ಭಾಲ್ಕಿ: ನಾವೆಲ್ಲರೂ ದೇವರ ಮಕ್ಕಳು, ನಮ್ಮಿಂದ ದೇವರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯವಾಗಬೇಕು ಎಂದು ಹಲಬರ್ಗಾ ಮತ್ತು ಶಿವಣಿ ಮಠದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು ನುಡಿದರು.
ಪಟ್ಟಣದ ಭಾಲ್ಕೇಶ್ವರ ಮಂದಿರದ ಆವರಣದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ, ೮೯ನೇ ತ್ರಿಮೂರ್ತಿ ಮಹಾಶಿವಾರಾತ್ರಿ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಜೀವನ ದರ್ಶನ ಪ್ರವಚನ ಮಾಲೆ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ನಮ್ಮಲ್ಲಿನ ಅಹಂಕಾರ ಹೊರಹಾಕಿದಾಗ ನಾವು ದೇವರನ್ನು ನಮ್ಮಲ್ಲಿಯೇ ಕಂಡುಕೊಳ್ಳುತ್ತೇವೆ. ನಾವೆಲ್ಲರೂ ಪ್ರಜಾಪಿತ ಆ ದೇವರ ಮಕ್ಕಳಾಗಿದ್ದೇವೆ. ಅವನನ್ನು ಕಂಡುಕೊಳ್ಳುವುದೇ ನಮ್ಮ ಮೂಲ ಉದ್ದೇಶವಾಗಿದೆ. ನಾ ಎನ್ನುವ ಅಹಂಕಾರ ಹೊರ ಹಾಕಿದರೆ ಆ ದೇವರು ನಮ್ಮೊಳಗೆ ಬರುತ್ತಾನೆ ಎಂದು ಹೇಳಿದರು.
ವರಿಷ್ಠ ರಾಜಯೋಗ ಶಿಕ್ಷಕಿ, ಹುಬ್ಬಳ್ಳಿಯ ರಾಜಯೋಗಿನಿ ಬ್ರಹ್ಮಕುಮಾರಿ ವೀಣಾ ಸಹೋದರಿ ಮಾತನಾಡಿ, ಮನುಷ್ಯರಾಗಿ ಹುಟ್ಟಿದ ಮೇಲೆ ಮಾಡುವ ಕರ್ತವ್ಯದ ಬಗ್ಗೆ ತಿಳಿಸಿಕೊಟ್ಟರು. ಪ್ರಥಮ ದಿನದ ಜೀವನ ದರ್ಶನ ಪ್ರವಚನ ಮಾಲೆಯಲ್ಲಿ ಮನುಷ್ಯ ಜನ್ಮದ ಜೀವನ ದರ್ಶನ ಮಾಡಿಕೊಟ್ಟರು.
ಭಾಲ್ಕಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸಹೋದರಿ ರಾಧಾಜಿ ಪ್ರಾಸ್ತಾವಿಕ ಮಾತನಾಡಿ, ಹುಬ್ಬಳ್ಳಿಯಿಂದ ಆಗಮಿಸಿದ ವೀಣಾ ಸಹೋದರಿಯವರು ಮೂರು ದಿನಗಳ ಕಾಲ ಜೀವನ ದರ್ಶನ ಮಾಡಿಸುತ್ತಿದ್ದಾರೆ. ಭಾಲ್ಕೇಶ್ವರ ಮಂದಿರದಲ್ಲಿ ವಿಶೇಷ ಆಕರ್ಷಣೀಯ ಸಹಸ್ರ ಜ್ಯೋತಿರ್ಲಿಂಗ ದರ್ಶನ ಸ್ಥಾಪಿಸಿದ್ದೇವೆ, ನಾಗರಿಕರು ಇದರ ಲಾಭ ಪಡೆಯಿರಿ ಎಂದು ಹೇಳಿದರು.
ಶಿವಕುಮಾರ ಸ್ವಾಮಿ, ಸಿದ್ರಾಮಪ್ಪ ವಂಕೆ, ಶಿವಕುಮಾರ ಕಲ್ಯಾಣೆ, ಸಿದ್ರಾಮ, ಶಿವಾಜಿ, ಮಲ್ಲಿಕಾರ್ಜುನ ನುಚ್ಚಾ ಇತರರಿದ್ದರು. ಬಾಬುರಾವ ಗಾಮಾ ನಿರೂಪಣೆ ಮಾಡಿದರು.
