ಶ್ರೀನಿವಾಸ್ ಟಿ.ಹೊನ್ನಾಳಿ: ಮೊದಲನೇ ಹಂತದ ಭತ್ತದ ಬೆಳೆ ಕೊಯ್ಲು ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಧಾರಣೆ ದಿಢೀರ್ ಕುಸಿತ ಕಂಡಿದೆ. ಇದು ರೈತರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಹವಾಮಾನ ವೈಪರೀತ್ಯ ಹಾಗೂ ಸತತ ಮಳೆಯಿಂದ ಹಲವು ಕಡೆಗಳಲ್ಲಿ ಭತ್ತ ತಕ್ಕಮಟ್ಟಿಗೆ ಬೆಳೆದಿದ್ದರೆ, ಕೆಲವು ಕಡೆ ಇಳುವರಿ ಕಡಿಮೆಯಾಗಿದೆ. ಈ ನಡುವೆ ಬಹುಮುಖ್ಯವಾಗಿ ಏಕಾಏಕಿ ಧಾರಣೆ ಕುಸಿದಿದೆ. ಭತ್ತ ನಾಟಿ ಮಾಡಿದ ಆರಂಭದಲ್ಲಿ ಬೆಲೆ ಏರಿಕೆ ಕಂಡಿತ್ತು. ಈಗಾಗಲೇ ಶೇ. 80 ರಷ್ಟು ಕಟಾವು ಮಾಡಿದ್ದು, ಮತ್ತಷ್ಟು ಬೆಲೆ ಏರಿಕೆಯಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ.
ಕಳೆದ ಹದಿನೈದು ದಿನಗಳಿಂದ ವಿವಿಧ ತಳಿಯ ಭತ್ತದ ಬೆಲೆ ಪ್ರತಿ ಕ್ವಿಂಟಾಲ್‌ಗೆ 500 ರಿಂದ 1000 ರೂ. ವರೆಗೆ ಕಡಿಮೆ ಯಾಗಿದೆ. ಮುಂದೆ ಮತ್ತಷ್ಟು ಕಡಿಮೆಯಾಗಬಹುದೆಂಬ ವದಂತಿ ಹರಡಿದೆ. ಧಾರಣೆ ಕುಸಿತಕ್ಕೆ ಮಧ್ಯ ವರ್ತಿಗಳೇ ಕಾರಣ ಹಾಗೂ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿ ಅನ್ಯಾಯ ತಪ್ಪಿಸಲು ಆಸಕ್ತಿ ತೋರುತ್ತಿಲ್ಲ ಎಂದು ರೈತರ ದೂರು. ಇಷ್ಟರಲ್ಲೇ ಭತ್ತಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿ, ಖರೀದಿ ಕೇಂದ್ರ ಪ್ರಾರಂಭಿಸಬೇಕಿತ್ತು. ಈ ಕೆಲಸ ಆಗಿಲ್ಲ.
ಇದುವರೆಗೆ ಕ್ವಿಂಟಾಲ್‌ಗೆ 2800 ರಿಂದ 3500 ರೂ. ವರೆಗೆ ಖರೀದಿಸಲಾಗುತಿತ್ತು. ಪ್ರಸ್ತುತ ದರ 2400 ರೂ.ಗಿಂತ ಕಡಿಮೆ ಯಾಗಿದೆ. ದರ ಕುಸಿತಕ್ಕೆ ನಿಖರವಾದ ಕಾರಣ ವಿಲ್ಲವಾದರೂ ಮಳೆ ಹಾಗೂ ತೇವಾಂಶದಿಂದ ಭತ್ತ ಒಣಗುವುದಿಲ್ಲ. ಶೇ. 25 ರಷ್ಟು ತೇವಾಂಶ ಇರುತ್ತದೆ ಎಂಬ ಕಾರಣಕ್ಕೆ ಧಾರಣೆ ಕಡಿಮೆಯಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಭತ್ತದ ದರ: ಹೊನ್ನಾಳಿ ತಾಲೂಕಿನಲ್ಲಿ 10 ಸಾವಿರ ಹೆ. ಹಾಗೂ ನ್ಯಾಮತಿ ತಾಲೂಕಿನಲ್ಲಿ 2 ಸಾವಿರ ಹೆ. ಪ್ರದೇಶದಲ್ಲಿ ಭತ್ತ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಐಆರ್ 64- 2200, 1001 ತಳಿ-2400, ಸೋನಾ -2850, ಸೋನಾ ಮಸೂರಿ-2700, ಜಯ-2100, ದಪ್ಪ-2345, ಜ್ಯೋತಿ-2550, ಆರ್‌ಎನ್‌ಆರ್- 2800 ರೂ. ದರವಿದೆ. ಅಕ್ಕಿ ಧಾರಣೆ ಮಾತ್ರ ನಿರಂತರವಾಗಿ ಏರುಮುಖವಾಗಿಯೇ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಕೆಜಿ ಮೇಲೆ 3 ರಿಂದ 5 ರೂ. ವರೆಗೆ ಏರಿಕೆಯಾಗಲಿದೆ ಎಂದು ವರ್ತಕರು ಹೇಳುತ್ತಿದ್ದಾರೆ.
ಖರ್ಚು ಮಾಡಿದ ಹಣ ಬಾರದ ಸ್ಥಿತಿ: ಒಂದು ಕ್ವಿಂಟಾಲ್ ಭತ್ತ ಮಾರಿದರೆ 25 ಕೆಜಿ ರಸಗೊಬ್ಬರ, 1 ಲೀಟರ್ ಕೀಟನಾಶಕಕ್ಕೆ ವ್ಯಯ ಮಾಡಿದ ಹಣವೂ ಬಾರದು. ಇಂದಿನ ಯಾಂತ್ರಿಕೃತ ಬೇಸಾಯ, ದುಬಾರಿ ಕೂಲಿಯಿಂದಾಗಿ ಪ್ರತಿ ಎಕರೆಗೆ 8 ರಿಂದ 10 ಸಾವಿರ ರೂ. ಬೇಕು. ಆದರೆ ಬೆಲೆ ಇಳಿಕೆ ನಷ್ಟದ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿದೆ. ನಷ್ಟ ಸರಿದೂಗಿಸಿಕೊಳ್ಳಲು ಖರೀದಿ ಕೇಂದ್ರ ಅಥವಾ ಮಧ್ಯವರ್ತಿಗಳಲ್ಲಿ ಯಾರಿಗೆ ಮಾರಾಟ ಮಾಡಬೇಕೆಂಬ ಗೊಂದಲದಲ್ಲಿದ್ದೇವೆ ಎನ್ನುತ್ತಾರೆ ರೈತ ಗಿರೀಶ್.
ಮಳೆಯ ಕಣ್ಣಾಮುಚ್ಚಾಲೆ, ಹವಾಮಾನ ವೈಪರೀತ್ಯ ಹಾಗೂ ಮಧ್ಯವರ್ತಿಗಳ ದರ ನಿಗದಿಯಿಂದ ಒಕ್ಕಲುತನವೇ ದುಸ್ತರವಾಗಿದೆ. ಒಂದು ಕಡೆ ಇಳುವರಿ ಕಡಿಮೆ, ಮತ್ತೊಂದೆಡೆ ಧಾರಣೆ ಕುಸಿತದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೂಡಲೆ ಸರ್ಕಾರ ಪ್ರಸ್ತುತ ಧಾರಣೆ ಜತೆೆ 1000 ಹೆಚ್ಚಿಗೆ ಬೆಲೆ ನೀಡಿ ಭತ್ತ ಖರೀದಿಸಿದರೆ ಉಪಕಾರವಾಗುತ್ತದೆ.
ಗಿರೀಶ್ ರೈತ
ಕೆಂಗಲಹಳ್ಳಿ
ಕೆಲವು ದಿನಗಳ ಹಿಂದೆ ಭತ್ತ ಕ್ವಿಂ.ಗೆ 3000 ರೂ. ಗಿಂತ ಹೆಚ್ಚು ದರ ಇತ್ತು. ಈಗ 2000 ರೂ. ಗಿಂತ ಕಡಿಮೆ ದರ ಇದೆ. ಇದರಿಂದ ರೈತರಿಗೆ ತುಂಬಾ ನಷ್ಟ ಉಂಟಾಗಲಿದೆ. ಕೇಂದ್ರ ಸರ್ಕಾರ ಭತ್ತಕ್ಕೆ 2300 ರೂ. ನಿಗದಿ ಮಾಡಿದೆ. ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 700 ರೂ. ಗಿಂತ ಹೆಚ್ಚು ಬೆಂಬಲ ಬೆಲೆ ನೀಡಬೇಕು.
ಎಂ.ಪಿ. ಕರಿಬಸಪ್ಪಗೌಡ
ಕರ್ನಾಟಕ ರಾಜ್ಯ ಹಸಿರುಸೇನೆ ಅಧ್ಯಕ್ಷ
ಇನ್ನೂ ಒಂದೆರಡು ದಿನಗಳಲ್ಲಿ ಭತ್ತದ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು. ರೈತರು ಭತ್ತವನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದಾರೆ. ಖರೀದಿ ಕೇಂದ್ರಕ್ಕೆ ತಂದು ಮಾರುವಂತೆ ಮನವಿ ಮಾಡುತ್ತೇವೆ. ಎರಡು ರೀತಿಯ ಬೆಲೆಯನ್ನು ನಿಗದಿ ಮಾಡಲಾಗಿದೆ. ಸಾಮಾನ್ಯ ಭತ್ತ 2300 ರೂ. ಹಾಗೂ ಗ್ರೇಡ್-ಎ ಭತ್ತ 2320ರೂ. ನಿಗದಿಯಾಗಿದೆ.
ಶಿದ್ರಾಮ ಮಾರಿಹಾಳ ಜಂಟಿ ನಿರ್ದೇಶಕರು,
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ದಾವಣಗೆರೆ