ಚಿತ್ರದುರ್ಗ: ಮುಖ್ಯಮಂತ್ರಿ ವಿರುದ್ಧ ಪಾದಯಾತ್ರೆ ಮೂಲಕ ಬಿಜೆಪಿ-ಜೆಡಿಎಸ್ ರಾಜಕೀಯ ಷಡ್ಯಂತ್ರ ನಡೆಸುತ್ತಿವೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮುಷ್ಕರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡು ಸಿದ್ದರಾಮಯ್ಯಗೆ ಅಭಯ ನೀಡಿ, ವಿರೋಧ ಪಕ್ಷಗಳ ನಡೆಯನ್ನು ಖಂಡಿಸಿದರು.
ನೀಲಕಂಠೇಶ್ವರ ದೇವಾಲಯದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ವೀರ ವನಿತೆ ಒನಕೆ ಓಬವ್ವ ವೃತ್ತಕ್ಕೆ ತಲುಪಿದ ಬಳಿಕ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಸೇರಿ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ರಾಜ್ಯಪಾಲರ ನಡೆಗೆ ಅಸಮಾಧಾನ ವ್ಯಕ್ತಪಿಡಿಸಿ, ಬಿಜೆಪಿ-ಜೆಡಿಎಸ್ ನಾಯಕರು ಹುನ್ನಾರು ನಡೆಸುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರದಲ್ಲಿದ್ದಾಗ ಎಸಗಿದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮರೆತು ಪಾದಯಾತ್ರೆ ನಾಟಕ ನಡೆಸುತ್ತಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ. ಆದರೂ ವಾಮಮಾರ್ಗದಿಂದ ಅಧಿಕಾರ ಹಿಡಿದಿದ್ದ ವಿರೋಧಿಗಳು, ವಿನಾಕಾರಣ ಸಿದ್ದರಾಮಯ್ಯರ ತೇಜೋವಧೆಗೆ ಮುಂದಾಗಿದ್ದಾರೆ. ಸಂವಿಧಾನದ ಪ್ರತಿನಿಧಿ ಆಗಿರಬೇಕಾದ ರಾಜ್ಯಪಾಲರು ಬಿಜೆಪಿ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆಂದು ಕಿಡಿಕಾರಿದರು.
ಮುಖ್ಯಮಂತ್ರಿಗೆ ನೋಟಿಸ್ ಕೊಡುವುದಕ್ಕಿಂತ ಮೊದಲು ರಾಜ್ಯಪಾಲರು ಚಿಂತನೆ ನಡೆಸಬೇಕಿತ್ತು. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸುವುದು ಸುಲಭವಲ್ಲವೆಂಬ ಸತ್ಯವನ್ನು ಬಿಜೆಪಿ-ಜೆಡಿಎಸ್ ನಾಯಕರು ಅರಿತುಕೊಳ್ಳಬೇಕು. ಇಡೀ ರಾಜ್ಯದ ಜನ ಸಿದ್ದು ಬೆನ್ನಿಗೆ ನಿಂತಿದ್ದು, ಆ.9ರಂದು ಮೈಸೂರಿನಲ್ಲಿ ಸಮಾವೇಶದ ಮೂಲಕ ಉತ್ತರ ಕೊಡಲಿದ್ದೇವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಪಾಲರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ನೋಟಿಸ್ ಜಾರಿ ಮಾಡಿಸಿದ್ದಾರೆ. 15 ದಿನಗಳಿಂದ ಸಿಎಂಗೆ ಕಿರುಕುಳ ನೀಡಲಾಗುತ್ತಿದೆ. ಉತ್ತಮ ಆಡಳಿತ ನಡೆಸಲು ಪ್ರಜಾಪ್ರಭುತ್ವದಡಿ ರಚನೆಗೊಂಡಿರುವ ಸರ್ಕಾರಕ್ಕೆ ಅಡ್ಡಿಪಡಿಸಲಾಗುತ್ತಿದೆ. ಈ ಕೂಡಲೇ ಈ ಕೆಟ್ಟ ನಡೆ ಕೈಬಿಡದಿದ್ದರೆ ರಾಜ್ಯಾಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಸವರಾಜ ಬೊಮ್ಮಾಯಿ ಅವಧಿ ಹಲವು ನಿಗಮಗಳಲ್ಲಿ ನಡೆದ ಭ್ರಷ್ಟಾಚಾರಕ್ಕೆ ಬಿಜೆಪಿಯೇ ಹೊಣೆ. ಆದರೆ, ಸಿದ್ದರಾಮಯ್ಯ ಅವರ ವಿರುದ್ಧ ಪಿತೂರಿ ನಡೆಸುತ್ತಿರುವುದು ಎಲ್ಲ ವರ್ಗದ ಸಮುದಾಯಗಳಲ್ಲಿ ನೋವುಂಟು ಆಗಿದೆ. ಆದ್ದರಿಂದ ಸಿದ್ದರಾಮಯ್ಯ ಅವರಿಗೆ ಕೊಟ್ಟಿರುವ ನೋಟಿಸ್ ಹಿಂಪಡೆಯದಿದ್ದರೆ ಶೋಷಿತ ಸಮುದಾಯಗಳು ಇನ್ನಷ್ಟು ಕೆರಳಲಿವೆ ಎಂದು ಹೇಳಿದರು.
ಹಿಂದುಳಿದ ವರ್ಗದವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಸಂದರ್ಭ ಈ ಹಿಂದಿನಿಂದಲೂ ಪಿತೂರಿ ನಡೆಸಿ ಅಧಿಕಾರದಿಂದ ಕೆಳಗಿಳಿಸಿದ ಉದಾರಹಣೆ ಇದೆ. ಆದರೆ, ಸಿದ್ದರಾಮಯ್ಯ ವಿಷಯದಲ್ಲಿ ಆಗುವುದಿಲ್ಲ. ಕಾರಣ ರಾಜ್ಯದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗ ಜಾಗೃತಗೊಂಡಿವೆ ಎಂದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರು, ರಾಷ್ಟ್ರಪತಿಗಳಿಗೆ ಮನವಿ ಪತ್ರ ರವಾನಿಸಲಾಯಿತು.
ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ದಸಂಸ ರಾಜ್ಯ ಮುಖಂಡ ಡಿ.ದುರುಗೇಶ್, ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಮಾಜಿ ಸದಸ್ಯ ಆರ್.ನರಸಿಂಹರಾಜು, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ರಾಜ್ಯ ವಕ್ಫ್ ಮಂಡಳಿ ಚೇರ್ಮನ್ ಡಾ.ಕೆ.ಅನ್ವರ್ ಬಾಷಾ, ವಕೀಲರಾದ ಬೀಸ್ನಹಳ್ಳಿ ಜಯಪ್ಪ, ಸಿ.ಶಿವುಯಾದವ್, ಸುದರ್ಶನ್, ರವೀಂದ್ರ, ಮಹಮದ್ ರಫಿ, ಗ್ಯಾರೆಂಟಿ ಅನುಷ್ಠಾ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಾಜಿ ಅಧ್ಯಕ್ಷರಾದ ಆರ್.ಕೆ.ಸರ್ದಾರ್, ಬಿ.ಟಿ.ಜಗದೀಶ್, ಮುಖಂಡರಾದ ಗೀತಾ ನಂದಿನಿಗೌಡ, ಮೋಕ್ಷಾ ರುದ್ರಸ್ವಾಮಿ, ಜಿ.ರಾಜಪ್ಪ ಸಜ್ಜನಕೆರೆ, ಎಚ್.ಸಿ.ನಿರಂಜನಮೂರ್ತಿ, ಇಂದಿರಾ ಕಿರಣ್, ಡಿ.ಎನ್.ಮೈಲಾರಪ್ಪ, ಬಿ.ರಾಜಪ್ಪ ಜೆಜೆ ಹಟ್ಟಿ, ಜಿ.ಟಿ.ಮುತ್ತುರಾಜ್, ಮರುಳಾರಾಧ್ಯ, ಟಿಪ್ಪು ಖಾಸಿಂ ಆಲಿ, ಟಿ.ಸ್ವಾಮಿ, ರೇಣುಕಾ ಶಿವು, ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಮಾಜಿ ಸದಸ್ಯ ಎಸ್.ಶ್ರೀರಾಮ್, ಸೈಯದ್ ಮೊಹಿದ್ದೀನ್, ಪವಿತ್ರಾ, ಸುಧಾ,ಪಿ.ಕೆ.ಮೀನಾಕ್ಷಿ, ಎಸ್.ಎನ್.ರವಿಕುಮಾರ್, ನಜ್ಮತಾಜ್, ಸೈಯದ್ ಖುದ್ದೂಸ್, ಮುನಿರಾ ಎ.ಮಕಾಂದಾರ್, ಮುದಸಿರ್ ನವಾಜ್, ಅಬ್ದುಲ್ಲಾ, ಎ.ಸಾಧಿಕ್‌ವುಲ್ಲಾ ಇತರರಿದ್ದರು.
*ಕೋಟ್
ಸಿದ್ದರಾಮಯ್ಯ ಅವರ ಸುಧೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪಂಚ ಗ್ಯಾರಂಟಿ ಸೇರಿ ವಿವಿಧ ಜನಪರ ಯೋಜನೆಗಳ ಜಾರಿ ಮೂಲಕ ಜನಪ್ರಿಯತೆ ಗಳಿಸಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ವಿಪಕ್ಷಗಳು ಸುಳ್ಳನ್ನೇ ನಿಜ ಮಾಡಲು ಹೊರಟಿವೆ.
ಎಚ್.ಆಂಜನೇಯ, ಮಾಜಿ ಸಚಿವ
*ಕೋಟ್
ವಿರೋಧಿ ಪಕ್ಷಗಳ ಪಿತೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎದೆಗುಂದುವ ಅಗತ್ಯವಿಲ್ಲ. ರಾಜ್ಯದ ಅಹಿಂದ ಸೇರಿ ಎಲ್ಲ ವರ್ಗದ ಜನರು ಅವರ ಬೆನ್ನಿಗೆ ಇದ್ದೇವೆ. ಷಡ್ಯಂತ್ರ ನಡೆಸಿ ಅಧಿಕಾರದಿಂದ ಅವರನ್ನು ಕೆಳಗಿಳಿಸಲು ಬಿಡುವುದಿಲ್ಲ.
ಸಿ.ಟಿ.ಕೃಷ್ಣಮೂರ್ತಿ, ಒಕ್ಕೂಟದ ಜಿಲ್ಲಾಧ್ಯಕ್ಷ
*ರಾಜಭವನಕ್ಕೆ ಮುತ್ತಿಗೆ ಎಚ್ಚರಿಕೆ
ಸಿದ್ದರಾಮಯ್ಯ ಅವರಿಗೆ ಕೊಟ್ಟಿರುವ ನೋಟಿಸ್ ರಾಜ್ಯಪಾಲರು ಹಿಂಪಡೆಯಬೇಕು. ಇಲ್ಲದಿದ್ದರೆ ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.