More

  ಪ್ರತಿ ಟಿಕೆಟ್​ನ ಮೇಲೆ 9 ರೂ. ಹೆಚ್ಚಳ

  ಕಾರವಾರ: ಕರಾವಳಿಯ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣಿಕರಿಗೂ ಟೋಲ್ ಶುಲ್ಕದ ಬಿಸಿ ತಟ್ಟಿದೆ.

  ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಐಆರ್​ಬಿ ಕಂಪನಿ ಟೋಲ್ ಶುಲ್ಕ ವಸೂಲಿ ಪ್ರಾರಂಭಿಸಿದ್ದರಿಂದ ಉಂಟಾಗುವ ಹೆಚ್ಚುವರಿ ವೆಚ್ಚ ಭರಿಸಿಕೊಳ್ಳಲು ಸಂಸ್ಥೆ ಈ ವ್ಯಾಪ್ತಿಯ ಬಸ್ ಪ್ರಯಾಣ ದರ ಹೆಚ್ಚಿಸಿದೆ. ಫೆ.14 ರಿಂದಲೇ ಹೊಸ ದರ ಜಾರಿಗೆ ಬಂದಿದೆ.

  ಒಂದು ಟೋಲ್ ದಾಟಿ ಹೋಗುವ ಬಸ್​ನ ಪ್ರತಿ ಟಿಕೆಟ್ ಮೇಲೆ 9 ರೂ.ಗಳನ್ನು ಹೆಚ್ಚುವರಿಯಾಗಿ ಪಡೆಯಲಾಗುತ್ತಿದೆ. ಉದಾಹರಣೆಗೆ ಕಾರವಾರ-ಅಂಕೋಲಾ ನಡುವೆ ಇದುವರೆಗೆ ಒಬ್ಬ ವ್ಯಕ್ತಿಗೆ 33 ರೂ. ಟಿಕೆಟ್ ದರ ಇತ್ತು. ಶುಕ್ರವಾರದಿಂದ ಅದನ್ನು 42 ರೂ.ಗೆ ಹೆಚ್ಚಿಸಲಾಗಿದೆ. ಕಾರವಾರದಿಂದ ಹೊನ್ನಾವರಕ್ಕೆ ತೆರಳುವವರಿದ್ದರೆ ಎರಡು ಟೋಲ್ ದಾಟಬೇಕಾಗಿರುವುದರಿಂದ ಪ್ರತಿ ಪ್ರಯಾಣಿಕ 18 ರೂ. ಹೆಚ್ಚುವರಿಯಾಗಿ ತೆರಬೇಕಿದೆ. ಕಾರವಾರದಿಂದ ಉಡುಪಿಗೆ ತೆರಳಬೇಕಿದ್ದರೆ ಮೂರು ಟೋಲ್ ದಾಟಬೇಕಿದ್ದು, ಪ್ರಯಾಣಿಕನೊಬ್ಬ 27 ರೂ. ಹೆಚ್ಚುವರಿ ಶುಲ್ಕ ತೆರಬೇಕಿದೆ.

  ಪ್ರತಿ ಟ್ರಿಪ್​ಗೆ 120 ರೂ: ಚತುಷ್ಪಥ ಕಾಮಗಾರಿ, ಟೋಲ್ ವಸೂಲಿ ಗುತ್ತಿಗೆ ಪಡೆದ ಐಆರ್​ಬಿ ಕಂಪನಿಯು ಎನ್​ಡಬ್ಲ್ಯುಕೆಆರ್​ಟಿಸಿಯಿಂದ ಸದ್ಯ ಸ್ಥಳೀಯ ಕೆಲವೇ ಕೆಲವು ಬಸ್​ಗಳಿಂದ ಮಾತ್ರ ಟೋಲ್ ಶುಲ್ಕ ಆಕರಿಸುತ್ತಿಲ್ಲ. ಎಕ್ಸ್​ಪ್ರೆಸ್ ಹಾಗೂ ದೂರ ಪ್ರಯಾಣದ ಎಲ್ಲ ಮಾರ್ಗಗಳ ಬಸ್​ನ ಪ್ರತಿ ಟ್ರಿಪ್​ಗೆ 120 ರೂ. ಶುಲ್ಕ ಪಾವತಿಸುತ್ತಿದೆ. ದಿನಕ್ಕೆ ನಾಲ್ಕಾರು ಬಾರಿ ಓಡಾಡುವ ಬಸ್​ಗಳಿಗೂ ಇದೇ ದರ ಅನ್ವಯವಾಗುತ್ತಿದೆ. ಮಲ್ಟಿ ಎಕ್ಸೆಲ್ ವೊಲ್ವೊ ಬಸ್​ಗಳಿಗೆ ಇನ್ನಷ್ಟು ಹೆಚ್ಚು ಹಣ ಪಾವತಿಸಬೇಕಿದೆ ಎಂಬುದು ಅಧಿಕಾರಿಗಳು ನೀಡುವ ಮಾಹಿತಿ.

  ನೋಂದಣಿ ಸಂಖ್ಯೆ ಸಮಸ್ಯೆ: ಐಆರ್​ಬಿ ಸ್ಥಳೀಯ ನೋಂದಣಿಯ ವಾಹನಗಳಿಗೆ ಸದ್ಯ ಗೊಂದಲ ಬಗೆಹರಿಯುವವರೆಗೆ ಶುಲ್ಕ ವಸೂಲಿ ಮಾಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಎದುರು ಒಪ್ಪಿಕೊಂಡಿದೆ. ಎನ್​ಡಬ್ಲ್ಯುಕೆಆರ್​ಟಿಸಿಯಲ್ಲಿ ಜಿಲ್ಲೆಯ ಹಲವು ಘಟಕಗಳಲ್ಲಿರುವ ಬಸ್​ಗಳು ಬೇರೆ ಜಿಲ್ಲೆಯ ನೋಂದಣಿ ಸಂಖ್ಯೆ ಹೊಂದಿರುವುದೂ ಸಮಸ್ಯೆಯಾಗಿದೆ.

  ಎಲ್ಲೇ ಟೋಲ್ ಶುಲ್ಕ ವಸೂಲಿ ಪ್ರಾರಂಭವಾದರೂ ಅಲ್ಲಿನ ದರ ಪಟ್ಟಿಯನ್ನು ನಾವು ಕೇಂದ್ರ ಕಚೇರಿಗೆ ಕಳಿಸುತ್ತೇವೆ. ಕೇಂದ್ರ ಕಚೇರಿಯು ಟೋಲ್​ಶುಲ್ಕ ಭರಿಸಲು ಬೇಕಾದ ಹೆಚ್ಚುವರಿ ದರವನ್ನು ನಿಗದಿ ಮಾಡುತ್ತದೆ. ಅದರಂತೆ ಟಿಕೆಟ್ ಯಂತ್ರದಲ್ಲಿ ನಾವು ಮಾರ್ಪಾಡು ಮಾಡುತ್ತೇವೆ. ಸದ್ಯ ಟೋಲ್ ಶುಲ್ಕ ನೀಡುವ ಬಸ್​ಗಳಿಗೆ ಮಾತ್ರ ನಾವು ಹೆಚ್ಚುವರಿ ದರ ವಿಧಿಸುತ್ತಿದ್ದೇವೆ. ಜಿಲ್ಲೆಯ ಕರಾವಳಿಯಲ್ಲಿ ಪ್ರತಿ ಟ್ರಿಪ್​ಗೂ ಶುಲ್ಕ ಆಕರಣೆ ಮಾಡುತ್ತಿರುವ ಬಗ್ಗೆ ನಾವು ಕೇಂದ್ರ ಕಚೇರಿಗೆ ಪತ್ರ ಬರೆದಿದ್ದೇವೆ. ಅದಿನ್ನೂ ಚರ್ಚೆಯ ಹಂತದಲ್ಲಿದೆ. -ವಿವೇಕ ಹೆಗಡೆ ಎನ್​ಡಬ್ಲ್ಯುಕೆಆರ್​ಟಿಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts