ಚಿತ್ರದುರ್ಗ: ಬಿಎಸ್ಸಿ ನರ್ಸಿಂಗ್ ಕಾಲೇಜಿಗೆ 10 ಕೊಠಡಿ ಒಳಗೊಂಡ ಪ್ರತ್ಯೇಕ ಕಟ್ಟಡ ನಿರ್ಮಾಣ, ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಜಿಲ್ಲಾಸ್ಪತ್ರೆಯ ಸರ್ಕಾರಿ ನರ್ಸಿಂಗ್ ಕಾಲೇಜಿನ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸುಸಜ್ಜಿತವಾದ ಬೋಧನಾ ಕೊಠಡಿ, ಗ್ರಂಥಾಲಯ ಸೌಲಭ್ಯ ಸೇರಿ ಎಲ್ಲಾ ಬೇಡಿಕೆ ಈಡೇರಿಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಪ್ರಾಯೋಗಿಕ ವಿಷಯಗಳ ಅಧ್ಯಯನಕ್ಕೆ ಡಿಜಿಟಲ್ ಪ್ರಯೋಗಾಲಯ, ಪರಿಕರಗಳ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಗೃಹ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಗಣಕಯಂತ್ರ ಪ್ರಯೋಗಾಲಯ, ಕಮ್ಯುನಿಟಿ ಪೋಸ್ಟಿಂಗ್ ಹಾಗೂ ವೀಕ್ಷಣಾ ಭೇಟಿಗಾಗಿ ಬಸ್ ವ್ಯವಸ್ಥೆ, ಪ್ರತ್ಯೇಕ ವಸತಿ ನಿಲಯ ಸೌಕರ್ಯ, ಅತ್ಯಾಧುನಿಕ ತರಬೇತಿ, ಆಟದ ಮೈದಾನ ನಿರ್ಮಿಸಬೇಕು ಎಂದು ಕೋರಿದರು.