ಪ್ರತಿಷ್ಠೆಗೆ ತಿರುಗಿದ ಚುನಾವಣಾ ಕಣ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಪ್ರತಿಸ್ಪರ್ಧಿಗಳೇ ಇಲ್ಲ ಎಂದಿರುವ ಡಿಕೆಶಿ ಸೋದರರ ಸವಾಲನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದೇವೆ ಎಂದು ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ಡಿ.ಕೆ.ಸುರೇಶ್ ಅವರನ್ನು ಮೋದಿಗಿಂತ ಹೆಚ್ಚು ಮತಗಳಿಂದ ಗೆಲ್ಲಿಸುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮೋದಿ ಸ್ಪರ್ಧಿಸಿದರೂ ಅಧಿಕ ಮತಗಳಿಂದ ಗೆಲ್ಲುತ್ತೇನೆ. ನನಗೆ ಪ್ರತಿ ಸ್ಪರ್ಧಿಗಳೇ ಇಲ್ಲ ಎಂದು ಸುರೇಶ್ ಅಹಂಕಾರದ ಮಾತುಗಳನ್ನಾಡಿದ್ದಾರೆ. ಇದನ್ನು ಬಿಜೆಪಿ ಸವಾಲಾಗಿ ಸ್ವೀಕರಿಸಲಿದೆ. ಸುರೇಶ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ. ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿ ಸವಾಲೆಸೆದರು.

ಡಿಕೆಶಿ ಸಹೋದರರು ಹಣ ಹಾಗೂ ತೋಳ್ಬಲದಿಂದ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಇದು ನಡೆಯುವುದಿಲ್ಲ. ಕ್ಷೇತ್ರದ ಪ್ರಾಮಾಣಿಕ ಮತದಾರರು ಆ ಸಹೋದರರ ಜತೆ ಇಲ್ಲ. ಅಲ್ಲದೆ ಜೆಡಿಎಸ್ ಕಾರ್ಯಕರ್ತರು ಕೂಡ ಕಾಂಗ್ರೆಸ್ ಜತೆಯಲ್ಲಿಲ್ಲ. ಕ್ಷೇತ್ರದಲ್ಲಿ 1.5 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಇವರು ಯಾವ ಪಕ್ಷಕ್ಕೆ ಮತ ಹಾಕಬೇಕು ಎನ್ನುವ ಚರ್ಚೆಯಲ್ಲಿದ್ದಾರೆ. ಅವರ ನಡೆ ಕೂಡ ಈ ಬಾರಿ ಕ್ಷೇತ್ರದಲ್ಲಿ ಪರಿಣಾಮ ಬೀರಲಿದೆ ಎಂದರು.

ಜಿಲ್ಲಾ ಬಿಜೆಪಿ ವಕ್ತಾರ ಪದ್ಮನಾಭ, ಚನ್ನಪಟ್ಟಣ ತಾಲೂಕು ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ ಮತ್ತಿತರರು ಇದ್ದರು.

ನನ್ನ ಗಮನ ರಾಜ್ಯಕ್ಕೆ ಮಾತ್ರ: ಲೋಕಸಭೆ ಚುನಾವಣೆಗೆ ನಾನು ಅಭ್ಯರ್ಥಿ ಅಲ್ಲ. ನನ್ನ ಗಮನ ಏನಿದ್ದರೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ. ಇನ್ನು ಮುಂದೆ ಪದೇಪದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಎಲ್ಲ ಚುನಾವಣೆಯಲ್ಲೂ ನನ್ನ ಹೆಸರು ಕೇಳಿ ಬರುತ್ತದೆ. ನಾನು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಲ್ಲ. ಪಕ್ಷ ಬೇರೆಯವರನ್ನು ಕಣಕ್ಕೆ ಇಳಿಸುತ್ತದೆ ಎಂದು ಯೋಗೇಶ್ವರ್ ಸ್ಪಷ್ಟಪಡಿಸಿದರು. ಪಲಾಯನಕ್ಕೆ ಅವಕಾಶ ಇಲ್ಲ: ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಚುನಾವಣಾ ಕಣದಿಂದ ಪಲಾಯನ ಮಾಡಿದ್ದರು. ಆದರೆ, ಈ ಬಾರಿ ಅದಕ್ಕೆ ಅವಕಾಶ ಕೊಡುವುದಿಲ್ಲ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸೂಕ್ತ ಅಭ್ಯರ್ಥಿಯನ್ನು ನಿಲ್ಲಿಸಲಿದೆ. ಕ್ಷೇತ್ರದಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಪ್ರಧಾನಿ ಮೋದಿ ಅಲೆಯಿಂದ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ಅಭಿವೃದ್ಧಿಗೆ ಬೆಂಬಲ ಸಿಗುವುದಿಲ್ಲ ಎಂದು ಸಾಬೀತಾಗಿದೆ. 20 ವರ್ಷ ತಾಲೂಕು ಅಭಿವೃದ್ಧಿಗೆ ಹಲವು ಪಕ್ಷಗಳಿಗೆ ಸೇರಿ ಪದೇಪದೆ ಮರು ಚುನಾವಣೆ ಎದುರಿಸಿದೆ. ಚುನಾವಣೆಗಳನ್ನು ಮೈಮೇಲೆ ಎಳೆದುಕೊಂಡೆ. ಈಗ ಪದೇಪದೆ ಚುನಾವಣೆ ಎದುರಿಸಬಾರದು ಎಂಬುದು ಗೊತ್ತಾಗಿದೆ.

|ಸಿ.ಪಿ.ಯೋಗೇಶ್ವರ್ ಮಾಜಿ ಶಾಸಕ