ಪ್ರತಿಭಟನೆ ಹಿಂಪಡೆದ ಗ್ರಾಮಸ್ಥರು

ಅಂಕೋಲಾ: ಸುಂಕಸಾಳ ಗ್ರಾ.ಪಂ. ವ್ಯಾಪ್ತಿಯ ವಜ್ರಳ್ಳಿಯಲ್ಲಿ ಬಸ್ ನಿಲುಗಡೆ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಲು ಮುಂದಾದ ವೇಳೆ ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆದ ಘಟನೆ ಗುರುವಾರ ನಡೆದಿದೆ.

ಅಂಕೋಲಾ ಹಾಗೂ ಕಾರವಾರ ವಿಭಾಗದ ಘಟಕದಿಂದ ಅಂಕೋಲಾದಿಂದ ಯಲ್ಲಾಪುರ ಹಾಗೂ ಮತ್ತು ವಾಪಸ್ಸು ಮರಳುವ 9 ಬಸ್​ಗಳನ್ನು ಈ ಹಿಂದಿನಿಂದಲೂ ನಿಲುಗಡೆ ಮಾಡಲಾಗುತ್ತಿತ್ತು. ಅದರೆ, ನಿಲುಗಡೆ ನೀಡಿದ ಬಸ್ಸುಗಳು ಸರಿಯಾಗಿ ನಿಲ್ಲಿಸದೇ ಗ್ರಾಮಸ್ಥರು ಸೌಲಭ್ಯದಿಂದ ವಂಚಿತರಾಗಿ ತೊಂದರೆಗೆ ಒಳಗಾಗಿದ್ದರು.

ನಿತ್ಯ ಶಾಲಾ ಕಾಲೇಜುಗಳಿಗೆ 70ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ನೂರಾರು ಸಾರ್ವಜನಿಕರು ವಜ್ರಳ್ಳಿಯಿಂದ ಪ್ರಯಾಣ ಬೆಳಸುತ್ತಾರೆ. ಆದರೆ, ಬಸ್​ಗಳ ಸರಿಯಾದ ನಿಲುಗಡೆ ಮಾಡದೇ ಇರುವುದರಿಂದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿ ಪ್ರತಿಭಟನೆಯ ಹಾದಿ ಹಿಡಿಯಲು ಮುಂದಾಗಿದ್ದರು.

ಗ್ರಾಮಕ್ಕೆ ಆಗಮಿಸಿದ ಕೆಎಸ್​ಆರ್​ಟಿಸಿ ಸ್ಟಾಫ್ ಇನ್ಸ್​ಪೆಕ್ಟರ್ ಎಚ್.ವೈ. ಚಲವಾದಿ, ಸುಂಕಸಾಳ ಪಿಡಿಒ ಗಿರೀಶ ನಾಯಕ, ಎಎಸ್​ಐ ಚಂದ್ರಕಾಂತ ನಾಯ್ಕ, ಸಿಬ್ಬಂದಿ ದುರ್ಗಪ್ಪ ಗ್ರಾಮಸ್ಥರ ಅಹವಾಲು ಆಲಿಸಿ, 2 ದಿನದಲ್ಲಿ ಬಸ್ ನಿಲುಗಡೆಗೆ ಕ್ರಮವಹಿಸಲಾಗುವುದು ಎಂದು ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ಕೈಬಿಟ್ಟರು.

ತಾ.ಪಂ. ಸದಸ್ಯ ವಿಲ್ಸನ ಡಿಕೋಸ್ತಾ, ಗ್ರಾ.ಪಂ. ಉಪಾಧ್ಯಕ್ಷ ಮಂಜುನಾಥ ಭಟ್, ಪ್ರಮುಖರಾದ ಉಮೇಶ ನಾಯ್ಕ, ಆನಂದು ನಾಯ್ಕ, ಮಂಜು ನಾಯ್ಕ, ಉದಯ ನಾಯ್ಕ, ವಿನೋದ ಗಾಂವಕರ, ನಾಗೇಂದ್ರ ಭಟ್, ರಾಜೀವ ಗಾಂವಕರ, ತಿಮ್ಮಣ್ಣ ನಾಯ್ಕ, ಮಂಜು ಎಂ. ನಾಯ್ಕ, ದಾಮೋದರ ನಾಯ್ಕ ಇತರರಿದ್ದರು.