ಕೂಡ್ಲಿಗಿ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಈ ಹಿನ್ನೆಲೆಯಲ್ಲಿ ಮನೆ ಮನೆಗೂ ಭೇಟಿ ನೀಡುವುದಾಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ರಾಯಪುರ ಗ್ರಾಮದಲ್ಲಿ ಶಾಸಕರ ನಡೆ ಮನೆ, ಮನೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಕ್ಷೇತ್ರದಲ್ಲಿ ಅನೇಕ ಸೌಲಭ್ಯಗಳು ಅಶಕ್ತ ಜನರಿಗೆ ಇನ್ನೂ ತಲುಪುತ್ತಿಲ್ಲ. ಇದರಿಂದಾಗಿ ನಿತ್ಯ ಕ್ಷೇತ್ರದ ಜನರು ಅರ್ಜಿ ಹಿಡಿದು ಮನೆಗೆ ಬರುತ್ತಿದ್ದಾರೆ. ಇದನ್ನು ಮನಗಂಡು ಕ್ಷೇತ್ರದ ಪ್ರತಿ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ಬಗೆಹರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಿರುವೆ ಎಂದರು.
ಕ್ಷೇತ್ರದ ಎಲ್ಲ ಗ್ರಾಮಗಳ ಪ್ರತಿ ಮನೆಗೆ ನಮ್ಮ ಸ್ವಯಂ ಸೇವಕರು ಭೇಟಿ ಮಾಡಿ 180 ಅಂಶಗಳ ಪಟ್ಟಿ ಮಾಡುವ ಸರ್ವೇ ಕಾರ್ಯ ಮಾಡಲಿದ್ದಾರೆ. ಈ ಪ್ರಕಾರ ಬಡ, ನಿರ್ಗತಿಕ ಕುಟುಂಬದ ಸಮಸ್ಯೆಗಳನ್ನು ಅರಿತು ಸ್ಥಳದಲ್ಲೇ ಅಧಿಕಾರಿಗಳನ್ನು ಕರೆಯಿಸಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಕೂಡ್ಲಿಗಿ ದೊಡ್ಡ ಕ್ಷೇತ್ರವಾಗಿದ್ದು, ಜನರು 50 ಕಿಮಿ ದೂರದಿಂದ ಕೆಲಸ ಬಿಟ್ಟು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ ಮನೆ ಬಾಗಿಲಿಗೆ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ರಾಯಪುರ ಗ್ರಾಮದಲ್ಲಿ ಆಶ್ರಯ ಮನೆ, ವೃದ್ಧಾಪ್ಯ ವೇತನ, ಪಡಿತರ, ಆಧಾರ ಕಾರ್ಡ್ ಸಮಸ್ಯೆ, ವಿದ್ಯುತ್, ಶೌಚಗೃಹ, ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ನಾನಾ ಯೋಜನೆಗಳ ಕುರಿತು 150 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಕಾರ್ಯಕ್ರಮದಡಿ ಪ್ರತಿ ಸೋಮವಾರ ಕ್ಷೇತ್ರದ ಪ್ರತಿ ಗ್ರಾಮಕ್ಕೂ ತೆರಳಿ ಸಮಸ್ಯೆ ಕೇಳಿ ಬಗೆಹರಿಸಲಾಗುವುದು ಎಂದು ಶಾಸಕ ಶ್ರೀನಿವಾಸ್ ಹೇಳಿದರು.
ತಹಸೀಲ್ದಾರ್ ಎಂ.ರೇಣುಕಾ, ಡಾ.ಎಸ್.ಪಿ.ಪ್ರದೀಪ್ ಕುಮಾರ್, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಕೆ.ಜಿ.ಆಂಜನೇಯ, ಸಿಡಿಪಿಒ ಮಾಲಂಬಿ, ನರೇಗಾ ಸಹಾಯಕ ನಿರ್ದೇಶಕ ಪ್ರಕಾಶ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ದಿನ್ನೆ ಮಲ್ಲಿಕಾರ್ಜುನ, ಗುಡೇಕೋಟೆ ರಾಘವೇಂದ್ರ ಸ್ವಾಮಿ, ನರಸಿಂಹಗಿರಿ ಎಸ್.ವೆಂಕಟೇಶ, ರಾಯಪುರ ಕೃಷ್ಣಪ್ಪ ಇತರರಿದ್ದರು.