Wednesday, 12th December 2018  

Vijayavani

ಅಂತೂ ಹೊರಬಿತ್ತು ಮಧ್ಯಪ್ರದೇಶದ ಫಲಿತಾಂಶ: ಅತಂತ್ರ ರಾಜ್ಯದಲ್ಲಿ ಯಾರಿಗೆ ಅಧಿಕಾರ?        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಹಕ್ಕು ಮಂಡನೆ        ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆಯ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ಸಮಯ ಕೋರಿದ ಟಿಎಂಸಿ        ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ        ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕೆ. ಚಂದ್ರಶೇಖರ್​ ರಾವ್​       
Breaking News

ಪ್ರಣಬ್​ದಾ ನಿವೃತ್ತಿ ಜೀವನಕ್ಕೆ ಶುಭಹಾರೈಸೋಣ

Tuesday, 18.07.2017, 3:03 AM       No Comments

| ನಾಗರಾಜ ಇಳೆಗುಂಡಿ

‘ನನಗೆ ದೆಹಲಿ ಎಂಬುದು ಅಪರಿಚಿತ ನಗರವಾಗಿತ್ತು. ಪ್ರಧಾನಿಯಾಗಿ ಬಂದಮೇಲೆ ಇಲ್ಲಿನ ರೀತಿರಿವಾಜುಗಳಿಗೆ ಹೊಂದಿಕೊಳ್ಳಲು ನಾನು ಕಷ್ಟಪಡುತ್ತಿದ್ದೆ. ಆ ಸಂದರ್ಭದಲ್ಲಿ ನನ್ನ ನೆರವಿಗೆ ಬಂದವರು ಪ್ರಣಬ್​ಜಿಯವರು. ಅದು ನನ್ನ ಅದೃಷ್ಟ. ತಂದೆ ತನ್ನ ಮಗನನ್ನು ಹೇಗೆ ಕಾಳಜಿ ಅಕ್ಕರೆಯಿಂದ ಕಾಣುತ್ತಾನೋ ಅದೇ ರೀತಿ ಪ್ರಣಬ್​ಜಿ ನನ್ನನ್ನು ನೋಡಿಕೊಂಡರು. ಇದು ಅತಿಶಯೋಕ್ತಿಯಲ್ಲ. ಈ ಮಾತನ್ನು ನಾನು ಹೃದಯಾಂತರಾಳದಿಂದ ಹೇಳುತ್ತಿದ್ದೇನೆ’- ಹೀಗೆಂದು ಭಾವುಕರಾದವರು ಪ್ರಧಾನಮಂತ್ರಿ ನರೇಂದ್ರ ಮೋದಿ. ಸಂದರ್ಭ- ರಾಷ್ಟ್ರಪತಿ ಭವನದಲ್ಲಿ ಈಚೆಗೆ ನಡೆದ ಕ್ಟಛಿಠಜಿಛಛ್ಞಿಠಿ ಕ್ಟಚ್ಞಚಚಿ Mkಜಛ್ಟಿ್ಜಛಿ:ಅ ಖಠಿಚಠಿಛಿಠಞಚ್ಞ ಕೃತಿ ಲೋಕಾರ್ಪಣೆ ಸಮಾರಂಭ.

‘ನೀವು ಏಕೆ ಈ ಪರಿ ಓಡಾಡುತ್ತೀರಿ? ನಿಮ್ಮ ಕಾರ್ಯಕ್ರಮಗಳಲ್ಲಿ ಕಡಿತ ಮಾಡಿಕೊಳ್ಳಿ. ವಿಶ್ರಾಂತಿ ತೆಗೆದುಕೊಳ್ಳಿ. ಆರೋಗ್ಯದ ಬಗ್ಗೆ ಗಮನಹರಿಸಿ’ ಎಂದು ಪ್ರಣಬ್​ಜಿ ನನಗೆ ಸಲಹೆ ನೀಡುತ್ತಿದ್ದರು. ಇಷ್ಟೇ ಅಲ್ಲ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಪ್ರಚಾರ ಸಮಯದಲ್ಲಿ ಸಹ ನನ್ನ ಆರೋಗ್ಯದ ಬಗ್ಗೆ ಕಿವಿಮಾತು ಹೇಳಿದ್ದರು. ಚುನಾವಣೆಯೆಂದರೆ ಅಲ್ಲಿ ಸೋಲು ಅಥವಾ ಗೆಲುವು ಇದ್ದೇ ಇರುತ್ತದೆ. ನೀವು ನಿಮ್ಮ ದೇಹಾರೋಗ್ಯದ ಬಗ್ಗೆ ಗಮನಿಸೋದು ಬೇಡವಾ? ಎಂದು ನನ್ನನ್ನು ಕೇಳಿದ್ದರು. ಹಾಗೆನೋಡಿದರೆ ಅದು ರಾಷ್ಟ್ರಪತಿಯ ಕೆಲಸದ ಭಾಗವೇನೂ ಅಲ್ಲ. ಅದನ್ನವರು ಶುದ್ಧ ಮಾನವೀಯ ನೆಲೆಯಲ್ಲಿ ನೋಡಿದ್ದರು’ ಎಂದೂ ಮೋದಿ ನೆನಪಿಸಿಕೊಂಡರು.

ಈ ಮಾತಿಗೆ ಪುಷ್ಟಿ ನೀಡುವಂತೆ ಪ್ರಣಬ್ ಮುಖರ್ಜಿ ಕೂಡ ಮೋದಿ ಕಾರ್ಯಶೈಲಿಯನ್ನು ಹೊಗಳಿದರು. ‘ಹಲವು ವಿಷಯಗಳ ಬಗ್ಗೆ ಹಲವು ಸಂದರ್ಭಗಳಲ್ಲಿ ನಾನು ಸರ್ಕಾರದಿಂದ ಸ್ಪಷ್ಟನೆಗಳನ್ನು ಕೇಳಿದ್ದುಂಟು. ಆಗೆಲ್ಲ ಸಚಿವ ಅರುಣ್ ಜೇಟ್ಲಿಯವರು ಒಬ್ಬ ಸಮರ್ಥ ಮತ್ತು ಪರಿಣಾಮಕಾರಿ ವಕೀಲನಂತೆ ಸರ್ಕಾರದ ನಿಲುವನ್ನು ಮನವರಿಕೆ ಮಾಡಿಕೊಡುತ್ತಿದ್ದರು’ ಎಂದು ಪ್ರಣಬ್ ಮುಖರ್ಜಿ ಅದೇ ವೇದಿಕೆಯಲ್ಲಿ ಹೇಳಿದರು.

ಅಧಿಕಾರಾವಧಿ ಪೂರೈಸಿ ನಿವೃತ್ತಿಯತ್ತ ತೆರಳುತ್ತಿರುವ ಹೊಸ್ತಿಲಲ್ಲಿ ಒಬ್ಬ ರಾಷ್ಟ್ರಪತಿಗೆ ಒಬ್ಬ ಪ್ರಧಾನಮಂತ್ರಿಯಿಂದ ಸಿಗಬಹುದಾದ ಅರ್ಥಪೂರ್ಣ ಹಾಗೂ ಹೃದಯರ್ಸ³ ವಿದಾಯ ಇದೆಂದು ಹೇಳಬಹುದು. ಅದೂ, ರಾಜ್ಯಪಾಲರು ಮತ್ತಿತರ ಸಂವಿಧಾನಾತ್ಮಕ ಹುದ್ದೆಗಳು ಹಾಗೂ ಸರ್ಕಾರದ ಮುಖ್ಯಸ್ಥರ ನಡುವೆ ಮುನಿಸು, ಅಸಮಾಧಾನಗಳ ಮುಸುಮುಸು ನಡೆಯುವುದನ್ನು ಅಲ್ಲಲ್ಲಿ ಕಂಡಾಗ ಇಂಥದೊಂದು ಸೌಹಾರ್ದ ಸಂಬಂಧ ಆಡಳಿತ ಸುಸೂತ್ರವಾಗಿ ನಡೆಯಲು ಎಷ್ಟು ಅತ್ಯಗತ್ಯ ಎಂಬುದು ಮನವರಿಕೆಯಾಗುತ್ತದೆ. ರಾಷ್ಟ್ರಪತಿ ಹುದ್ದೆ ರಾಜಕೀಯಕ್ಕೆ ಅತೀತವಾಗಿರುವುದರಿಂದ ಮುಖರ್ಜಿ ಕಾಂಗ್ರೆಸ್ ಪಕ್ಷದವರಾಗಿದ್ದರೂ, ಸರ್ಕಾರ ಹಾಗೂ ರಾಷ್ಟ್ರಪತಿ ಭವನದ ನಡುವೆ ಸಂವಹನಕ್ಕೆ ಸಮಸ್ಯೆಯೇನೂ ಆಗಲಿಲ್ಲ ಎಂಬುದನ್ನು ನಾವು ಗಮನಿಸಬೇಕು. ಏಕೆಂದರೆ, ಹಿಂದೆ ರಾಜೀವ್ ಗಾಂಧಿ ಸರ್ಕಾರವಿದ್ದಾಗ, ಆಗಿನ ರಾಷ್ಟ್ರಪತಿಯಾಗಿದ್ದ ಗ್ಯಾನಿ ಜೇಲ್ ಸಿಂಗ್ ಅವರಿಗೂ ಹಾಗೂ ಪ್ರಧಾನಿ ರಾಜೀವ್​ಗೂ ಕೊನೆಕೊನೆಯಲ್ಲಿ ಅಷ್ಟಾಗಿ ಆಗಿಬರುತ್ತಿರಲಿಲ್ಲ. ಅಂಚೆಕಚೇರಿಗೆ ಬರುವ ಪತ್ರಗಳನ್ನು ಸಂಶಯ ಬಂದರೆ ಸರ್ಕಾರ ಒಡೆದುನೋಡಬಹುದು ಎಂಬ ಮಸೂದೆಗೆ ಅಂಕಿತ ಹಾಕಲು ನಿರಾಕರಿಸಿದ್ದು, ನ್ಯಾಯಾಧೀಶರ ನೇಮಕಾತಿ, ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕಾರ್ಯನಿರ್ವಹಿಸಿದರೆಂಬ ಆರೋಪ ಕೇಳಿಬಂದಿದ್ದಕ್ಕೆ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಕರೆಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದು ಈ ಮುಂತಾದ ಕಾರಣಗಳಿಂದಾಗಿ ಜೇಲ್ ಸಿಂಗ್ ಹಾಗೂ ರಾಜೀವ್ ನಡುವೆ ಸಂಬಂಧ ಹಳಸಿತ್ತು ಎನ್ನಲಾಗುತ್ತದೆ. ಜೇಲ್ ಸಿಂಗ್ ಕಾಂಗ್ರೆಸ್ಸಿಗರೇ ಆಗಿದ್ದರೆಂಬುದನ್ನು ಮರೆಯುವಂತಿಲ್ಲ.

ಜೇಲ್ ಸಿಂಗ್ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದು 1982ರ ಜುಲೈ 25ರಂದು. ಆಗ ಇಂದಿರಾ ಗಾಂಧಿ ಪ್ರಧಾನಿ. ಸಿಂಗ್ ಈ ಅತ್ಯುನ್ನತ ಹುದ್ದೆಗೆ ಬಂದಿದ್ದು ತಮ್ಮ ಅರ್ಹತೆ, ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಇಂದಿರಾನಿಷ್ಠ ಎಂಬ ಕಾರಣದಿಂದ ಎಂಬ ಟೀಕೆಗಳು ಸಹ ಆಗ ಕೇಳಿಬಂದಿದ್ದವು. ಪರಸ್ಪರ ಸಂಬಂಧವಿಲ್ಲದಿದ್ದರೂ ಇಲ್ಲೊಂದು ಕುತೂಹಲದ ಸಂಗತಿಯನ್ನು ನಾವು ಗಮನಿಸಬಹುದು. ಪ್ರಣಬ್ ಮುಖರ್ಜಿ 1969ರಲ್ಲಿ ಕಾಂಗ್ರೆಸ್ ಟಿಕೆಟ್​ನ ಮೇಲೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ಇದಕ್ಕೆ ಕಾರಣವಾದದ್ದು ಅದೇ ಇಂದಿರಾ ಗಾಂಧಿ. ಭವಿಷ್ಯದ ನಾಯಕನ ಗುಣಲಕ್ಷಣಗಳನ್ನು ಪ್ರಣಬ್​ರಲ್ಲಿ ಗುರುತಿಸಿದ್ದರೋ ಏನೋ ಇಂದಿರಾ? ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಪ್ರಣಬ್, ಅನತಿ ಕಾಲದಲ್ಲೇ ಇಂದಿರಾ ವಿಶ್ವಾಸಕ್ಕೆ ಪಾತ್ರರಾದರು. ಇದಕ್ಕೆ ಪ್ರತಿಫಲವೋ ಎಂಬಂತೆ, 1973ರಲ್ಲಿ ಸಚಿವರಾದರು. ಹಾಗಂತ ಇಲ್ಲಿ ಪ್ರಣಬ್​ರ ಸಾಮರ್ಥ್ಯವನ್ನು ಸಂಶಯಿಸಬೇಕಾದ ಪ್ರಮೇಯವೇನೂ ಬಂದಿರಲಿಲ್ಲ. ಆದರೆ 1977ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇವರ ನಡವಳಿಕೆ-ಕ್ರಮಗಳ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಸರ್ಕಾರದ ಭಾಗವಾದ ಮೇಲೆ ಇಂಥದಕ್ಕೆಲ್ಲ ತಲೆಕೊಡಬೇಕು ತಾನೆ?

1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದಾಗ, ಪ್ರಧಾನಿ ಯಾರು ಎಂಬ ಪ್ರಶ್ನೆಗಳೆದ್ದಿದ್ದವು. ಹಲವು ಹೆಸರುಗಳು ಕೇಳಿಬರುತ್ತಿದ್ದವಾದರೂ, ರಾಜಕೀಯ ಅನನುಭವಿ ರಾಜೀವ್ ಗಾಂಧಿ ಆ ಪಟ್ಟವೇರಿದರು. ಗಾಂಧಿ-ನೆಹರು ಕುಟುಂಬ ಪ್ರಭಾವಳಿಯಿಂದ ಹೊರಬರಲು ಆ ಪಕ್ಷ ಸಿದ್ಧವಿಲ್ಲ ಎಂಬುದಕ್ಕೆ ಅದು ಮತ್ತೊಂದು ಪುರಾವೆಯಾಗಿತ್ತಷ್ಟೆ. ಆಗ ತಮಗೆ ದಕ್ಕಬೇಕಿದ್ದ ಅವಕಾಶ ಕೈತಪ್ಪಿತು ಎಂದು ಪ್ರಣಬ್ ಮುಖರ್ಜಿ ಬೇಸರ ಮತ್ತು ಕೋಪ ಮಾಡಿಕೊಂಡಿದ್ದರಂತೆ. ಇಂದಿರಾ ನಂತರ ಪ್ರಧಾನಿ ಹುದ್ದೆ ನ್ಯಾಯಯುತವಾಗಿ ತನಗೆ ಸಿಗಬೇಕು ಎಂದು ಅವರು ಬಯಸಿದ್ದರಂತೆ. ಈ ಅಧಿಕಾರದಾಟದಲ್ಲಿ ಪರಾಭವ ಕಂಡ ಪ್ರಣಬ್, ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಎಂಬ ಪ್ರತ್ಯೇಕ ಪಕ್ಷ ಸ್ಥಾಪಿಸಿಬಿಟ್ಟರು. ಆದರೆ ಅಲ್ಲಿ ಅವರಿಗೆ ಭ್ರಮನಿಸರಸನ ಕಾದಿತ್ತು. ದೊಡ್ಡ ದೊಡ್ಡ ತಲೆಗಳಾರೂ ಅವರತ್ತ ಸುಳಿಯಲಿಲ್ಲ. ಚುನಾವಣಾ ರಾಜಕೀಯದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದಿದ್ದುದು ಹಾಗೂ ಜನನಾಯಕನೆಂಬ ಇಮೇಜ್ ಅವರಿಗಿರದಿದ್ದುದೂ ಇದಕ್ಕೆ ಕಾರಣವಾಗಿತ್ತು. ಕ್ರಮೇಣ ರಾಜೀವ್ ಹಾಗೂ ಪ್ರಣಬ್ ನಡುವೆ ಸಂಬಂಧ ಸುಧಾರಿಸುತ್ತ ಬಂದು 1989ರಲ್ಲಿ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್​ನಲ್ಲಿ ವಿಲೀನವಾಯಿತು. ತದನಂತರ ಪಿ.ವಿ.ನರಸಿಂಹ ರಾವ್ ಅವಧಿಯಲ್ಲಿ ಪ್ರಣಬ್ ರಾಜಕೀಯ ಬದುಕಿಗೆ ಮತ್ತೆ ಮೆರುಗು ಬಂತು. 1991ರಲ್ಲಿ ಪ್ರಣಬ್​ರನ್ನು ಯೋಜನಾ ಆಯೋಗದ ಉಪಾಧ್ಯಕ್ಷ ಹುದ್ದೆಗೆ ತಂದ ರಾವ್, 1995ರಲ್ಲಿ ವಿದೇಶಾಂಗ ಮಂತ್ರಿಪದವಿ ನೀಡಿದರು. ತರುವಾಯದಲ್ಲಿ ಮತ್ತೆ ಮುಂಚೂಣಿಗೆ ಬಂದ ಪ್ರಣಬ್, ಪಕ್ಷದಲ್ಲಿ ನೀತಿನಿರ್ಧಾರಗಳ ವಿಷಯದಲ್ಲಿ ಪ್ರಮುಖ ಭೂಮಿಕೆ ನಿಭಾಯಿಸತೊಡಗಿದರು. ಪತಿ ರಾಜೀವ್ ಹತ್ಯೆನಂತರದಲ್ಲಿ, ಪಕ್ಷವನ್ನು ಮುನ್ನಡೆಸಬೇಕೆಂದು ಎಷ್ಟೇ ಒತ್ತಡ ಬಂದರೂ ಹೂಂಗುಡದಿದ್ದ ಸೋನಿಯಾ ಗಾಂಧಿ ನಂತರದಲ್ಲಿ ಸಕ್ರಿಯ ರಾಜಕೀಯಕ್ಕೆ ಬರುವಂತಾಗುವಲ್ಲಿ ಪ್ರಣಬ್ ಮುಖರ್ಜಿ ಪಾತ್ರವೂ ಪ್ರಮುಖವಾಗಿತ್ತು. ಅಷ್ಟೇ ಅಲ್ಲ, ಒಂದರ್ಥದಲ್ಲಿ ಸೋನಿಯಾಗೆ ರಾಜಕೀಯ ಮಾರ್ಗದರ್ಶಿಯಂತೇ ಇದ್ದರು. ಇಂದಿರಾ ಗಾಂಧಿ ಕಾರ್ಯಶೈಲಿ, ವಿವಿಧ ಸನ್ನಿವೇಶಗಳಲ್ಲಿ ಅವರು ನಿರ್ಧಾರ ತೆಗೆದುಕೊಳ್ಳುತ್ತಿದ್ದ ರೀತಿ ಈ ಮುಂತಾದ ಸಂಗತಿಗಳನ್ನು ಪ್ರಣಬ್ ಸೋನಿಯಾಗೆ ಮನಮುಟ್ಟುವಂತೆ ವಿವರಿಸುತ್ತಿದ್ದರಂತೆ. ರಾಜಕೀಯ ಅನುಭವ ಇಲ್ಲದ ಸೋನಿಯಾಗೆ ಇದರಿಂದ ಬಹುರೀತಿಯಲ್ಲಿ ಪ್ರಯೋಜನವಾಯಿತು. ಯುಪಿಎ ಮೈತ್ರಿಕೂಟ ಹಾಗೂ ಸರ್ಕಾರ ಇಕ್ಕಟ್ಟು-ಬಿಕ್ಕಟ್ಟಿನಲ್ಲಿ ಸಿಲುಕಿದ ಸಂದರ್ಭಗಳಲ್ಲಿ ‘ಸಂಕಟವಿಮೋಚಕ’ನಾಗಿ ಒದಗುತ್ತಿದ್ದವರೂ ಇದೇ ಪ್ರಣಬ್. 2012ರಲ್ಲಿ ರಾಷ್ಟ್ರಪತಿ ಹುದ್ದೆಗೆ ಬರುವವರೆಗೆ ಮನಮೋಹನ್ ಸಿಂಗ್ ಸರ್ಕಾರದಲ್ಲಿ ನಂಬರ್ 2 ಆಗಿದ್ದರು. ಅಂದಹಾಗೆ, 1982ರಲ್ಲಿ ಇದೇ ಮನಮೋಹನ್ ಸಿಂಗ್​ರನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ನೇಮಿಸಿದ್ದು ಪ್ರಣಬ್ ಮುಖರ್ಜಿಯವರೇ. ಆಗ ಅವರು ಇಂದಿರಾ ಸಂಪುಟದಲ್ಲಿ ಹಣಕಾಸು ಖಾತೆ ಹೊಂದಿದ್ದರು. ಭಾರತದ ಆರ್ಥಿಕತೆ ಸುಧಾರಣೆಗೆ ಶ್ರಮಿಸಿದ ಆರಂಭಿಕರಲ್ಲಿ ಪ್ರಣಬ್ ಕೂಡ ಒಬ್ಬರು. 1980ರ ಸಂದರ್ಭದಲ್ಲಿಯೇ ಮುಖರ್ಜಿ ಹಾಗೂ ಆಗಿನ ಕೈಗಾರಿಕಾ ಸಚಿವ ಚರಣ್​ಜಿತ್ ಚನಾನಾ ಆರ್ಥಿಕ ಸುಧಾರಣೆಗೆ ಚಾಲನೆ ನೀಡಿದ್ದರು. ಅದುವೇ ಮುಂದೆ ನರಸಿಂಹ ರಾವ್-ಮನಮೋಹನ್ ಸಿಂಗ್ ಅವಧಿಯಲ್ಲಿ ಉದಾರೀಕರಣವಾಗಿ ವಿಶಾಲವಾಗಿ ತೆರೆದುಕೊಂಡಿತು ಎಂದೂ ಕೆಲ ತಜ್ಞರು ಗುರುತಿಸುತ್ತಾರೆ.

ಹಿಂದೆ, ಪ್ರಧಾನಿ ಪಟ್ಟವನ್ನು ತಪ್ಪಿಸಿದ್ದಕ್ಕೆ ಪ್ರಾಯಶ್ಚಿತ್ತರೂಪವಾಗಿ ಕಾಂಗ್ರೆಸ್ ಪಕ್ಷ ಪ್ರಣಬ್​ರನ್ನು ರಾಷ್ಟ್ರಪತಿಯನ್ನಾಗಿಸಿತು ಎಂಬ ಮಾತೂ ಇದೆ. ಇದೇನೇ ಇದ್ದರೂ, ಅವರು ಆ ಪದವಿಗೆ ಅರ್ಹರು ಹಾಗೂ ಆ ಹೊಣೆಗಾರಿಕೆಗೆ ನ್ಯಾಯಒದಗಿಸಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಂಬೋಣ. 1993ರ ಮುಂಬೈ ಸರಣಿ ಬಾಂಬ್ ಸ್ಪೋಟದ ಅಪರಾಧಿ ಯಾಕುಬ್ ಮೆಮೊನ್, 2008ರ ಮುಂಬೈ ದಾಳಿಕೋರ ಅಜ್ಮಲ್ ಕಸಬ್, ಸಂಸತ್ ಭವನದ ಮೇಲಿನ ದಾಳಿಯ ಸಂಚುಕೋರ ಅಫ್ಝಲ್ ಸೇರಿದಂತೆ 24ಕ್ಕೂ ಅಧಿಕ ಅಪರಾಧಿಗಳ ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸುವ ಮೂಲಕ, ಶಿಕ್ಷೆ ಜಾರಿಗೆ ಅನುವುಮಾಡಿಕೊಟ್ಟರು. ಭೂಸ್ವಾಧೀನ ಮಸೂದೆಗೆ ಸಂಸತ್ ಅಂಗೀಕಾರ ಸಾಧ್ಯವಾಗದ್ದರಿಂದ ಪದೇಪದೆ ಸುಗ್ರೀವಾಜ್ಞೆ ಹೊರಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದೂ ಸೇರಿದಂತೆ ಕೆಲ ಸಂದರ್ಭಗಳಲ್ಲಿ ಮೋದಿ ಸರ್ಕಾರಕ್ಕೆ ಮುಜುಗರವಾಗುವಂತೆ ಪ್ರಣಬ್ ನಡೆ ಇತ್ತಾದರೂ, ಒಟ್ಟಾರೆಯಾಗಿ ರಾಷ್ಟ್ರಪತಿ ಹಾಗೂ ಪ್ರಧಾನಿ ಸಂಬಂಧ ಹಳಿತಪ್ಪಲಿಲ್ಲ.

ಇನ್ನು, ಅವರ ಕುಟುಂಬಜೀವನದತ್ತ ನೋಡುವುದಾದರೆ, 1935ರ ಡಿಸೆಂಬರ್ 11ರಂದು ಬ್ರಿಟಿಷ್ ಆಡಳಿತವಿದ್ದ ಬಂಗಾಳದ ಮಿರಾಟಿಯಲ್ಲಿ ಜನಿಸಿದ ಪ್ರಣಬ್, 1957ರ ಜುಲೈ 13ರಂದು ಕೋಲ್ಕತ್ತದ ಸುವ್ರಾ ಮುಖರ್ಜಿಯನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಗಂಡು ಮತ್ತು ಓರ್ವ ಮಗಳಿದ್ದಾಳೆ. ಪುತ್ರ ಅಭಿಜಿತ್ ಪಶ್ಚಿಮ ಬಂಗಾಳದ ಜಂಗಿಪುರ ಕ್ಷೇತ್ರದಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿದ್ದಾರೆ. ದ್ವಿತೀಯ ಪುತ್ರ ಇಂದ್ರಜಿತ್ ರಾಜಕೀಯದಿಂದ ದೂರವಿದ್ದು, ಮಗಳು ಶರ್ವಿುಷ್ಠಾ ಕಥಕ್ ನೃತ್ಯಗಾತಿ. ಕಾಂಗ್ರೆಸ್​ನ ಸದಸ್ಯೆಯಾಗಿದ್ದರೂ ರಾಜಕೀಯದಲ್ಲಿ ಅಷ್ಟೊಂದು ಸಕ್ರಿಯರಾಗಿಲ್ಲ. ಪ್ರಣಬ್ ಪತ್ನಿ ಸುವ್ರಾ 2015ರ ಆಗಸ್ಟ್ 18ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಊರಲ್ಲಿ ದುರ್ಗಾಪೂಜೆ ಸಂಭ್ರಮದಲ್ಲಿ ಭಾಗಿಯಾಗುವುದನ್ನು ಇಷ್ಟಪಡುವ ಪ್ರಣಬ್, ಅಗಾಧವಾಗಿ ಓದಿಕೊಂಡವರು. ನಿವೃತ್ತಿನಂತರ ಸಾಮಾನ್ಯ ನಾಗರಿಕನಂತೆ ಜೀವನ ನಡೆಸುವುದಾಗಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಅವರ ನಿವೃತ್ತಿಜೀವನಕ್ಕೆ ಶುಭಹಾರೈಸೋಣ ಅಲ್ಲವೆ…

ಸುಮಾರು ಆರು ದಶಕಗಳ ರಾಜಕೀಯ ಬದುಕಿನಲ್ಲಿ ಏಳುಬೀಳು ಕಾಣುತ್ತಲೇ ದೇಶದ ಅತ್ಯುನ್ನತ ಸ್ಥಾನದವರೆಗೆ ತಲುಪಿದ ಪ್ರಣಬ್ ಮುಖರ್ಜಿ ಸ್ವತಂತ್ರಭಾರತದಲ್ಲಿ ಹೊಂದಿದ ಸ್ಥಾನ ಏನೆಂಬುದನ್ನು ಇತಿಹಾಸ ನಿರ್ಧರಿಸಲಿದೆ.

(ಲೇಖಕರು ‘ವಿಜಯವಾಣಿ’ ಸಹಾಯಕ ಸಂಪಾದಕರು) (ಅನಿವಾರ್ಯ ಕಾರಣದಿಂದ ಇಂದು ಮುಜಫರ್ ಹುಸೇನ್ ಅವರ ಹಕೀಕತ್ಕೀ ಕಹಾನಿ ಅಂಕಣ ಪ್ರಕಟವಾಗಿಲ್ಲ)

Leave a Reply

Your email address will not be published. Required fields are marked *

Back To Top