ಪ್ರಜಾಪ್ರಭುತ್ವದ ಯಶಸ್ಸು ಮತದಾನದ ಮೇಲೆ ಅವಲಂಬಿತ

ಶಿವಮೊಗ್ಗ: ಮತದಾನ ಈ ದೇಶದ ಪ್ರತಿಯೊಬ್ಬ ನಾಗರಿಕರ ಹಕ್ಕು ಮತ್ತು ಕರ್ತವ್ಯವೂ ಆಗಿದೆ. ಪ್ರಜಾಪ್ರಭುತ್ವದ ಯಶಸ್ವಿಗೆ ಪ್ರತಿಯೊಬ್ಬರೂ ಮತದಾನ ಮಾಡಬೇಕು. ತಪ್ಪಿದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಸಡಿಲಗೊಂಡು ಅರಾಜಕತೆ ಸೃಷ್ಟಿಗೆ ಕಾರಣವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ್ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಮತದಾರರ ಜಾಗೃತಿಗೆ ಏರ್ಪಡಿಸಿದ್ದ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಯಶಸ್ಸು ಚುನಾವಣೆ ಮತ್ತು ಮತದಾನದ ಮೇಲೆ ಅವಲಂಬಿಸಿದೆ ಎಂದರು.

ಮತದಾರರನ್ನು ಮತಗಟ್ಟೆಗೆ ಸೆಳೆಯಲು ಹಾಗೂ ಮತದಾನದ ಮಹತ್ವವನ್ನು ತಿಳಿಸಲು ವಸ್ತು ಪ್ರದರ್ಶನ ವಿಶಿಷ್ಟ ಪಾತ್ರ ವಹಿಸಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಬಸ್ ನಿಲ್ದಾಣದಲ್ಲಿ ವಸ್ತು ಪ್ರದರ್ಶನ ಮಳಿಗೆ ಆರಂಭಿಸಿರುವುದರಿಂದ ಪ್ರಯಾಣಕ್ಕೆ ಹೊರಟಿರುವ ಮತದಾರರನ್ನು ಕ್ಷಣ ಕಾಲ ನಿಲ್ಲಿಸಿ ಮತದಾನದ ದಿನಾಂಕ ನೆನಪಿಸಲು ಹಾಗೂ ಯಾವುದೆ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಲು ಪ್ರೇರೇಪಣೆ ನೀಡಲಿದೆ ಎಂದರು.

ಅಂಗವಿಕಲ ಮತದಾರರು ಮತಗಟ್ಟೆಗೆ ತೆರಳಲು ನೋಂದಾಯಿಸಿದ ಅಭ್ಯರ್ಥಿಗಳಿಗೆ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು. ಯಾರೊಬ್ಬರೂ ಮತದಾನದಿಂದ ಹಿಂದುಳಿಯಬಾರದು. ಹಲವು ವಿಷಯ ಸಾಧನೆಗಳಲ್ಲಿ ಮೊದಲ ಸ್ಥಾನ ಹೊಂದಿರುವ ಶಿವಮೊಗ್ಗ ಜಿಲ್ಲೆ ಮತದಾನದಲ್ಲಿ ಮೊದಲ ಪಂಕ್ತಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದರು.

ಚುನಾವಣಾ ಅಕ್ರಮ ತಡೆಯಲು ಆಯೋಗ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಈ ವಸ್ತುಪ್ರದರ್ಶನ ಮಾಹಿತಿ ನೀಡಲಿದೆ. ಸಾರ್ವಜನಿಕವಾಗಿ ನಡೆಯುವ ಚುನಾವಣಾ ಅಕ್ರಮಗಳನ್ನು ಚಿತ್ರಿಸಿ ಸಿ-ವಿಜಲ್ ಮೂಲಕ ದೂರು ದಾಖಲಿಸಿದಲ್ಲಿ ತಕ್ಷಣ ಕ್ರಮಕ್ಕೆ ಜಿಲ್ಲಾಡಳಿತ ಸೂಚನೆ ನೀಡಿ ಕ್ರಮ ಕೈಗೊಳ್ಳಲಿದೆ. ಮಾಹಿತಿ ನೀಡಿದ ವ್ಯಕ್ತಿಗಳ ವಿವರಗಳನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಹೇಳಿದರು.

ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಾಫಿ ಸಾದುದ್ದೀನ್, ಕೆಎಸ್​ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್, ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಕಾರ್ವಿುಕರಿಗೆ ವೇತನ ಸಹಿತ ರಜೆ:ಮತದಾನದ ದಿನ (ಏ.23)ರಂದು ಜಿಲ್ಲೆಯಾದ್ಯಂತ ಎಲ್ಲ ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ವಿುಕರಿಗೆ ಜಿಲ್ಲಾ ಕಾರ್ವಿುಕ ಅಧಿಕಾರಿ ಎಂ.ಪಿ.ವಿಶ್ವನಾಥ್ ವೇತನ ಸಹಿತ ರಜೆ ಘೊಷಿಸಿದ್ದಾರೆ. ಪ್ರಜಾಪ್ರತಿನಿಧಿ ಕಾಯ್ದೆ, ಕೈಗಾರಿಕಾ ಸಂಸ್ಥೆಗಳ ರಾಷ್ಟ್ರೀಯ ಮತ್ತು ಹಬ್ಬಗಳ ರಜಾ ದಿನ ಕಾಯ್ದೆಯನ್ವಯ ಮತ ಚಲಾಯಿಸಲು ಅವಕಾಶ ನೀಡುವಂತೆ ಸಂಸ್ಥೆ, ಘಟಕಗಳ ಮಾಲೀಕರು, ಆಡಳಿತ ಮಂಡಳಿಯವರಿಗೆ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *