ಪ್ರಜ್ಞಾವಸ್ಥೆಯಲ್ಲೇ ತೆರೆದ ಮಿದುಳು ಶಸ್ತ್ರಚಿಕಿತ್ಸೆ

ಬೆಂಗಳೂರು: 17 ವರ್ಷದ ಬಾಲಕನನ್ನು ಸಂಪೂರ್ಣ ಪ್ರಜ್ಞಾವಸ್ಥೆಯಲ್ಲಿರಿಸಿ, ಮಿದುಳಿನ ಅಪಧಮನಿಯಲ್ಲಾಗಿದ್ದ ವಿರೂಪತೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸುವಲ್ಲಿ ಶೇಷಾದ್ರಿಪುರ ಅಪೋಲೋ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ಹಿರಿಯ ನರರೋಗಶಾಸ್ತ್ರಜ್ಞ ಡಾ. ರವಿ ಮೋಹನ್ ಹಾಗೂ ವೈದ್ಯರ ತಂಡ ಈ ಸಾಧನೆ ಮಾಡಿದೆ.

ಮಿದುಳಿನ ರಕ್ತನಾಳದಲ್ಲಿ ಅಸಹಜವಾಗಿ ರಕ್ತ ಸಂಗ್ರಹವಾಗುವ ಸಮಸ್ಯೆ ಬಾಲಕನಲ್ಲಿ ಕಾಣಿಸಿತ್ತು. ಇದು ಹುಟ್ಟಿನಿಂದಲೇ ಇದ್ದರೂ ಇದುವರೆಗೆ ಪತ್ತೆಯಾಗಿರಲಿಲ್ಲ. ಎಂಆರ್​ಐ ಸ್ಕ್ಯಾನ್​ನಲ್ಲಿ ದೃಢಪಟ್ಟಿತು. ಆಗ ರೋಗಿ ಸಂಪೂರ್ಣ ಪ್ರಜ್ಞಾವಸ್ಥೆಯಲ್ಲಿ ಇರುವಾಗಲೇ ಮಿದುಳು ಶಸ್ತ್ರಚಿಕಿತ್ಸೆ ನಡೆಸುವ ಬಗ್ಗೆ ಪಾಲಕರಿಗೆ ವಿವರಿಸಲಾಯಿತು. ಬಾಲಕನಿಗೂ ಈ ಕುರಿತು 2 ದಿನ ವಿಶೇಷ ತರಬೇತಿ ನೀಡಿ, ಬಳಿಕ ಶಸ್ತ್ರಚಿಕಿತ್ಸೆ ಮಾಡಲಾಯಿತು. ಕೆಲವೇ ದಿನದಲ್ಲಿ ಆತ ಸಂಪೂರ್ಣ ಗುಣಮುಖನಾಗಿ 12ನೇ ತರಗತಿ ಪರೀಕ್ಷೆಯನ್ನೂ ಬರೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಗುಣಲಕ್ಷಣ, ಚಿಕಿತ್ಸೆ ವಿಧಾನ: ಈ ಕಾಯಿಲೆಯಿಂದ ವಿಪರೀತ ತಲೆ ನೋವು ಅಥವಾ ಮಿದುಳಿನ ಒಳಗೇ ರಕ್ತಸ್ರಾವ ಉಂಟಾಗಿ ಅಂಗಾಂಗಳು ದುರ್ಬಲವಾಗುವ ಸಾಧ್ಯತೆಗಳಿರುತ್ತದೆ. ಮಿದುಳಿನಲ್ಲಿ ಸಮಸ್ಯೆ ಇರುವ ಭಾಗಕ್ಕೆ ಸನ್ನೆ ನೀಡುವ ಕೋಶಗಳಿದ್ದು, ರೇಡಿಯೋ ಥೆರಪಿ ಅಥವಾ ಇನ್ನಿತರ ವಿಧಾನಗಳಿಂದ ತೊಂದರೆಯಾಗುವ ಸಂಭವ ಹೆಚ್ಚಿರುತ್ತದೆ. ಹೀಗಾಗಿ ರೋಗಿ ಪ್ರಜ್ಞಾವಸ್ಥೆಯಲ್ಲಿರುವಾಗಲೇ ತೆರೆದ ಮಿದುಳು ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಸಲಹೆ ನೀಡುತ್ತಾರೆ. ಶಸ್ತ್ರಚಿಕಿತ್ಸೆ ವೇಳೆ ರೋಗಿ ಜತೆ ವೈದ್ಯರು ನಿರಂತರ ಸಂವಹನ ಮಾಡುತ್ತಿರುತ್ತಾರೆ. ಈ ಮೂಲಕ ಮಿದುಳಿನಿಂದ ಬರುವ ಸನ್ನೆಗಳ ಮೇಲೆ ನಿಗಾ ಇಡಲಾಗುತ್ತದೆ ಎಂದು ಅಪೋಲೋ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

 

Leave a Reply

Your email address will not be published. Required fields are marked *