎಪಿಎಂಸಿ ಅಧ್ಯಕ್ಷ ಈಶ್ವರಪ್ಪಗೌಡ, ಬಂಡಿ ರಾಮಚಂದ್ರ, ಎಂ.ಎಂ.ಪರಮೇಶ್, ಸುಮತಿ ಆರ್.ಪೂಜಾರ್, ಅಮೀರ್ ಹಂಜಾ, ವರ್ಗೀಸ್, ಆಸೀಫ್, ಎನ್.ವರ್ತೆಶ್, ಎನ್​ಎಸ್​ಯುುಐ ಅಧ್ಯಕ್ಷ ಪ್ರವೀಣ್​ಕುಮಾರ್ ಇತರರಿದ್ದರು.