ಪ್ರಧಾನಿ ಪಟ್ಟಕ್ಕೆ ರಾಹುಲ್ ಗಾಂಧಿ ಹಗಲು ಕನಸು: ನಿರ್ಮಲಾ ಸೀತಾರಾಮನ್

ವಿಜಯವಾಣಿ ಸುದ್ದಿಜಾಲ ಉಡುಪಿ
ಮಹಾಘಟ್‌ಬಂಧನ್ ಹೆಸರಲ್ಲಿ ದೇಶದ ಪ್ರಧಾನಿಯಾಗಲು ಅರ್ಹತೆ ಇಲ್ಲದವರು ಕನಸು ಕಾಣುತ್ತಿದ್ದಾರೆ. ಪ್ರಧಾನಿ ಪಟ್ಟವೇರು ರಾಹುಲ್ ಗಾಂಧಿ ಕಾಣುತ್ತಿರುವುದು ಹಗಲು ಕನಸು ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವ್ಯಂಗ್ಯವಾಡಿದ್ದಾರೆ.

ಕುಂಜಿಬೆಟ್ಟಿನಲ್ಲಿ ಮಂಗಳವಾರ ‘ಬಿಜೆಪಿ ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಮಾತನಾಡಿ, ರಾಷ್ಟ್ರಕ್ಕೆ ಸದ್ಯ ನರೇಂದ್ರ ಮೋದಿ ಬಿಟ್ಟರೆ ಪರ್ಯಾಯ ನಾಯಕತ್ವ ಇಲ್ಲ. ಅವರನ್ನು ಮತ್ತೆ ಪ್ರಧಾನಿಯಾಗಿಸಲು ಜನರು ತೀರ್ಮಾನಿಸಿದ್ದಾರೆ ಎಂದರು.

ಸೇನೆ ಮತ್ತು ದೇಶ ಪ್ರೇಮದ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಾರೆ. ಪುಲ್ವಾಮಾ ದಾಳಿ ಬಳಿಕ ದೇಶದ ಎಲ್ಲ ಕಡೆ ಇಂಥ ದಾಳಿ ನಡೆಯುವ ಸೂಚನೆ ಅರಿತು ಉಗ್ರರ ಅಡಗುದಾಣವನ್ನೇ ಸ್ಫೋಟಿಸುವ ನಿರ್ಧಾರಕ್ಕೆ ಬರಬೇಕಾಯಿತು. ಯುದ್ಧ ಮಾಡದೇ ಭಯೋತ್ಪಾದಕರನ್ನು ಕೊಂದು ಭಯೋತ್ಪಾದಕರಿಗೆ, ಉಗ್ರ ಚಟುವಟಿಕೆಗೆ ಸಹಕರಿಸುವ ಮಂದಿಗೆ ಪರೋಕ್ಷ ಎಚ್ಚರಿಕೆ ನೀಡಲಾಯಿತು. ಮುಂಬೈ ಮೇಲಿನ ದಾಳಿ ನಡೆದಾಗ ಯುಪಿಎ ಸರ್ಕಾರ ಏನು ಮಾಡಿತು ಎಂದು ಪ್ರಶ್ನಿಸಿದರು.

ರಾಜ್ಯದ ಕಾಂಗ್ರೆಸ್ ನಾಯಕರೊಬ್ಬರು ಸೇನೆಯ ಮುಖ್ಯಸ್ಥರನ್ನು ‘ಸುಳ್ಳು ಹೇಳುವವರು’ ಎನ್ನುತ್ತಾರೆ, ಭಾರತ ದೇಶದಲ್ಲಿ ಇದೆಂಥ ದುರ್ದೈವ. ದೇಶದ ರಕ್ಷಣೆ ವಿಷಯದಲ್ಲಿ ಪ್ರಧಾನಿ ತಾನು ತೆಗೆದುಕೊಂಡ ಗಟ್ಟಿ ನಿರ್ಧಾರದಿಂದಾಗಿ ದೇಶದ ಸಿಪಾಯಿಗಳು ಇಂದು ಗರ್ವದಿಂದ ಕೆಲಸ ಮಾಡುವಂತಾಗಿದೆ ಎಂದರು.

ಮೋದಿ ಅಧಿಕಾರ ಅವಧಿಯಲ್ಲಿ ಕಾಂಗ್ರೆಸ್ ಬಡತನ, ಬಡತನ ಎಂದು ಬೊಬ್ಬೆ ಹೊಡೆಯುತ್ತಿದೆ. ಅಧಿಕಾರ ಸಿಕ್ಕರೆ ಬಡವರಿಗೆ ನ್ಯಾಯ ಒದಗಿಸಲಾಗುವುದು ಎಂದು ಹೇಳುವ ಕಾಂಗ್ರೆಸ್ 60 ವರ್ಷಗಳಿಂದ ಮಾಡಿದ್ದೇನು ಎಂದು ಪ್ರಶ್ನಿಸಿದರು. ಚುನಾವಣೆ ಸಮಯದಲ್ಲಿ ಮಾತ್ರ ಕಾಂಗ್ರೆಸ್‌ಗೆ ಬಡತನ ನೆನಪಾಗುತ್ತದೆ ಎಂದರು. ಸಂಸದೆಯಾಗಿ ಮಹತ್ವದ ಜನಪರ ಯೋಜನೆಗಳನ್ನು ಶೋಭಾ ಕರಂದ್ಲಾಜೆ ಕ್ಷೇತ್ರಕ್ಕೆ ತಂದಿದ್ದಾರೆ, ಮೋದಿ ಮತ್ತೆ ಪ್ರಧಾನಿಯಾಗಲು ಬಿಜೆಪಿ ಅಭ್ಯರ್ಥಿಗೆ ಜನತೆ ಬೆಂಬಲ ನೀಡಬೇಕು ಎಂದು ಕೋರಿದರು.

ಬಿಜೆಪಿ ರಾಷ್ಟ್ರೀಯ ನಾಯಕಿ ಕಿರಣ್ ಮಹೇಶ್ವರಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜೀವರಾಜ್, ಶಾಸಕರಾದ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕುಮಾರಸ್ವಾಮಿ, ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್, ಸುನೀಲ್ ಕುಮಾರ್, ಜಿಪಂ ಅಧ್ಯಕ್ಷ ದಿನಕರ ಬಾಬು, ಮುಖಂಡರಾದ ಯಶಪಾಲ್ ಸುವರ್ಣ, ಉದಯ ಕುಮಾರ್ ಶೆಟ್ಟಿ, ಕುಯ್ಲಡಿ ಸುರೇಶ್ ನಾಯ್ಕ, ಶ್ರೀಶ ನಾಯಕ್, ಕುತ್ಯಾರು ನವೀನ್ ಶೆಟ್ಟಿ ಮೊದಲಾದವರಿದ್ದರು.

ಜಯಪ್ರಕಾಶ್ ಹೆಗ್ಡೆ ಅನುಪಸ್ಥಿತಿ
ಮಾಜಿ ಸಂಸದ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮದಲ್ಲಿ ಗೈರಾಗಿದ್ದರು. ನಾಮಪತ್ರ ಸಲ್ಲಿಸುವಾಗಲು ಹೆಗ್ಡೆ ಇರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ನಾನು ಅವರಿಗೆ ಕರೆ ಮಾಡಿದ್ದೇನೆ, ಸಂಪರ್ಕಕ್ಕೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಕಾರ್ಯಕ್ರಮ, ಪ್ರಚಾರಗಳಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದರು.

ರಾಹುಲ್ ಹೇಳಿಕೆ ಚುನಾವಣಾ ಗಿಮಿಕ್
ಬಡ ಕುಟುಂಬದ ಖಾತೆಗೆ 72 ಸಾವಿರ ರೂ. ಜಮೆ ಮಾಡುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ಕೇವಲ ಚುನಾವಣಾ ಗಿಮಿಕ್. ದೇಶದ ಅರ್ಥವ್ಯವಸ್ಥೆಗೆ ಇದರಿಂದ ಹಾನಿಯಾಗಬಹುದು. ಆದರೆ ಈ ಬಗ್ಗೆ ಯಾವುದೇ ಪೂರ್ವ ತಯಾರಿ ಅಥವಾ ಮಾಹಿತಿ ಇಲ್ಲದೆ ಭರವಸೆ ನೀಡುವುದು ಅವರ ಅಭ್ಯಾಸ. 1971ರಲ್ಲಿ ಗರೀಬಿ ಹಠಾವೋ ಘೋಷಣೆ ಮಾಡಲಾಗಿತ್ತು. ಅದು ಇಂದು ಏನಾಗಿದೆ? ಮಧ್ಯಪ್ರದೇಶದಲ್ಲಿ ಮಾಡಿದ ಸಾಲಮನ್ನಾ ಘೋಷಣೆ ಇವತ್ತಿಗೂ ರೈತರಿಗೆ ತಲುಪಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ರಕ್ಷಣಾ ಸಚಿವರು ಹೇಳಿದರು.

ರಫೇಲ್ ಒಪ್ಪಂದದ ಪ್ರತಿಗಳನ್ನು ಅಕ್ರಮವಾಗಿ ಪಡೆಯಲಾಗಿದೆ ಎಂಬುದನ್ನು ಅಟಾರ್ನಿ ಜನರಲ್ ಸುಪ್ರೀಂ ಕೋರ್ಟ್‌ಗೆ ಈಗಾಗಲೇ ತಿಳಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಗೌಪ್ಯ ದಾಖಲೆಗಳನ್ನು ಹೇಗೆ ಸೋರಿಕೆ ಆಯಿತು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು.