ವಿಜಯವಾಣಿ ಸುದ್ದಿಜಾಲ ಮಂಗಳೂರು
ದಕ್ಷಿಣ ಕನ್ನಡ, ಉಡುಪಿ ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಕಚೇರಿ ಕಟ್ಟಡಕ್ಕೆ ನಗರದ ಮೇರಿಹಿಲ್‌ನಲ್ಲಿ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಶೈಕ್ಷಣಿಕ ಹಬ್ ಎಂದು ಗುರುತಿಸಲಾಗಿರುವ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ಉತ್ತಮ ಆರೋಗ್ಯ ಸೇವೆ ಇರುವ ಹಿನ್ನೆಲೆಯಲ್ಲಿ ಇಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಯೋಜನೆ ವಿಳಂಬವಾಗಿದೆ. ಆದರೆ ಈ ಉಭಯ ಜಿಲ್ಲೆಗಳಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಗತ್ಯ ಇದೆ. ಹಳ್ಳಿಗಾಡಿನ, ಕಷ್ಟ, ಬಡತನ ಗೊತ್ತಿದ್ದವರು ವೈದ್ಯರಾದರೆ ಅವರು ಬಡರೋಗಿಗಳ ಕಷ್ಟವನ್ನು ಹೆಚ್ಚು ಅರ್ಥ ಮಾಡಿಕೊಳ್ಳಬಲ್ಲರು. ಈ ದಿಕ್ಕಿನಲ್ಲೂ ಸರ್ಕಾರ ಚಿಂತನೆ ನಡೆಸಲಿದೆ ಎಂದರು.
*ಉಚಿತ ಚಿಕಿತ್ಸೆ:
ಬಿಪಿಎಲ್ ಕಾರ್ಡ್ ಇರುವ ಕುಟುಂಬದ ಸದಸ್ಯರಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆ, ನೆಪ್ರೊಲಾಜಿ ಇನ್‌ಸ್ಟಿಟ್ಯೂಟ್‌ಗಳಲ್ಲಿ ಉಚಿತ ಚಿಕಿತ್ಸೆ ನೀಡಬೇಕು. ಎಪಿಎಲ್ ಕಾರ್ಡ್‌ದಾರರಿಗೆ ಸಾಮರ್ಥ್ಯ ನೋಡಿ ಶುಲ್ಕ ನಿಗದಿಪಡಿಸಬೇಕು. ಸರ್ಕಾರಿ ವ್ಯವಸ್ಥೆಯಲ್ಲೇ ಕಿಡ್ನಿ, ಲಿವರ್ ಅಂಗಾಂಗ ಕಸಿಗಳನ್ನು ಗರಿಷ್ಠ ಪ್ರಮಾಣದಲ್ಲಿ ನಡೆಸಬೇಕು ಎಂದು ಸೂಚಿಸಿದ್ದೇನೆ. ಕಿಡ್ನಿ ಕಸಿಗೆ ಕಾಯುತ್ತಿರುವವರ ಪಟ್ಟಿಯಲ್ಲಿ 5 ಸಾವಿರ ಮಂದಿ ಇದ್ದಾರೆ. ದಾನಿಗಳು ಸಿಕ್ಕರೆ ನಿತ್ಯ ಕಿಡ್ನಿ ಕಸಿ ಮಾಡುವ ನುರಿತ ವೈದ್ಯರ ತಂಡ ನಮ್ಮಲ್ಲಿದೆ ಎಂದು ತಿಳಿಸಿದರು.
ರಾಜೀವ್ ಗಾಂಧಿ ವಿವಿ ಏಷ್ಯಾದ ಅತ್ಯಂತ ದೊಡ್ಡ ಆರೋಗ್ಯ ವಿಶ್ವವಿದ್ಯಾಲಯವಾಗಿದೆ. 3.5 ಲಕ್ಷ ವೈದ್ಯ ವಿದ್ಯಾರ್ಥಿಳಿರುವ ಅತ್ಯಂತ ದೊಡ್ಡ ಆರೋಗ್ಯ ವಿವಿ ಇದಾಗಿದೆ. ಆದ್ದರಿಂದ ಗುಣಮಟ್ಟದ ವೈದ್ಯರನ್ನು ರೂಪಿಸುವುದರ ಜತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ರಾಜೀವ್ ಗಾಂಧಿ ವಿವಿಯ ಕೊಡುಗೆ ಅಪಾರ ಎಂದರು.
*ಗುಣಮಟ್ಟದ ಚಿಕಿತ್ಸೆಗೆ ಆದ್ಯತೆ:
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಮಾತನಾಡಿ, ರಾಜ್ಯದ ಸಾಮಾನ್ಯ ಜನರಿಗೆ ಗುಣಮಟ್ಟದ ಚಿಕಿತ್ಸೆಯನ್ನು ಅತಿ ಕಡಿಮೆ ದರದಲ್ಲಿ ಒದಗಿಸುವ ಉದ್ದೇಶ ಇಟ್ಟುಕೊಂಡು ಕೆಲಸ ನಡೆಸುತ್ತಿದ್ದೇವೆ. ಯುವನಿಧಿ ಯೋಜನೆ ಜತೆಗೆ ಕೌಶಲಾಭಿವೃದ್ಧಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು ಎಂದರು.
ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಕೇವಲ ಬುದ್ಧಿಶಕ್ತಿ ಮಾತ್ರ ಇದ್ದರೆ ಸಾಲದು, ಮಾನವೀಯತೆ, ಸಹೋದರತೆಯ ಭಾವವಿದ್ದರೆ ಮಾತ್ರ ದೇಶದ ಭವಿಷ್ಯ ನಿರ್ಮಾಣ ಸಾಧ್ಯ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ವೈದ್ಯಕೀಯ ಶಿಕ್ಷಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿ ಡಾ.ಎಂ.ಕೆ.ರಮೇಶ್, ರಿಜಿಸ್ಟ್ರಾರ್ ಪಿ.ಆರ್.ಶಿವಪ್ರಸಾದ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮೇಯರ್ ಮನೋಜ್ ಕುಮಾರ್ ಉಪಸ್ಥಿತರಿದ್ದರು.
—-
ಜಿಲ್ಲೆಯಲ್ಲಿ ಎಷ್ಟು ಆಸ್ಪತ್ರೆ, ಯೂನಿವರ್ಸಿಟಿ, ವೈದ್ಯಕೀಯ ಕಾಲೇಜುಗಳು ಇವೆ? ಎಷ್ಟು ವೈದ್ಯರು ಇದ್ದಾರೆ ಎನ್ನುವುದು ಮುಖ್ಯವಲ್ಲ. ವೈದ್ಯಕೀಯ ಕೇಂದ್ರಗಳು ಎಷ್ಟು ಸಮಾಜಮುಖಿಯಾಗಿವೆ? ವೈದ್ಯರು ಎಷ್ಟು ಜನಪರವಾಗಿದ್ದಾರೆ ಎನ್ನುವುದು ಮುಖ್ಯ. ಇಂದು ನಾನು ಸೇರಿದಂತೆ ಹೆಚ್ಚಿನ ರಾಜಕೀಯ ವ್ಯಕ್ತಿಗಳು, ಅಧಿಕಾರಿ ವರ್ಗದವರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲೂ ಎಲ್ಲ ವರ್ಗದ ಜನರು ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಬೇಕು.
ಸಿದ್ದರಾಮಯ್ಯ, ಮುಖ್ಯಮಂತ್ರಿ