ಪ್ರತ್ಯೇಕ ಧರ್ಮದ ಕೂಗು ಸರಿಯಲ್ಲ

ರಾಣೆಬೆನ್ನೂರ: ಶಿವಶಿಂಪಿ ಸಮಾಜ ಕೂಡ ವೀರಶೈವ ಲಿಂಗಾಯತದ ಒಂದು ಭಾಗವಾಗಿದೆ. ವೀರಶೈವ ಲಿಂಗಾಯತ ಸಮಾಜ ಒಂದೇ ಆಗಿದ್ದು, ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಸರಿಯಲ್ಲ ಎಂದು ನಗರಸಭೆ ಮಾಜಿ ಸದಸ್ಯ ಮಂಜುನಾಥ ಗೌಡಶಿವಣ್ಣನವರ ಹೇಳಿದರು.
ನಗರದ ಸಾಲೇಶ್ವರ ಕಲ್ಯಾಣಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಶರಣ ಶಿವದಾಸಿಮಯ್ಯನವರ ಜಯಂತ್ಯುತ್ಸವ ಹಾಗೂ ಲಿಂಗಾಯತ ಶಿವಶಿಂಪಿ ಸಮಾಜದ ಜಿಲ್ಲಾ ಉತ್ಸವದಲ್ಲಿ ಅವರು ಮಾತನಾಡಿದರು. ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಅನಗತ್ಯವಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ವಿವಾದ ಸೃಷ್ಟಿಸಿದರು. ಅದರಲ್ಲಿ ಕೆಲವರು ಮಾತ್ರ ಯಶಸ್ವಿಯಾದರು ಎಂದರು. ಯಾವುದೇ ಸಮಾಜ ಸಣ್ಣದು ಅಥವಾ ದೊಡ್ಡದು ಎಂಬುದು ಮುಖ್ಯವಲ್ಲ. ಅದು ನಡೆಯುವ ದಾರಿ ಹಾಗೂ ಸಂಘಟನೆ ಮುಖ್ಯವಾಗಿದೆ ಎಂದರು.
ಸಮಾಜದ ಜಿಲ್ಲಾಧ್ಯಕ್ಷ ಬಕ್ಕೇಶಪ್ಪ ಕುಬಸದ ಮಾತನಾಡಿ, ಸಮಾಜ ವ್ಯವಸ್ಥಿತವಾಗಿ ಸಂಘಟನೆಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟನೆ ಬಲಪಡಿಸಲು ಮತ್ತಷ್ಟು ಪರಿಣಾಮಕಾರಿಯಾಗಿ ಶ್ರಮಿಸಬೇಕು ಎಂದರು.
ಸಾಹಿತಿ ಡಾ. ರಾಜೇಂದ್ರ ಗಡಾದ ಉಪನ್ಯಾಸ ನೀಡಿದರು. ಸಾನ್ನಿಧ್ಯ ವಹಿಸಿದ್ದ ಗುಡ್ಡದಆನ್ವೇರಿಯ ಶಿವಯೋಗಿಶ್ವರ ಸ್ವಾಮೀಜಿ ಉದ್ಘಾಟಿಸಿದರು.
ತಾಲೂಕು ಲಿಂಗಾಯತ ಶಿವಶಿಂಪಿ ಸಮಾಜದ ಅಧ್ಯಕ್ಷ ಸತೀಶ ಕುಬಸದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ವೀರಪ್ಪ ಸಂಶಿ, ಎಸ್.ಎಸ್. ಜವಳಿ, ಮನೋಹರ ಗೊಂದಿ, ವೀರಣ್ಣ ಬುಕ್ಕಾಂಬುದಿ, ನಾಗರಾಜಪ್ಪ ಮುಡಬಿ, ಸಿ.ಎಫ್. ಅಂಗಡಿ, ಪ್ರಕಾಶ ಹಾವಣಗಿ, ಪರಮೇಶಪ್ಪ ಅಂಗಡಿ ಉಪಸ್ಥಿತರಿದ್ದರು.
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಶಿವಶಿಂಪಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪೊಲೀಸ್ ಇಲಾಖೆಯ ಕರಬಸಪ್ಪ ಗೊಂದಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಕೆಇಬಿ ವಿನಾಯಕ ದೇವಸ್ಥಾನದ ಬಳಿಯಿಂದ ಶರಣ ಶಿವದಾಸಿಮಯ್ಯನವರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.