ಪ್ರತಿಭಟನೆ ಬಳಿಕ ಬಂತು ನೀರು

ರೋಣ: ಕುಡಿಯುವ ನೀರಿಗಾಗಿ ಆಗ್ರಹಿಸಿ ಓಣಿಯ ಮಹಿಳೆಯರೆಲ್ಲ ಸೇರಿ ಖಾಲಿ ಕೊಡಗಳೊಂದಿಗೆ ರಸ್ತೆಗಿಳಿಯುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ತಕ್ಷಣವೇ ನೀರು ಸರಬರಾಜು ಮಾಡಿದರು.

ಪಟ್ಟಣದ ವಾರ್ಡ್ ನಂ. 21ರ ಶಾನುಭೋಗರ ಚಾಳ ಮತ್ತು ಸೋಮಲಿಂಗೇಶ್ವರ ಬಡಾವಣೆ ಮಹಿಳೆಯರು ರಸ್ತೆಯಲ್ಲಿ ಖಾಲಿ ಕೊಡಗಳನ್ನಿಟ್ಟು ಮಂಗಳವಾರ ಪ್ರತಿಭಟನೆ ನಡೆಸಿದರು.

ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದ್ದು, ಎಂಟ್ಹತ್ತು ದಿನಗಳಿಂದ ಸರಬರಾಜಾಗಿಲ್ಲ. ಕುಡಿಯುವ ನೀರಿಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಪುರಸಭೆ ಅಧಿಕಾರಿಗಳು, ವಾರ್ಡ್ ಸದಸ್ಯರೂ ಹೇಳುತ್ತಾರೆ. ಆದರೆ, ಇಲ್ಲಿ ಹನಿ ನೀರು ಸಿಗುತ್ತಿಲ್ಲ ಎಂದು ವಾರ್ಡ್ ನಿವಾಸಿ ಗೀತಾ ಸಂಕನೂರ ದೂರಿದರು.

ಸ್ಥಳಕ್ಕೆ ಆಗಮಿಸಿದ ವಾರ್ಡ್ ಸದಸ್ಯ ದಾವಲಸಾಬ್ ಬಾಡಿನ ಪ್ರತಿಕ್ರಿಯಿಸಿ, ವಾರ್ಡ್​ನಲ್ಲಿ ಪೈಪ್​ಲೈನ್ ದುರಸ್ತಿ ಕಾರಣ ನೀರು ಪೂರೈಕೆಯಲ್ಲಿ ವಿಳಂಬವಾಗಿದೆ. ಸೋಮವಾರ ಸಂಜೆಯೇ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಗುಡುಗು, ಮಿಂಚು ಸಹಿತ ಜೋರಾಗಿ ಗಾಳಿ ಬೀಸಿದ್ದರಿಂದ ಹೆಸ್ಕಾಂನವರು ರಾತ್ರಿ ಪೂರ್ತಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಇದರಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಯಿತು. ಈ ಕೂಡಲೇ ನೀರು ಪೂರೈಸಲಾಗುವುದು ಎಂದರು.

ರೇಣುಕಾ ಹಾಳಕೇರಿ, ಸಾವಿತ್ರಿ ಸೂಡಿ, ದಾವಲಬಿ ಜಲಾವರ, ಸಾವಿತ್ರಿ ಜಾಧವ, ಪ್ರಭು ಸೂಡಿ, ಬಸವರಾಜ ಚೋಳಚಗುಡ್ಡ, ಪ್ರಭು ಪಾಟೀಲ, ಇತರರು ಇದ್ದರು.

ನೀರಿಗಾಗಿ ಗ್ರಾಪಂಗೆ ಮುತ್ತಿಗೆ

ಲಕ್ಷ್ಮೇಶ್ವರ: ತಾಲೂಕಿನ ಅಡರಕಟ್ಟಿ ತಾಂಡಾದ ಜನರು ಕುಡಿಯುವ ನೀರಿಗಾಗಿ ಆಗ್ರಹಿಸಿ ಮಂಗಳವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಒಂದು ವಾರದಿಂದ ತಾಂಡಾದ ಜನರು ದೂರದ ತೋಟ, ಬಾವಿಗಳಿಗೆ ಅಲೆದಾಡುವ ಸ್ಥಿತಿ ನಿರ್ವಣವಾಗಿದೆ. ಲಕ್ಷಾಂತರ ರೂ. ವ್ಯಯಿಸಿ ನಿರ್ವಿುಸಿದ ಜಲಾಗಾರ ನಿರುಪಯುಕ್ತವಾಗಿದೆ. ತಾಂಡಾದಲ್ಲಿ ಎರಡು ಬೋರ್​ವೆಲ್​ಗಳಿದ್ದು, ಒಂದರಿಂದ ಅಡರಕಟ್ಟಿ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದೆ. ಮತ್ತೊಂದು ಬೋರ್​ವೆಲ್ ಒಂದು ವಾರದಿಂದ ದುರಸ್ತಿಯಲ್ಲಿದೆ. ಎರಡು ಕೈ ಬೋರ್​ಗಳಿದ್ದರೂ ಅವುಗಳ ಬಳಕೆ ಕುರಿತು ಗ್ರಾಪಂ ನಿರ್ಲಕ್ಷ್ಯಹಿಸಿದ್ದರಿಂದ ಅವಸಾನದಂಚಿಗೆ ತಲುಪಿವೆ. ಇನ್ನು ಶುದ್ಧ ಕುಡಿಯುವ ನೀರಿನ ಘಟಕದಲ್ಲೇ ನೀರಿಲ್ಲ ಎಂದು ತಾಂಡಾ ನಿವಾಸಿಗಳು ದೂರಿದರು. ಅಲ್ಲದೆ, ನೀರಿನ ಸಮಸ್ಯೆ ಬಗೆಹರಿಸಿ ಎಂದು ಪಿಡಿಒ ಎಸ್.ಆರ್. ಸೋಮಣ್ಣನವರ ಅವರನ್ನು ತಾಂಡಾ ನಿವಾಸಿಗಳು ತರಾಟೆಗೆ ತೆಗೆದುಕೊಂಡರು. ತಾಪಂ ಇಒ ಗ್ರಾಮಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟು ಹಿಡಿದರು.

ಸುದ್ದಿ ತಿಳಿದು ಗ್ರಾಮಕ್ಕೆ ಆಗಮಿಸಿದ ಇಒ ಆರ್.ವೈ. ಗುರಿಕಾರ, ಬೋರ್​ವೆಲ್ ಪೈಪ್​ಲೈನ್, ಕೈಬೋರ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸುವಂತೆ ಸಿಬ್ಬಂದಿಗೆ ಆದೇಶಿಸಿದರು. ಮೇಲ್ಮಟ್ಟದ ಜಲಾಗಾರಕ್ಕೆ ಡಿಬಿಒಟಿಯಿಂದ ನೀರು ಪೂರೈಸುವಂತೆ ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿಭಟನೆಯಲ್ಲಿ ಹನಮಂತಪ್ಪ ಲಮಾಣಿ, ನಿಂಗಪ್ಪ ಅಳ್ಳಳ್ಳಿ, ಹರೀಶ ಪವಾರ, ಉಮೇಶ ಬಾಡಗಿ, ರಮೇಶ ಲಮಾಣಿ, ಶೇಖಪ್ಪ ಲಮಾಣಿ, ಚನ್ನಪ್ಪ ಲಮಾಣಿ, ಸಂತೋಷ ಲಮಾಣಿ, ಗೋಪಾಲ ನಾಯಕ, ಮಹೇಶ ಲಮಾಣಿ, ಕಾರ್ತಿಕ ಬಾಡಗಿ, ಮಹದೇವಪ್ಪ ಚಿಂಚಲಿ, ಫಕೀರೇಶ ಹೂಗಾರ, ಮಂಜಣ್ಣ ಮುಳಗುಂದ, ಚವಲವ್ವ ಲಮಾಣಿ, ಗಿರಿಜವ್ವ ಲಮಾಣಿ, ಶಾಂತವ್ವ ಲಮಾಣಿ, ಸೋಮವ್ವ ಲಮಾಣಿ ಇತರರಿದ್ದರು.