ಪ್ರಚಾರಕ್ಕಾಗಿ ಅರಸು ಹೆಸರು ದುರ್ಬಳಕೆ

ಮೈಸೂರು: ಯಾವುದೇ ಸರ್ಕಾರಗಳು ನಾಡಿನ ಧೀಮಂತ ನಾಯಕರ ಹಾಗೂ ಮಹಾನ್ ಪುರುಷರ ಹೆಸರನ್ನು ರಾಜಕೀಯ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 104ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದಿನ ಕೆಲ ಸರ್ಕಾರಗಳು ತಮ್ಮ ಪ್ರಚಾರಕ್ಕಾಗಿ ಡಿ.ದೇವರಾಜ ಅರಸು ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿವೆಯೇ ಹೊರತು, ಅವರ ಹೆಸರಿನಲ್ಲಿ ಜಾರಿಗೆ ತಂದಿರುವ ಯಾವುದೇ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲಿಲ್ಲ. ಅರಸು ಅವರ ಹುಟ್ಟೂರು ಕಲ್ಲಹಳ್ಳಿಯನ್ನು ಆದರ್ಶ ಗ್ರಾಮವಾಗಿ ಅಭಿವೃದ್ಧಿಪಡಿಸಲು 2004ರಲ್ಲಿ ಕಾಂಗ್ರೆಸ್ ಯೋಜನೆ ರೂಪಿಸಿತ್ತು. ಆದರೆ, ನಂತರ ಅಧಿಕಾರ ನಡೆಸಿದ ಸರ್ಕಾರಗಳು ಆ ಯೋಜನೆಯನ್ನು ಅರ್ಧಕ್ಕೆ ಕೈಬಿಟ್ಟವು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕವೇ ಕಲ್ಲಹಳ್ಳಿ ಗ್ರಾಮವನ್ನು ಅಭಿವೃದ್ಧಿಪಡಿಸಲಾಯಿತು ಎಂದು ತಿಳಿಸಿದರು.

ನಾವೇ ಪ್ರತಿಮೆ ನಿರ್ಮಿಸುತ್ತೇವೆ!:
ನಗರದ ಡಿ.ದೇವರಾಜ ಅರಸು ರಸ್ತೆಯಲ್ಲಿ ಅರಸು ಅವರ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಅನೇಕ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದವು. ಆದರೆ ಟ್ರಾಫಿಕ್ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಇದುವರೆಗೆ ಈ ಕೋರಿಕೆ ಈಡೇರಲಿಲ್ಲ. ಸರ್ಕಾರದ ನೆರವಿಲ್ಲದೆ ರೈಲು ನಿಲ್ದಾಣದ ಬಳಿಯ ಕಾಂಗ್ರೆಸ್ ಭವನದ ಮುಂಭಾಗ ನಾವೇ ಅರಸು ಪ್ರತಿಮೆ ನಿರ್ಮಿಸುತ್ತೇವೆ ಎಂದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಧ್ವನಿ ಇಲ್ಲದ ಸಮುದಾಯಗಳಿಗೆ ದನಿ ನೀಡಿದ ನಾಯಕ ಅರಸು. ಇಂತಹ ನಾಯಕರನ್ನು ಸದಾ ಕಾಲ ನೆನೆಯಬೇಕು. ದೀನ ದಲಿತರ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದರು. ಉಳುವವನೇ ಭೂಮಿಯ ಒಡೆಯ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದರು. ಎಲ್ಲ ವರ್ಗದವರಿಗೂ ರಾಜಕೀಯದಲ್ಲಿ ಸ್ಥಾನಮಾನ ನೀಡಿದರು ಎಂದು ತಿಳಿಸಿದರು.

ಇಂತಹ ನಾಯಕ ಪ್ರತಿನಿಧಿಸಿದ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ನಾನು 4 ಬಾರಿ ಸ್ಪರ್ಧಿಸಿರುವುದಕ್ಕೆ ಹೆಮ್ಮೆಯಾಗಿದೆ. ಈ ಕ್ಷೇತ್ರದಿಂದ ಎರಡು ಬಾರಿ ಗೆದ್ದು, ಎರಡು ಬಾರಿ ಸೋತಿದ್ದೇನೆ. ಒಮ್ಮೆ ಸಹಕಾರ ಮಂತ್ರಿಯಾಗಿದ್ದೆ ಎಂದು ಸ್ಮರಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ದೇವರಾಜ ಅರಸು ಉತ್ತಮ ರಾಜಕಾರಣಿಯಾಗಿದ್ದರು. ಇಂದಿನ ರಾಜಕಾರಣಿಗಳು ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಾಹಿತಿ ಡಾ.ಮಳಲಿ ವಸಂತಕುಮಾರ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪ ಮೇಯರ್ ಶಫಿ ಅಹಮ್ಮದ್, ಡಾ.ಎಂ.ಜಿ.ಆರ್.ಅರಸ್ ಇದ್ದರು.

Leave a Reply

Your email address will not be published. Required fields are marked *