ಪ್ರಚಾರದಲ್ಲಿ ಬಿಜೆಪಿ ಮುಂದು

ಸಿದ್ದಾಪುರ: ಪಟ್ಟಣ ಪಂಚಾಯಿತಿ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿನ ಜೆಡಿಎಸ್- ಕಾಂಗ್ರೆಸ್ ಮೈತ್ರಿಯಂತೆ ಇಲ್ಲಿಯೂ ಆಂತರಿಕ ವೈಮನಸ್ಸು ಕಂಡುಬರುತ್ತಿದೆ. ಹಲವು ಪಕ್ಷೇತರ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಬಿಜೆಪಿ 14, ಕಾಂಗ್ರೆಸ್ 11, ಜೆಡಿಎಸ್ 3 ಹಾಗೂ ಪಕ್ಷೇತರ 17 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ.
ಈಗಾಗಲೇ ಲೋಕಸಭೆ ಚುನಾವಣೆ ಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಈ ವಿಜಯ ಯಾತ್ರೆಯನ್ನು ಪಪಂ ಚುನಾವಣೆಯಲ್ಲಿಯೂ ಮುಂದುವರಿಸಲು ಅಭ್ಯರ್ಥಿಗಳು, ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿದ್ದಾರೆ.

ಒಂಬತ್ತನೇ ವಾರ್ಡ್​ನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ನಿಲ್ಲಿಸಿಲ್ಲ. ಹೀಗಾಗಿ, ಪಕ್ಷೇತರ ಅಭ್ಯರ್ಥಿ ಫಾತೀಮಾ ರಫೀಕ್​ಸಾಬ್ ಅವರಿಗೆ ಬಿಜೆಪಿ ಕಾರ್ಯಕರ್ತರು ಬೆಂಬಲ ನೀಡಿ ಪ್ರಚಾರ ನಡೆಸುತ್ತಿದ್ದಾರೆ. 10ನೇ ವಾರ್ಡ್​ನಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದೇ ಇರುವುದರಿಂದ ರಾಜಾರಾಮ ಪೈ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರ ಸ್ಪರ್ಧೆಯು ಬಿಜೆಪಿ ಅಭ್ಯರ್ಥಿ ಗುರುರಾಜ ಶಾನಭಾಗ ಹಾಗೂ ಕಾಂಗ್ರೆಸ್​ನ ರವಿ ಮೆವಣಿಗಿ ಅವರ ಗೆಲುವಿಗೆ ಅಡ್ಡಗಾಲಾಗಿದೆ ಎಂದು ಹೇಳಲಾಗುತ್ತಿದೆ. ವಾರ್ಡ್ ನಂ. 13ರಲ್ಲಿ ಬಿಜೆಪಿ ಅಭ್ಯರ್ಥಿ ಮಾರುತಿ ಟಿ. ನಾಯ್ಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಹನುಮಂತ ನಾಯ್ಕ ಅವರಿಗೆ ಪಕ್ಷೇತರ ಅಭ್ಯರ್ಥಿ ಜಗದೀಶ ಹೊಸೂರ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ. ಐದನೇ ವಾರ್ಡ್​ನಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಿದ್ದರೂ ಪ್ರಬಲ ಅಭ್ಯರ್ಥಿಯನ್ನು ಯಾಕೆ ಕಣಕ್ಕಿಳಿಸಿಲ್ಲ ಎಂದು ಕಾಂಗ್ರೆಸ್​ನವರೇ ಆಡಿಕೊಳ್ಳುತ್ತಿದ್ದಾರೆ. ಇಲ್ಲಿ ಬಿಜೆಪಿಯಿಂದ ವಿಜೇಂದ್ರ ಗೌಡರ್, ಕಾಂಗ್ರೆಸ್​ನಿಂದ ಲೀನಾ ಫರ್ನಾಂಡೀಸ್ ಕಣದಲ್ಲಿದ್ದು, ಅವರಿಗೆ ಪ್ರಬಲ ಸ್ಪರ್ಧೆ ನೀಡುವುದಕ್ಕೆ ಸಿ.ಎಸ್. ಗೌಡರ್ ಮುಂದಾಗಿದ್ದಾರೆ.

ಮೂರನೇ ವಾರ್ಡ್​ನಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಕಣದಲ್ಲಿದ್ದರೂ ಜೆಡಿಎಸ್​ನ ಬಂಡಾಯ ಅಭ್ಯರ್ಥಿ ಕಣಕ್ಕಿಳಿದಿರುವುದರಿಂದ ಮೈತ್ರಿಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ. ಪಪಂ ಮಾಜಿ ಸದಸ್ಯ ವಿ.ಎಂ. ಭಟ್ಟ, ನಾಗಪತಿ ಭಟ್ಟ ವಡ್ಡಿನಗದ್ದೆ, ಮಾರುತಿ ಬಾಲಿಕೊಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿದ್ದು, ಜೆಡಿಎಸ್​ನಿಂದ ಸತೀಶ ಹೆಗಡೆ ಹಾಗೂ ಬಿಜೆಪಿಯಿಂದ ವಿನಯ ಹೊನ್ನೆಗುಂಡಿ ಕಣದಲ್ಲಿದ್ದಾರೆ.

ಇನ್ನುಳಿದ ವಾರ್ಡ್​ನಲ್ಲಿ ಬಿಜೆಪಿಗೆ ಮೈತ್ರಿ ಪಕ್ಷಗಳು ಸ್ಪರ್ಧೆ ನೀಡಲು ಮುಂದಾದಂತೆ ಪಕ್ಷೇತರ ಅಭ್ಯರ್ಥಿಗಳು ರಣತಂತ್ರದಲ್ಲಿ ತೊಡಗಿದ್ದು, ಗೆಲುವಿನ ನಾಗಾಲೋಟದಲ್ಲಿ ಇರುವವರಿಗೆ ಕಡಿವಾಣ ಹಾಕುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂಬಂತಾಗಿದೆ. ಈ ಹಿಂದೆ ಪಪಂಗೆ ಬಿಜೆಪಿ 6, ಕಾಂಗ್ರೆಸ್ 6 ಹಾಗೂ ಪಕ್ಷೇತರ ಇಬ್ಬರು ಸದಸ್ಯರಿದ್ದರು. ಮೊದಲ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಎರಡನೇ ಅವಧಿಯಲ್ಲಿ ಬಿಜೆಪಿ ಆಡಳಿತ ನಡೆಸಿದೆ. ಆದರೆ, ಅಭಿವೃದ್ಧಿ ಮಾತ್ರ ಅಷ್ಟಕಷ್ಟೆ ಎನ್ನುವಂತಾಗಿದೆ.

Leave a Reply

Your email address will not be published. Required fields are marked *