ಪ್ರತ್ಯೇಕ ರಾಜ್ಯಕ್ಕೆ ಪರ-ವಿರೋಧ ಹೋರಾಟ

ಗದಗ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಬಂದ್​ಗೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಪರ-ವಿರೋಧ ಪ್ರತಿಭಟನೆ ಜರುಗಿದವು.

ಕಳಸಾ-ಬಂಡೂರಿ ಹಾಗೂ ಮಲಪ್ರಭಾ ಜೋಡಣಾ ಹೋರಾಟ ಸಮಿತಿ ಪದಾಧಿಕಾರಿಗಳು ಉತ್ತರ ಕರ್ನಾಟಕ ಸರ್ವತೋಮುಖ ಏಳಿಗೆಗಾಗಿ ಪ್ರತ್ಯೇಕ ರಾಜ್ಯ ಅವಶ್ಯ ಎಂದು ಪ್ರತಿಭಟನೆ ನಡೆಸಿದರೆ, ಎಚ್. ಶಿವರಾಮೇಗೌಡ ಹಾಗೂ ಟಿ.ಎ. ನಾರಾಯಣಗೌಡ್ರ ಎರಡು ಬಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಖಂಡ ಕರ್ನಾಟಕಕ್ಕೆ ಆಗ್ರಹಿಸಿ ಪ್ರತಿಭಟಿಸಿದರು.

ಕಳಸಾ-ಬಂಡೂರಿ ಹಾಗೂ ಮಲಪ್ರಭಾ ಜೋಡಣಾ ಹೋರಾಟ ಸಮಿತಿ ಪದಾಧಿಕಾರಿಗಳು ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕವಾಗಬೇಕು ಎಂದು ಪ್ರತಿಭಟಿಸಿದರು. ದಶಕಗಳ ಕಾಲದಿಂದ ಉತ್ತರ ಕರ್ನಾಟಕದ 13 ಜಿಲ್ಲೆಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ಉತ್ತರ ಕರ್ನಾಟಕ ನಿರ್ಲಕ್ಷ್ಯ್ಕೊಳಗಾಗಿದೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗದ ಕಾರಣ ಯುವಕರು ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕವನ್ನೇ ಅವಲಂಬಿಸಬೇಕಾದ ಅನಿವಾರ್ಯತೆಯಿದೆ. ನೀರಿನ ಯೋಜನೆಗಳು ಜಾರಿಯಾಗುತ್ತಿಲ್ಲ. ರೈತರ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ಆದ್ದರಿಂದ ಉತ್ತರ ಕರ್ನಾಟಕ ಪ್ರತ್ಯೇಕವಾಗಲೇಬೇಕು ಎಂದು ಆಗ್ರಹಿಸಿದರು.

ನಂತರ ಪಾದಯಾತ್ರೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಜಿಲ್ಲಾ ಸಂಚಾಲಕ ವಸಂತ ಪಡಗದ, ಪದಾಧಿಕಾರಿಗಳಾದ ಆನಂದ ತೊಂಡಿಹಾಳ, ವಿಜಯ ನರಗುಂದ, ವಿನೋದ ಮೊರಬದ, ಹನುಮಂತ ಮಿಶೆನ್ನವರ, ದೀಪಕ ದಡ್ಡಿ, ಅಮರೇಶ ನಾಗಾವಿ, ಮಂಜುನಾಥ ಕುರ್ತಕೋಟಿ ಮತ್ತಿತರರಿದ್ದರು.

ಟಿ.ಎ. ನಾರಾಯಣಗೌಡ್ರ ಬಣದ ಕರವೇ ಕಾರ್ಯಕರ್ತರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡ, ಡಾ. ನಂಜುಂಡಪ್ಪ ವರದಿ ಜಾರಿ ಮಾಡುವ ಮೂಲಕ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರದ ಮುಳಗುಂದ ನಾಕಾದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ರ‍್ಯಾಲಿ ನಡೆಸಿದ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಬೆಳಗಾವಿಯಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸರ್ಕಾರಿ ಕಚೇರಿಗಳು ನಿತ್ಯ ಕಾರ್ಯ ನಿರ್ವಹಿಸುವಂತಾಗಬೇಕು. ಉತ್ತರ ಕರ್ನಾಟಕ್ಕೆ ಸಂಬಂಧಿಸಿದ ಕಚೇರಿಗಳನ್ನು ಸ್ಥಳಾಂತರಿಸಬೇಕು. ವಿಶೇಷ ಪ್ಯಾಕೇಜ್ ಘೊಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ, ಪದಾಧಿಕಾರಿಗಳಾಧ ಶರಣು ಗೋಡಿ, ಹಾಲಪ್ಪ ಅರಹುಣಸಿ, ನಿಂಗನಗವಡ ಮಾಲಿಪಾಟೀಲ, ನಿಂಗಪ್ಪ ಹೊನ್ನಾಪೂರ ಸೇರಿದಂತೆ ಮತ್ತಿತರಿದ್ದರು.

ಇನ್ನು ಎಚ್. ಶಿವರಾಮೇಗೌಡ ಬಣದ ಕರವೇ ಕಾರ್ಯಕರ್ತರು, ಜೈ ಭೀಮ ಸೇನಾ ಸಂಘರ್ಷ ಸಮಿತಿ ಕಾರ್ಯಕರ್ತರು, ಕನ್ನಡಪರ ಹಾಗೂ ರೈತ ಪರ ಸಂಘಟನೆಗಳು ಮಹಾತ್ಮಾ ಗಾಂಧಿ ವೃತ್ತದಲ್ಲಿ ಅಖಂಡ ಕರ್ನಾಟಕ ಉಳಿಯಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಮಂಜುನಾಥ ಪರ್ವತಗೌಡ್ರ, ಜೈ ಭೀಮ ಸೇನಾ ಸಂಘರ್ಷ ಸಮಿತಿ ಅಧ್ಯಕ್ಷ ಗಣೇಶ ಹುಬ್ಬಳ್ಳಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.