ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಸಾವು

ತೀರ್ಥಹಳ್ಳಿ/ಹೊಳೆಹೊನ್ನೂರು/ಸಾಗರ: ಜಿಲ್ಲೆಯ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ನಾಲ್ವರು ಸೋಮವಾರ ಮೃತಪಟ್ಟಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಮಾಳೂರು ಪೋಲಿಸ್ ಠಾಣಾ ವ್ಯಾಪ್ತಿಯ ತೂದೂರು ದೊಡ್ಮನೆ ಕ್ರಾಸ್ ಬಳಿ ಹೆದ್ದಾರಿ ಕೆಲಸದಲ್ಲಿ ನಿರತನಾಗಿದ್ದ ಕಾರ್ವಿುಕನ ಮೇಲೆ ಕಾರು ಹರಿದ ಪರಿಣಾಮ ಬಸಪ್ಪ (60) ಎಂಬುವರು ಮೃತಪಟ್ಟಿದ್ದಾರೆ. ಇವರು ಭದ್ರಾವತಿ ಸಮೀಪದ ಅಗರದಹಳ್ಳಿಯವರು. ಕಾರು ಹರಿದು ಗಂಭೀರ ಗಾಯಗೊಂಡಿದ್ದ ಇವರನ್ನು ಜೆಸಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಣಿಪಾಲಕ್ಕೆ ಸಾಗಿಸುವ ವೇಳಿ ಆಗುಂಬೆ ಬಳಿ ಮೃತರಾಗಿದ್ದಾರೆ. ಹೆದ್ದಾರಿ ಕಾಮಗಾರಿಯಲ್ಲಿ ತೊಡಗಿದ್ದ ವೇಳೆ ತೀರ್ಥಹಳ್ಳಿ ಕಡೆಯಿಂದ ವೇಗವಾಗಿ ಬಂದ ಕಾರು ಬಸಪ್ಪ ಅವರಿಗೆ ಅಪ್ಪಳಿಸಿದೆ. ಸುದೈವಶಾತ್ ಇವರ ಪಕ್ಕದಲ್ಲಿದ್ದವರು ತಪ್ಪಿಸಿಕೊಂಡಿದ್ದಾರೆ. ಶಿವಮೊಗ್ಗದವರದು ಎಂದು ಹೇಳಲಾಗಿರುವ ಕಾರು ಚರಂಡಿಗೆ ಬಿದ್ದಿದೆ. ಕಾರಿನಲ್ಲಿದ್ದವರಿಗೂ ಪೆಟ್ಟು ಬಿದ್ದಿದೆ.

ಸಾಗರದ ಚಂದ್ರಮಾವಿನಕೊಪ್ಪಲು ಬಳಿ ಯುವಕನೊಬ್ಬ ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಮೃತ ಯುವಕನನ್ನು ತುಮಕೂರು ಜಿಲ್ಲೆ ತುರುವೇಕೆರೆ ಸಮೀಪದ ಕಲ್ಲಳ್ಳಿ ಗ್ರಾಮದ ವಾಸಿ ಕಂಚಿರಾಯ (30) ಎಂದು ಗುರುತಿಸಲಾಗಿದೆ. ಕಂಚಿರಾಯ ಅವರು ಫೋಟೋಗ್ರಾಫರ್ ಆಗಿದ್ದರು. ಬೆಳಗ್ಗೆ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಡುವ ಇಂಟರ್​ಸಿಟಿ ರೈಲಿಗೆ ಕಂಚಿರಾಯ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.