ಪ್ರಜಾಪ್ರಭುತ್ವ ರಕ್ಷಣೆಗೆ ಕೈಜೋಡಿಸಿ

ರಾಮನಗರ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು, ಕೋಮುವಾದಿ ಶಕ್ತಿಗಳನ್ನು ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕೆಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಭಾನುವಾರ ಸಂಜೆ ನಡೆದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಎಸ್ಸಿ, ಎಸ್ಟಿ ಘಟಕಗಳ ಸಭೆಯಲ್ಲಿ ಮಾತನಾಡಿದರು. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ದೇಶದಲ್ಲಿ ಅಸಹಿಷ್ಣುತೆ ವಾತಾವರಣ ನಿರ್ವಣವಾಗಿದೆ. ಅಲ್ಪಸಂಖ್ಯಾತರು, ದಲಿತ ಸಮುದಾಯದವರಿಗೆ ರಕ್ಷಣೆ ಇಲ್ಲದಂತಾಗಿದೆ. ಕೇಂದ್ರ ಸಚಿವರೊಬ್ಬರು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹಲವು ಬಾರಿ ಹೇಳಿದರೂ ಪ್ರಧಾನಮಂತ್ರಿಯಾಗಲಿ, ಆರ್​ಎಸ್​ಎಸ್​ನವರಾಗಲಿ ಖಂಡಿಸುವ ಪ್ರಯತ್ನ ಮಾಡಿಲ್ಲ. ದೇಶದಲ್ಲಿ ಶಾಂತಿ ನೆಲಸಲು ಮತ್ತು ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು ಎಂದರು.

ಕಾಂಗ್ರೆಸ್ ಎಸ್ಸಿ, ಎಸ್ಟಿ ವಿಭಾಗದ ಜಿಲ್ಲಾ ಘಟಕ ಅಧ್ಯಕ್ಷ ರಾಂಪುರ ನಾಗೇಶ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ದಲಿತ ಸಮುದಾಯದ ಮೇಲೆ ದೌರ್ಜನ್ಯಗಳು ನಡೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಡಿ.ಕೆ. ಸುರೇಶ್ ಐದು ವರ್ಷಗಳಲ್ಲಿ ಅಂಬೇಡ್ಕರ್ ಸಮುದಾಯ ಭವನ, ಶುದ್ಧ ಕುಡಿಯುವ ನೀರಿನ ಘಟಕ, ಸೇರಿ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ದಲಿತ ಯುವ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ನೆರವಾಗಿದ್ದಾರೆ ಎಂದರು.

ಕೊನೆ ಗಳಿಗೆಯಲ್ಲಿ ಏನ್ಬೇಕಾದ್ರೂ ಆಗಬಹುದು ನನ್ನ ವಿರುದ್ಧ ಮಹಿಳೆಯನ್ನು ನಿಲ್ಲಿಸಿದರೆ ನನಗೆ ಆತಂಕವಿಲ್ಲ. ಜಾತಕ, ಭವಿಷ್ಯವನ್ನೆಲ್ಲಾ ನನ್ನ ಅಣ್ಣ (ಡಿ.ಕೆ. ಶಿವಕುಮಾರ್) ನೋಡಿಕೊಳ್ಳುತ್ತಾರೆಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾ.26ರ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದೇನೆ. ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದರು. ಅಲ್ಲದೆ ಈ ಕ್ಷೇತ್ರದಿಂದ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್​ಗಾಂಧಿ ಸ್ಪರ್ಧಿಸುತಾರೆಂಬ ವದಂತಿಗೆ ಸ್ಪಷ್ಟ ಉತ್ತರ ನೀಡದ ಡಿ.ಕೆ.ಸುರೇಶ್, ಕೊನೇ ಗಳಿಗೆಯಲ್ಲಿ ಏನು ಬೇಕಾದರೂ ಆಗಬಹುದು ಎಂದರು.