ಮಾಜಿ ಸಂಸದ ಪ್ರತಾಪ್ ಸಿಂಹ ತಮ್ಮ ಕೊಳಕು ಮಿದುಳಿಗೆ ಬುದ್ಧಿ ಹೇಳಲಿ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಕಿಡಿ ಕಾರಿದ್ದಾರೆ.
ಉದಯಗಿರಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿರುವ ಅವರು, ಕೋಮು ಗಲಭೆಗೆ ಅವಕಾಶವಿಲ್ಲದಂತೆ ಶಾಂತವಾಗಿರುವ ರಾಜ್ಯವನ್ನು ಪ್ರಕ್ಷುಬ್ಧಗೊಳಿಸಲು ಸಮಾಜಘಾತುಕ ಶಕ್ತಿಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಇದರ ಭಾಗವಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಧರ್ಮವನ್ನು ಹೀಯಾಳಿಸುವ ಪೋಸ್ಟ್ ಹಾಕುವ ಮೂಲಕ ರಾಜಕೀಯವಾಗಿ ಮತ್ತು ಧಾರ್ಮಿಕವಾಗಿ ಸ್ನೇಹಮಯ ವಾತಾವರಣ ಹಾಳುಗೆಡವಲು ದುಷ್ಕರ್ಮಿಯೊಬ್ಬ ಯತ್ನಿಸಿದ್ದಾನೆ. ಈತನನ್ನು ಬಂಧಿಸಿ ಪೊಲೀಸರು ತ್ವರಿತ ಕ್ರಮ ತೆಗೆದುಕೊಂಡು ಕರ್ತವ್ಯಪರತೆ ಮೆರೆದಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಇಂತಹ ಘಟನೆಗಳಿಂದ ಲಾಭ ಪಡೆಯಲು ಸದಾ ಹವಣಿಸುವ ಬಿಜೆಪಿ ನಾಯಕರು, ಈ ದುಷ್ಕೃತ್ಯದೊಂದಿಗೆ ತಮ್ಮ ಅಸ್ತಿತ್ವ ಗುರುತಿಸಿಕೊಳ್ಳಲು ಮುಂದಾಗಿರುವುದು ಚಿಂತಾಜನಕ. ತಾವಾಗಿಯೇ ಸಾಮಾಜಿಕ ಸಾಮರಸ್ಯ ಹಾಳು ಮಾಡುವುದು, ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ಬೊಬ್ಬೆ ಹೊಡೆಯುವುದು ಬಿಜೆಪಿಯವರ ಹವ್ಯಾಸವಾದಂತಿದೆ. ಆರ್.ಅಶೋಕ್ ಸಹ ಈ ಹಿಂದೆ ಗೃಹ ಸಚಿವರಾಗಿದ್ದರು. ಘಟನೆಗೆ ಕಾರಣ ಏನು ಎನ್ನುವುದನ್ನು ಅರಿತಿದ್ದರೂ ಸಹ ಅವರು ಪ್ರಚೋದನಕಾರಿ ಹೇಳಿಕೆ ನೀಡುವುದು ಸರಿಯಲ್ಲ. ಪೋಸ್ಟ್ ಮಾಡಿರುವ ದುಷ್ಕರ್ಮಿ ಯಾರು, ಈತನ ಇತಿಹಾಸವೇನು, ಯಾರೊಂದಿಗೆ ಈತ ಒಡನಾಟ ಹೊಂದಿದ್ದ ಎನ್ನುವುದನ್ನು ಗಮನಿಸಿದರೆ, ಈ ವಿಪಕ್ಷ ನಾಯಕರ ಇಬ್ಬಗೆ ನೀತಿ ಬಯಲಾಗುತ್ತದೆ ಎಂದು ಟೀಕಿಸಿದ್ದಾರೆ.
ಸಾಮಾಜಿಕ ಮತ್ತು ಧಾರ್ಮಿಕ ಸ್ತಿಮಿತವಿಲ್ಲದ ಬೀಸು ಹೇಳಿಕೆಗಳಿಗೆ ಹೆಸರಾಗಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಈ ಘಟನೆಯಲ್ಲೂ ತನ್ನ ಅಮೋಘ ಬುದ್ಧಿಶಕ್ತಿ ಪ್ರದರ್ಶಿಸಿದ್ದಾರೆ. ಒಂದು ಸಮುದಾಯವನ್ನು ಓಲೈಸುತ್ತಿರುವುದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎನ್ನುವ ಇವರು, ಇಂತಹ ದುರ್ಘಟನೆಗಳಿಗೆ ಕಾರಣವಾಗುವ ಅನಾಹುತಕಾರಿ ಸುಳ್ಳು ಸುದ್ದಿಗಳ ಕಾರ್ಖಾನೆಯಾಗಿರುವ ವಾಟ್ಸ್‌ಆ್ಯಪ್ ಯೂನಿವರ್ಸಿಟಿಯ ತಮ್ಮ ಕೊಳಕು ಮಿದುಳುಗಳಿಗೆ ಏಕೆ ಬುದ್ಧಿ ಹೇಳುವುದಿಲ್ಲ ಎನ್ನುವುದು ವಿಚಿತ್ರ ಹಾಗೂ ಚಿಂತೆಯ ವಿಷಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಗೃಹ ಸಚಿವರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಪ್ರಬುದ್ಧ, ಅನುಭವಿ ಹಿರಿಯ ಸಚಿವರ ಕುರಿತು ವಿವೇಕದಿಂದ ಮಾತನಾಡಬೇಕು. ಮಹೇಶ್ ಹೇಳಿಕೆ ಅವಿವೇಕದ ಪರಮಾವಧಿ. ಪರಮೇಶ್ವರ್ ಕುರಿತು ಮಾತನಾಡುವ ಯೋಗ್ಯತೆ ಮಹೇಶ್‌ಗೆ ಇಲ್ಲ. ಇಂಥ ಹೇಳಿಕೆ ಪುನರಾವರ್ತನೆ ಆದರೆ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.