ಬಸವಕಲ್ಯಾಣ: ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ಬಿಕೆಡಿಬಿ ಆಯುಕ್ತ ಜಗನ್ನಾಥರೆಡ್ಡಿ ಹೇಳಿದರು.
ನಗರದ ಎಸ್‌ಎಸ್‌ಕೆ ಬಸವೇಶ್ವರ ಕಲಾ ವಿಜ್ಞಾನ ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕಾಲೇಜು ಹಾಗೂ ಬೀದರ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಪರಮ ಪೂಜ್ಯ ದೊಡ್ಡಪ್ಪ ಅಪ್ಪ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರ್ ಕಾಲೇಜುಗಳ ಏಕಲವ್ಯ ಖೋಖೋ,(ಪುರುಷ) ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡಗಳ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಖೋಖೋ ಹಳ್ಳಿಯ ಆಟವಾಗಿದ್ದು, ಕ್ರೀಡಾ ಮನೋಭಾವನೆ ಬೆಳೆಸುವ ಆಟವಾಗಿದ್ದು, ಪ್ರತಿಭಾವಂತ ಕ್ರೀಡಾಪಟುಗಳನ್ನು ರೂಪಿಸಲು ಪೂರಕವಾಗಿದೆ ಎಂದರು.
ತಹಸೀಲ್ದಾರ್ ದತ್ತಾತ್ರೇಯ ಗಾದಾ ಮಾತನಾಡಿ, ಕ್ರೀಡೆಯಿಂದ ಮಾನಸಿಕ ಮತ್ತು ಶಾರೀರಿಕವಾಗಿ ಸ್ಥಿರತೆ ಹೆಚ್ಚಾಗುತ್ತದೆ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಮುಖ್ಯವಾಗಿದ್ದು, ಇದು ಕ್ರೀಡೆಯಿಂದ ಪಡೆಯಬಹುದು. ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಎವಲೆ ಮಾತನಾಡಿ, ಶಿಕ್ಷಣವು ಕೇವಲ ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿರದೆ. ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಕ್ರೀಡಾಕೂಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಇದರಿಂದ ಮಾನಸಿಕ ಮತ್ತು ದೈಹಿಕ ಸದೃಢೆ ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಪ್ರೊ.ವಿಠೋಬಾ ಡೊಣ್ಣೆ ಗೌಡರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ನಿರೂಪಣೆ ಮಾಡಿದರು. ಸೂರ್ಯಕಾಂತ ನಾಸೆ ಪ್ರಾರ್ಥನಾ ಗೀತೆ ಹಾಡಿದರು. ಐಕ್ಯೂಎಸಿ ಸಂಯೋಜಕ ಡಾ.ಶಿವಕುಮಾರ ಪಾಟೀಲ್, ದೈಹಿಕ ನಿರ್ದೇಶಕ ಶಿವಾನಂದ್ ಬಿರಾದರ್, ಸಿದ್ದಲಿಂಗ ಪೂಜಾರಿ, ಶಿವಶಂಕರ ಪತಂಗೆ, ಸಂಜುಕುಮಾರ ಬಿರಾದಾರ, ಮಹ್ಮದ್ ಹುಸೇನ್ ಇತರರು ಭಾಗಹಿಸಿದ್ದರು.
ಕ್ರೀಡಾಕೂಟದಲ್ಲಿ ಬೀದರ್ ವಿಶ್ವವಿದ್ಯಾಲಯದ ಅನೇಕ ಮಹಾವಿದ್ಯಾಲಯದ ತಂಡಗಳು ಭಾಗಿಯಾಗಿದ್ದು, ಸರ್ಕಾರಿ ಪದವಿ ಮಹಾ ವಿದ್ಯಾಲಯ ಔರಾದ್ ತಂಡವು ಪ್ರಥಮ ಸ್ಥಾನ, ಸರ್ಕಾರಿ ಪದವಿ ಮಹಾವಿದ್ಯಾಲಯ ಹುಲಸೂರು ತಂಡ ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಬಹುಮಾನ ಮತ್ತು ಪದಕ ವಿತರಿಸಲಾಯಿತು.