ಪ್ರಚಾರಕ್ಕೆ ಬಿಜೆಪಿ ನಾಯಕರು ಸಜ್ಜು

ಬಿಜೆಪಿ ಕಚೇರಿಯಲ್ಲಿ ಸುದೀರ್ಘ ಸಭೆ

ಬುಧವಾರದಿಂದ ಮುಖಂಡರ ಪ್ರವಾಸ

ಬೆಂಗಳೂರು: ಲೋಕಸಭೆ ಚುನಾವಣೆಗೆ ಮೊದಲ ಹಂತದ ನಾಮಪತ್ರ ಸಲ್ಲಿಕೆ ಮಂಗಳವಾರ ಮುಕ್ತಾಯವಾಗುವ ಕಾರಣ ಬಿಜೆಪಿ ನಾಯಕರು ಚುನಾವಣಾ ಪ್ರಚಾರ ಮತ್ತು ಪ್ರವಾಸದ ಕುರಿತು ಚಿಂತನೆ ನಡೆಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಚುನಾವಣಾ ಪ್ರಭಾರಿ ಪಿ. ಮುರಳೀಧರ ರಾವ್, ಚುನಾವಣಾ ಸಮಿತಿ ಸಂಚಾಲಕ ಆರ್. ಅಶೋಕ್ ಸೇರಿ ಅನೇಕ ನಾಯಕರು ಭಾನುವಾರ ಸುದೀರ್ಘ ಸಭೆ ನಡೆಸಿದರು.

ಸದ್ಯ ಬೆಂಗಳೂರಿನ ಎರಡು ಕ್ಷೇತ್ರ ಹೊರತುಪಡಿಸಿ ಮೊದಲ ಹಂತದ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. 11ರಲ್ಲಿ ಅಭ್ಯರ್ಥಿ ಕಣಕ್ಕಿಳಿದಿದ್ದರೆ ಮಂಡ್ಯದಲ್ಲಿ ಸುಮಲತಾ ಅವರನ್ನು ಬೆಂಬಲಿಸಲಾಗುತ್ತದೆ. 11 ಕ್ಷೇತ್ರಗಳಲ್ಲಿ ಯಾವ ಪರಿಸ್ಥಿತಿಯಿದೆ, ಯಾವ ನಾಯಕರು ಪ್ರಚಾರಕ್ಕೆ ತೆರಳಿದರೆ ಹೆಚ್ಚು ಅನುಕೂಲ ಎಂಬ ಬಗ್ಗೆ ಚರ್ಚೆ ನಡೆದಿದೆ. ಬುಧವಾರದಿಂದಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರವಾಸ ಆರಂಭಿಸಲಿದ್ದಾರೆ. ಕೇಂದ್ರದ ವರಿಷ್ಠರೊಂದಿಗೆ ರ್ಚಚಿಸಿ ಪ್ರಧಾನಿ ಮೋದಿ ಸೇರಿ ಇನ್ನಿತರೆ ರಾಷ್ಟ್ರೀಯ ನಾಯಕರ ಪ್ರವಾಸಕ್ಕೆ ಅನುಗುಣವಾಗಿ ಸಣ್ಣಪುಟ್ಟ ಬದಲಾವಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಕುರಿತು ಚರ್ಚೆ: ಸಭೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಟಿಕೆಟ್ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ರಾಜ್ಯದಿಂದ ಒಂದೇ ಹೆಸರನ್ನು ಕಳಿಸಲಾಗಿತ್ತು. ತೇಜಸ್ವಿನಿ ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದ್ದು, ಇದೀಗ ನಡೆಯುತ್ತಿರುವ ಪ್ರಚಾರ ಕಾರ್ಯ ಮುಂದುವರಿಯಲಿ ಎಂದು ಮುಖಂಡರಿಗೆ ಮುರಳೀಧರ ರಾವ್ ತಿಳಿಸಿದ್ದಾರೆ ಎನ್ನಲಾಗಿದೆ.

ಪ್ರಚಾರ ನಿಲ್ಲಿಸದ ತೇಜಸ್ವಿನಿ ಅನಂತಕುಮಾರ್

ತಮ್ಮ ಕ್ಷೇತ್ರದ ಟಿಕೆಟ್ ನೀಡಿಕೆ ಕುರಿತು ಸುದ್ದಿಗಳು ಹರಿದಾಡುತ್ತಿದ್ದರೂ ತೇಜಸ್ವಿನಿ ಅನಂತಕುಮಾರ್ ಮಾತ್ರ ಎಂದಿನಂತೆ ಪ್ರಚಾರ, ಪ್ರಮುಖರ ಭೇಟಿ ಮತ್ತು ಸಭೆಗಳಲ್ಲಿ ನಿರತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸ್ಪರ್ಧಿಸಿದರೆ ಕ್ಷೇತ್ರದಲ್ಲಿ ನಾವೇ ಪ್ರಚಾರ ಮಾಡಬೇಕು. ಮೋದಿ ಬರದಿದ್ದರೆ ತೇಜಸ್ವಿನಿ ಅವರಿಗೇ ಟಿಕೆಟ್ ದೊರಕುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯವನ್ನು ಸ್ಥಗಿತಗೊಳಿಸಿಲ್ಲ ಎಂದು ನಾಯಕರೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.