ಪ್ರತಿಯೊಬ್ಬರಲ್ಲೂ ಇದೆ ದೇಶಾಭಿಮಾನ

ರಾಣೆಬೆನ್ನೂರ: ಸ್ವಾಮಿ ವಿವೇಕಾನಂದರ ಮೊದಲ ಹೆಸರೇನು? ಅವರ ಪ್ರಕಾರ ದೇವರು ಎಂದರೇನು? ಯುವಕ-ಯುವತಿಯರಲ್ಲಿ ಇಂದು ದೇಶಾಭಿಮಾನ ಕಡಿಮೆ ಆಗುತ್ತಿದೆಯೇ? ಉನ್ನತ ಶಿಕ್ಷಣ ಪಡೆದರೂ ಉದ್ಯೋಗಗಳು ಯಾಕೆ ಸಿಗುತ್ತಿಲ್ಲ? ಮೀಸಲಾತಿಯಿಂದ ಬಡ ನಿರುದ್ಯೋಗಿಗಳಿಗೆ ಸ್ಥಾನಮಾನ ಸಿಗುತ್ತಿಲ್ಲ ಹಾಗೂ ಅನರ್ಹರು ಉನ್ನತ ಹುದ್ದೆ ಅಲಂಕರಿಸುತ್ತಿದ್ದಾರೆ. ಇದರ ಬಗ್ಗೆ ಏನಂತೀರಿ?

ಇಂತಹ ನೂರೆಂಟು ಪ್ರಶ್ನೆಗಳೊಂದಿಗೆ ಯುವಕ-ಯುವತಿಯರು ತಮ್ಮಲ್ಲಿನ ಆತಂಕ, ಭಯ, ಗೊಂದಲ ಹೊರಹಾಕಿ ದೇಶದ ಯುವ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಅನಾವರಣ ಮಾಡಿದ ರೀತಿ ಇದು. ಯುವಜನರ ಪ್ರಶ್ನೆಗಳ ಪರಿಹಾರಕ್ಕೆ ಸೂಕ್ತ ವೇದಿಕೆ ದೊರೆತಿದ್ದು ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ‘ವಿಜಯವಾಣಿ’ ಪತ್ರಿಕೆ ಹಾಗೂ ದಿಗ್ವಿಜಯ 24*7 ನ್ಯೂಸ್ ಚಾನಲ್ ವತಿಯಿಂದ ರಾಣೆಬೆನ್ನೂರ ನಗರದ ಬಿಎಜೆಎಸ್​ಎಸ್ ಸಮೂಹ ಸಂಸ್ಥೆಯ ಮಹಾವಿದ್ಯಾಲಯದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ.

ಬಿಎಜೆಎಸ್​ಎಸ್ ಕಾಲೇಜ್​ನ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭವಿಷ್ಯದ ದೇಶ ಮುನ್ನಡೆಸುವ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಅತಿಥಿ ಸಾಧಕರು ಅಷ್ಟೇ ಸೊಗಸಾಗಿ ಉತ್ತರಿಸಿ ಪ್ರೇರಣೆ ನೀಡಿದರು.

ರಾಣೆಬೆನ್ನೂರ ರಾಮಕೃಷ್ಣ ಆಶ್ರಮದ ಶ್ರೀ ಪ್ರಕಾಶಾನಂದಜಿ ಸ್ವಾಮೀಜಿ, ‘ವಿವೇಕಾನಂದರ ಮೂಲ ಹೆಸರು ವೀರೇಶ್ವರ. ಅವರ ತಾಯಿ ಪುತ್ರ ಸಂತಾನಕ್ಕಾಗಿ ಕಾಶಿ ವಿಶ್ವನಾಥ ದೇವರಲ್ಲಿ ಬೇಡಿಕೊಂಡಿದ್ದರಿಂದ ವೀರೇಶ್ವರ ಎಂಬ ಹೆಸರಿಟ್ಟರು. ಅದು ರೂಢಿಯಾಗಿ ನರೇಂದ್ರ ಎಂದು ಕರೆದರು. ಸನ್ಯಾಸತ್ವ ಸ್ವೀಕರಿಸಿದ್ದರಿಂದ ವಿವೇಕಾನಂದರಾದರು. ವಿವೇಕಾನಂದರಷ್ಟೇ ಅಲ್ಲದೆ, ಎಲ್ಲ ಶಿವ-ಶರಣರ ಪ್ರಕಾರ ದೇವರು ಎಂದರೆ ಅದಮ್ಯ ಚೈತನ್ಯದ ರೂಪ. ಮನುಷ್ಯರಲ್ಲಿರುವ ಭಾವನೆಯನ್ನು ಅಧ್ಯಾತ್ಮದ ಕಡೆಗೆ ವಾಲಿಸುವ ದೃಷ್ಟಿಯಿಂದ ದೇವರನ್ನು ಮೂರ್ತಿ ರೂಪದಲ್ಲಿ ಕಂಡು ಆರಾಧಿಸುವ ಪರಂಪರೆ ನಮ್ಮದು. ಪ್ರಾಣ ಪ್ರತಿಷ್ಠಾಪನೆಯಿಂದ ರೂಪುಗೊಂಡ ಮೂರ್ತಿಯಲ್ಲಿ ಮನುಷ್ಯಾತ್ಮವನ್ನು ದೇವಾತ್ಮ ಮಾಡುವ ಅಗಾಧ ಶಕ್ತಿಯಿದೆ’ ಎಂದರು.

‘ದೇಶಾಭಿಮಾನ ಪ್ರತಿ ಯುವಕ-ಯುವತಿಯರಲ್ಲೂ ಇದೆ. ಆದರೆ, ಅದನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆ ಇಲ್ಲ. ಪ್ರಜ್ಞಾವಂತರಲ್ಲಿ ಕೆಲವರು ಘೊಷಣೆಗೆ ಮಾತ್ರ ದೇಶಭಿಮಾನ ಬೆಳೆಸಿಕೊಳ್ಳುತ್ತಿದ್ದಾರೆ. ದೇಶಾಭಿಮಾನ ಜಾಗೃತಿ ಆಗಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶಾಭಿಮಾನಕ್ಕೆ ತಮ್ಮ ಪ್ರಾಣವನ್ನೇ ಅರ್ಪಿಸಬೇಕಿತ್ತು. ಈಗ ದೇಶಕ್ಕಾಗಿ ಬದುಕಬೇಕು’ ಎಂದು ಅವರು ವಿದ್ಯಾರ್ಥಿನಿ ಅರ್ಚನಾ ಸುಣಗಾರ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಉನ್ನತ ಶಿಕ್ಷಣ ಪಡೆದರೂ ಉದ್ಯೋಗದಿಂದ ವಂಚಿತರಾಗಲು ಕಾರಣವೇನು? ಎಂದು ವಿದ್ಯಾರ್ಥಿನಿ ಶ್ವೇತಾ ಎಸ್.ಯು. ಅವರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಕ್ಷೇತ್ರದ ಸಾಧಕ ಆರ್.ಎಂ. ಕುಬೇರಪ್ಪ ಅವರು, ಇಂದಿನ ಪಠ್ಯಕ್ರಮ ಅಂಕ ಗಳಿಸುವುದಕ್ಕೆ ಸೀಮಿತವಾಗುವ ಶಿಕ್ಷಣ ಪದ್ಧತಿ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿದೆ. ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿ ಪಡಿಸುವ ನೈತಿಕ ಶಿಕ್ಷಣ ಲಭಿಸಬೇಕು. ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಗಳಿಗೆ ಶಿಕ್ಷಣ ಕಡ್ಡಾಯ ಮಾಡಬೇಕು. ಇದಕ್ಕೂ ಮುನ್ನ ವಿದ್ಯಾರ್ಥಿಗಳು ಸ್ವಯಂ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಅಧ್ಯಯನ ಮಾಡುವುದು ಅವಶ್ಯವಿದೆ’ ಎಂದರು.

ಮೀಸಲಾತಿ ಚರ್ಚೆಯಾಗಲಿ

ಮೀಸಲಾತಿ ಕುರಿತು ಮಾತನಾಡಿದ ಪ್ರಕಾಶಾನಂದಜಿ ಸ್ವಾಮೀಜಿ, ಹಿಂದುಳಿದ ವರ್ಗದಲ್ಲಿದ್ದು, ಆರ್ಥಿಕವಾಗಿ ಬಲಾಢ್ಯರಾದರೂ ಕೆಲ ಸೌಲಭ್ಯಗಳನ್ನು ಅವರೇ ಪಡೆದುಕೊಳ್ಳುತ್ತಿರುವುದು ಸೂಕ್ತವಲ್ಲ. ಅದರ ಬದಲು ತಮ್ಮದೇ ಸಮುದಾಯದ ಬಡವರಿಗೆ ಆ ಸೌಲಭ್ಯಗಳನ್ನು ತಲುಪಿಸಬೇಕು. ಇತ್ತೀಚೆಗೆ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಸಮುದಾಯಕ್ಕೆ ಶೇ. 10ರಷ್ಟು ಮೀಸಲಾತಿ ನೀಡಿರುವುದು ಸ್ವಾಗತಾರ್ಹ. 70 ದಶಕದ ಬಳಿಕ ಈ ಮೀಸಲಾತಿ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಬಂದಿದೆ. ಇದು ಮುಂದಿನ ದಿನದಲ್ಲಿ ಯುವಜನರಿಂದಲೇ ದೊಡ್ಡ ಮಟ್ಟದ ಬದಲಾವಣೆ ಆಗಬೇಕು’ ಎಂದರು.

ವಿದ್ಯಾರ್ಥಿಗಳಾದ ಫಕೀರಯ್ಯ ಇಟಗಿಮಠ, ಪೂಜಾ ಅಂಗಡಿ, ಗಿರಿಜಾ ಲಮಾಣಿ, ಪ್ರಿಯಾಂಕಾ, ಸುಮಾ ಮೊದಲಾದವರು ಸಂವಾದಲ್ಲಿ ಪಾಲ್ಗೊಂಡಿದ್ದರು.