ಪ್ರತಿಭಟನೆಗೆ ಸೀಮಿತವಾದ ಮುಷ್ಕರ

ಗದಗ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ವಿುಕ ಸಂಘಟನೆಗಳ ಸಹಯೋಗದಲ್ಲಿ ಬುಧವಾರ ಜರುಗಿದ ರಾಷ್ಟ್ರವ್ಯಾಪಿ ಮುಷ್ಕರ ಜಿಲ್ಲೆಯಲ್ಲಿ ಪ್ರತಿಭಟನೆಗೆ ಸೀಮಿತವಾಯಿತು. ಜನರ ಬೆಂಬಲ ಸಿಗಲಿಲ್ಲವಾದ್ದರಿಂದ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಗದಗ-ಬೆಟಗೇರಿ ಅವಳಿ ನಗರ, ಶಿರಹಟ್ಟಿ, ಮುಂಡರಗಿ, ಲಕ್ಷೆ್ಮೕಶ್ವರ, ನರಗುಂದ, ಗಜೇಂದ್ರಗಡದಲ್ಲಿ ವಿವಿಧ ಕಾರ್ವಿುಕ ಮುಖಂಡರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಅಕ್ಷರ ದಾಸೋಹ ನೌಕರರು ನಗರದ ಪ್ರಮುಖ ರಸ್ತೆ ಹಾಗೂ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರೋಣ, ನರೇಗಲ್, ಮುಳಗುಂದ, ಹೊಳೆಆಲೂರಿನ ಪ್ರತಿಭಟನಾಕಾರರು ಗದಗ ನಗರಕ್ಕೆ ಆಗಮಿಸಿದ್ದರಿಂದ ಅಲ್ಲಿ ಪ್ರತಿಭಟನೆ ಕಾವು ಅಷ್ಟಾಗಿ ಇರಲಿಲ್ಲ.

ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಮಂಗಳವಾರ ತಡರಾತ್ರಿವರೆಗೆ ನಡೆದಿದ್ದ ಪ್ರತಿಭಟನೆ ಬುಧವಾರ ಬೆಳಗ್ಗೆ 7ರಿಂದ ಮತ್ತೆ ಆರಂಭವಾಯಿತು. ಕಾರ್ವಿುಕ ಹಾಗೂ ದಲಿತ ಮುಖಂಡರು ಕ್ರಾಂತಿಗೀತೆ ಮೂಲಕ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಮಾನವ ಸರಪಳಿ ನಿರ್ವಿುಸಿ, ರಸ್ತೆ ಸಂಚಾರ ಬಂದ್ ಮಾಡಿದರು. ಮಧ್ಯಾಹ್ನದ ನಂತರ ಮಹಾತ್ಮಾ ಗಾಂಧಿ ವೃತ್ತದಿಂದ ಜಿಲ್ಲಾಡಳಿತ ಭವನವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಬೆಲೆ ಏರಿಕೆ ತಡೆಯಬೇಕು, ಉದ್ಯೋಗ ಸೃಷ್ಟಿಸಬೇಕು, ಮೋಟಾರ್ ವಾಹನ ತಿದ್ದುಪಡಿ ಮಸೂದೆ ಹಿಂಪಡೆಯಬೇಕು, ಡಾ. ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು, ಅಸಂಘಟಿತ ಕಾರ್ವಿುಕರಿಗೆ ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸಬೇಕು. ಮಾಸಿಕ 18 ಸಾವಿರ ರೂ.ಕನಿಷ್ಠ ವೇತನ ಪಾವತಿಸಬೇಕು. 6 ಸಾವಿರ ರೂ. ನಿವೃತ್ತಿ ವೇತನ ನೀಡಬೇಕು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೊಷಿಸಬೇಕು. ಬ್ಯಾಂಕ್​ಗಳ ವಿಲೀನಿಕರಣ ನೀತಿ ಕೈಬಿಡಬೇಕು. ವೇತನ ಪರಿಷ್ಕರಣೆಯಾಗಬೇಕು ಎಂದು ಘೊಷಣೆ ಕೂಗಿದರು.

ಸಾರಿಗೆ ಸಂಚಾರಕ್ಕೆ ವಿರೋಧ: ಎರಡು ದಿನಗಳ ಮುಷ್ಕರ ಹಿನ್ನೆಲೆಯಲ್ಲಿ ಮೊದಲ ದಿನ ಶಾಲಾ-ಕಾಲೇಜ್​ಗಳಿಗೆ ರಜೆ ಹಾಗೂ ಕೆಎಸ್​ಆರ್​ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಎರಡನೇ ದಿನ ಬುಧವಾರ ಶಾಲಾ-ಕಾಲೇಜ್ ಹಾಗೂ ಬಸ್ ಸಂಚಾರ ಆರಂಭಿಸುವುದಾಗಿ ಜಿಲ್ಲಾಡಳಿತ ಘೊಷಿಸಿದ್ದರಿಂದ ಬೆಳಗ್ಗೆ ಬಸ್​ಗಳು ಬಸ್ ನಿಲ್ದಾಣಕ್ಕೆ ಆಗಮಿಸಿದ್ದವು. ಪ್ರತಿಭಟನಾಕಾರರು ಬಸ್ ಸಂಚಾರ ಆರಂಭಿಸಬಾರದು ಎಂದು ಒತ್ತಾಯಿಸಿದರು. ಬಾಗಲಕೋಟೆ ಜಿಲ್ಲೆಯಲ್ಲಿ ದುಷ್ಕರ್ವಿುಗಳು ಬಸ್​ಗೆ ಕಲ್ಲೆಸೆದ ಘಟನೆಯಿಂದ ಗಾಬರಿಗೊಂಡ ಅಧಿಕಾರಿಗಳು ಬಸ್ ಸಂಚಾರ ಸ್ಥಗಿತಗೊಳಿಸಿದರು. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು, ಪ್ರಯಾಣಿಕರು, ರೋಗಿಗಳು ತೊಂದರೆಗೀಡಾದರು.

ಎಸ್ಕಾರ್ಟ್​ನಲ್ಲಿ ತೆರಳಿದ ಬಸ್​ಗಳು:ಮುಷ್ಕರ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ಭಯದಿಂದ ರಸ್ತೆಗಿಳಿಯಲು ಹಿಂದೇಟು ಹಾಕುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ಗಳು ಬಸ್ ನಿಲ್ದಾಣದಿಂದ ನಗರದ ಹೊರವಲಯದವರೆಗೆ ಪೊಲೀಸ್ ಎಸ್ಕಾರ್ಟ್​ನಲ್ಲಿ ತೆರಳಿದವು. ಬೆಳಗ್ಗೆ 10ರ ನಂತರ ಒಂದೊಂದಾಗಿ ಆರಂಭವಾದ ಬಸ್​ಗಳಿಗೆ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ವಿವಿಧ ಗ್ರಾಮಗಳಿಂದ ಶಾಲಾ-ಕಾಲೇಜ್​ಗಳಿಗೆ ತೆರಳಲು ಆಗಮಿಸಿದ್ದ ವಿದ್ಯಾರ್ಥಿಗಳು ನಗರ ಬಸ್ ಸಂಚಾರವಿಲ್ಲದ ಕಾರಣ ಹೊಸ ಬಸ್ ನಿಲ್ದಾಣದಲ್ಲಿದ್ದರು. ಇದನ್ನು ಗಮನಿಸಿದ ಶಹರ ಪೊಲೀಸ್ ಠಾಣೆ ಸಿಪಿಐ ದೌಲತ್ ಕುರಿ ಹಾಗೂ ಪಿಎಸ್​ಐ ಎಸ್.ಬಿ. ಪಾಲಬಾವಿ ಅವರು ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜ್​ಗಳಿಗೆ ತೆರಳಲು ಪೊಲೀಸ್ ಜೀಪ್​ನಲ್ಲಿ ಹಾಗೂ ಜಿಲ್ಲಾಸ್ಪತ್ರೆಗೆ ತೆರಳಲು ರೋಗಿಗಳಿಗೆ ಡಿಎಆರ್ ವಾಹನದ ವ್ಯವಸ್ಥೆ ಮಾಡಿದರು.

ಮಹಿಳೆ ಅಸ್ವಸ್ಥ: ಮಹಾತ್ಮಾ ಗಾಂಧಿ ವೃತ್ತದ ಪ್ರತಿಭಟನಾ ವೇದಿಕೆಯಲ್ಲಿ ಮುಷ್ಕರ ನಡೆಸುತ್ತಿದ್ದ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಬಿಸಿಯೂಟ ಸಹಾಯಕಿ ರೇಖಾ ಎಂಬುವವರು ಅಸ್ವಸ್ಥಗೊಂಡಿದ್ದರು. ಸ್ಥಳಕ್ಕೆ ಆಗಮಿಸಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ ಬಳಿಕ, 108 ವಾಹನದಲ್ಲಿ ಆಸ್ಪತ್ರೆಗೆ ರವಾನಿಸಲಾಯಿತು. ಹುಬ್ಬಳ್ಳಿಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ರೇಣುಕಾ ಜವಳಿ ಬುಧವಾರ ಬೆಳಗಿನ ಜಾವ ಗದಗ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ತೊಂದರೆ ಅನುಭವಿಸಿದರು. ಬಸ್ ಸಂಚಾರ ಆರಂಭದ ನಂತರ ಸ್ವಗ್ರಾಮಕ್ಕೆ ತೆರಳಿದರು.

ಸ್ವಚ್ಛತಾ ಕಾರ್ಯ:ಮುಷ್ಕರ ಹಿನ್ನೆಲೆ ಮಂಗಳವಾರ ಗದಗ ಹೊಸ ಬಸ್ ನಿಲ್ದಾಣದ ಒಳಾಂಗಣವನ್ನು ಸ್ವಚ್ಛಗೊಳಿಸಿದ್ದ ಕೆಎಸ್​ಆರ್​ಟಿಸಿ ನೌಕರರು ಬುಧವಾರ ಹೊರಾಂಗಣವನ್ನು ಸ್ವಚ್ಛಗೊಳಿಸಿದರು.

ಎಂದಿನಂತೆ ವ್ಯಾಪಾರ ವಹಿವಾಟು: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ವ್ಯಾಪಾರ ವಹಿವಾಟು ಎಂದಿನಂತೆ ಸಾಗಿದವು. ಗದಗ, ಮುಂಡರಗಿ, ಗಜೇಂದ್ರಗಡ, ನರೇಗಲ್ ಭಾಗದಲ್ಲಿ ಬೆಳಗ್ಗೆ 10ರ ನಂತರ ಒಂದೊಂದಾಗಿ ಬಸ್ ಸಂಚಾರ ಆರಂಭವಾದವು. ಲಕ್ಷೆ್ಮೕಶ್ವರ, ಶಿರಹಟ್ಟಿ, ನರಗುಂದ ಪಟ್ಟಣದಲ್ಲಿ ಮಧ್ಯಾಹ್ನದ ನಂತರ ಆರಂಭವಾದವು.