ಪ್ರಚಲಿತ ಸಮಸ್ಯೆ ಪರಿಹರಿಸುವ ಅಂಕಣ ಬರಹ

ಹಾವೇರಿ: ಸಮಕಾಲೀನ ಸಮಸ್ಯೆಗಳನ್ನು ಅರ್ಥೈಸಿ ಅವುಗಳಿಗೊಂದು ತಕ್ಷಣದ ಪ್ರತಿಕ್ರಿಯೆ ನೀಡಿ ಚರ್ಚೆಗೊಡ್ಡುವ ಶಕ್ತಿ ಅಂಕಣ ಬರಹಗಳಿಗಿದೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ನಗರದ ಹೊಸಮಠದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಜಿಲ್ಲೆಯ ಯುವ ಬರಹಗಾರರು ಬರೆದ ಆರಂಕಣಕಾರರು ಮತ್ತು ಕವಯತ್ರಿ ಗಾಯತ್ರಿ ರವಿಯವರ ಕುರುಡನಿಗೆ ಕನ್ನಡಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಹಾವೇರಿ ಯುವ ಬರಹಗಾರರ ಸಂಪಾದಿತ ಆರಂಕಣಕಾರರು ಕೃತಿಯಲ್ಲಿ ವೈಚಾರಿಕತೆ ಮತ್ತು ಮೌಢ್ಯ ವಿರೋಧಿ ಧೋರಣೆಗಳಿರುವುದು ಸ್ವಾಗತಾರ್ಹ. ಇದೊಂದು ಸಾಮಾಜಿಕ ಜಾಗೃತಿಯ ಕೆಲಸವಾಗಿದೆ. ತಮ್ಮ ಜೀವನದ ಕಂಡುಂಡ ಸಹಜ ಅನುಭವಗಳನ್ನು ಕುರುಡನಿಗೆ ಕನ್ನಡಿ ಕಾವ್ಯ ಸಂಕಲನದಲ್ಲಿ ಸೂಕ್ಷ್ಮವಾಗಿ ಗಾಯತ್ರಿ ರವಿಯವರು ಚಿತ್ರಿಸಿದ್ದಾರೆ. ಇದು ಹೊಸ ಕವಿಗಳಿಗೆ ಕಾವ್ಯ ಪ್ರೀತಿ ಬೆಳೆಯಲು ಕಾರಣವಾಗಿದೆ ಎಂದರು.

ಕವಿಪ್ರ ನೌಕರರ ಸಂಘದ ಅಧ್ಯಕ್ಷ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ಹೊಸಕಾಲದಲ್ಲಿ ಪುಸ್ತಕದ ಸ್ವರೂಪ ಮತ್ತು ಅಸ್ತಿತ್ವ ಬೇರೆಯಾಗಿದೆ. ಕ್ಷಣಾರ್ಧದಲ್ಲಿ ನೂರಾರು ಪುಟಗಳ ಪುಸ್ತಕಗಳನ್ನು ಅಂತರ್ಜಾಲದಲ್ಲಿ ತಡಕಾಡುವ ಇಂದಿನ ದಿನಗಳಲ್ಲಿ ಪುಸ್ತಕಗಳು ಉಳಿಯಬೇಕು. ಪುಸ್ತಕದ ಓದು ಮಾತ್ರ ಸುಖ ಕೊಡಬಲ್ಲವು. ಪುಸ್ತಕ ಸಂಸ್ಕೃತಿ ನಾಶವಾಗಬಾರದು ಎಂದರು.

ಲೇಖಕಿ ರೇಖಾ ಬೈರಕ್ಕನವರ, ರಂಜಾನ ಕಿಲ್ಲೇದಾರ ಪುಸ್ತಕ ಪರಿಚಯಿಸಿದರು. ಡಾ. ಜೆ.ಜಿ. ದೇವಧರ, ಮಾಧುರಿ ದೇವಧರ, ನಾಗೇಂದ್ರ ಕಟಕೋಳ, ಎನ್.ಕೆ. ಮರೋಳ, ಕರಿಯಪ್ಪ ಹಂಚಿನಮನಿ, ವೈ.ಬಿ. ಆಲದಕಟ್ಟಿ, ಗಂಗಾಧರ ನಂದಿ, ಮಾರುತಿ ಶಿಡ್ಲಾಪುರ, ದಾಕ್ಷಾಯಿಣಿ ಗಾಣಗೇರ, ಲಲಿತಕ್ಕ ಹೊರಡಿ, ರುದ್ರಪ್ಪ ಜಾಬೀನ, ಸಿ.ಎ. ಕೂಡಲಮಠ, ಶಶಿಕಲಾ ಅಕ್ಕಿ ಇತರರಿದ್ದರು.

ಬರಹಗಾರರಾಗಬೇಕು, ಸಾಧ್ಯವಾಗದಿದ್ದರೆ ಬರಹಗಾರರಿಗೆ ಪ್ರೇರಣೆ ನೀಡಬೇಕು. ಈ ಎರಡೂ ಕೆಲಸಗಳು ಆರಂಕಣಕಾರರು ಮತ್ತು ಕುರುಡನಿಗೆ ಕನ್ನಡಿ ಪುಸ್ತಕಗಳಲ್ಲಿ ಆಗಿದೆ. ಹೊಸ ಬರಹಗಾರರಿಗೆ ನೆಲೆ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
| ಸದಾಶಿವ ಸ್ವಾಮೀಜಿ, ಹುಕ್ಕೇರಿಮಠ

Leave a Reply

Your email address will not be published. Required fields are marked *