ಪ್ರಕೃತಿ ಮಡಿಲಲ್ಲಿ ಮಕ್ಕಳ ವ್ಯಾಸಂಗ

ಮುಂಡರಗಿ: ಸುತ್ತಲೂ ಗಿಡ-ಮರಗಳು, ಸೊಪ್ಪು, ತರಕಾರಿಗಳಿಂದ ಗಮನ ಸೆಳೆಯುವ ತೋಟ, ಮರದ ನೆರಳಲ್ಲಿ ಮಕ್ಕಳಿಗೆ ಆಟ-ಪಾಠ.

ಇದು ತಾಲೂಕಿನ ಡಂಬಳ ಗ್ರಾಮದ ಸರ್ಕಾರಿ ಅನುದಾನಿತ ಜಗದ್ಗುರು ತೋಂಟದಾರ್ಯ ಬಾಲಕ ಮತ್ತು ಬಾಲಕಿಯರ ಪ್ರೌಢಶಾಲೆಯ ಚಿತ್ರಣ.

ಡಂಬಳದ ವೀರಣ್ಣ ಪಟ್ಟಣಶೆಟ್ಟರ ಅಧ್ಯಕ್ಷತೆಯಲ್ಲಿ 1966ರಲ್ಲಿ ಧರ್ಮಪೂರ ಲಿಬರಲ್ ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ಬಾಲಕರ ಪ್ರೌಢಶಾಲೆ ಪ್ರಾರಂಭವಾಯಿತು. 1969ರಲ್ಲಿ ಈ ಶಾಲೆಯು ಸರ್ಕಾರಿ ಅನುದಾನಕ್ಕೆ ಒಳಪಟ್ಟಿತು. ಈ ಪ್ರೌಢಶಾಲೆಯನ್ನು 1981ರಲ್ಲಿ ತೋಂಟದಾರ್ಯ ಮಠಕ್ಕೆ ಬಿಟ್ಟುಕೊಡಲಾಯಿತು. ತೋಂಟದಾರ್ಯ ಮಠದ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು 1991ರಲ್ಲಿ ಬಾಲಕಿಯರ ಪ್ರೌಢಶಾಲೆ ಪ್ರಾರಂಭಿಸಿದರು. 2012ರಲ್ಲಿ ಬಾಲಕಿಯರ ಪ್ರೌಢಶಾಲೆಯು ಸರ್ಕಾರಿ ಅನುದಾನಕ್ಕೆ ಒಳಪಟ್ಟಿತು.

ಬಾಲಕರ ಪ್ರೌಢಶಾಲೆಯಲ್ಲಿ 245 ವಿದ್ಯಾರ್ಥಿಗಳು, ಬಾಲಕಿಯರ ಪ್ರೌಢಶಾಲೆಯಲ್ಲಿ 156 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಈ ಶಾಲೆ ಶೇ. 80ರಷ್ಟು ಫಲಿತಾಂಶ ಪಡೆಯುತ್ತಿದೆ.

ಪರಿಸರ ಕಾಳಜಿ…
ಸುಮಾರು 10 ಎಕರೆ ಪ್ರದೇಶದಲ್ಲಿರುವ ಈ ಶಾಲೆಯ ಆವರಣ ಸದಾ ಹಸಿರಿನಿಂದ ಕಂಗೊಳಿಸುತ್ತದೆ. 40 ಬೆಟ್ಟದ ನೆಲ್ಲಿಕಾಯಿ, 680 ಬೇವು, 150 ಚಿಕ್ಕು, 26 ತೆಂಗು, 16 ನೇರಳೆ, 4 ಬಿಲ್ವ ಪತ್ರೆ, 4 ಅರಳೆಮರ, 12 ಹುಣಸಿಮರ, 4 ಆಲದಮರ, 24 ಮಾವು, 24 ಹತ್ತಿ, ಹೀಗೆ ವಿವಿಧ ಗಿಡ-ಮರಗಳನ್ನು ಬೆಳೆಸುವ ಮೂಲಕ ಪರಿಸರ ಕಾಳಜಿ ಹೊಂದಿದ್ದಾರೆ. ಪರಿಸರ ಕಾಳಜಿ ಹೊಂದಿದ್ದ ಲಿಂ. ತೋಂಟದ ಶ್ರೀಗಳು ಸ್ವತಃ 40 ಬೆಟ್ಟದ ನೆಲ್ಲಿಕಾಯಿ ಗಿಡಗಳನ್ನು ತಂದು ನೆಡುವುದರ ಮೂಲಕ ಪರಿಸರ ಬಗ್ಗೆ ಕಾಳಜಿ ವಹಿಸುವಂತೆ ಆಶೀರ್ವದಿಸಿದ್ದರು ಎಂದು ಸ್ಮರಿಸುತ್ತಾರೆ ಶಾಲಾ ಶಿಕ್ಷಕರು. ಒಬ್ಬ ವಿದ್ಯಾರ್ಥಿಗೆ ಎರಡೆರಡು ಮರಗಳ ಜವಾಬ್ದಾರಿ ನೀಡಲಾಗುತ್ತದೆ. ಆ ಮರಗಳ ಪಾಲನೆ, ಫೋಷಣೆ ಆ ಮಕ್ಕಳೇ ಮಾಡುತ್ತಾರೆ. ಸದ್ಯ ಚಿಕ್ಕು ಗಿಡಗಳು ಫಲ ನೀಡಲು ಪ್ರಾರಂಭಿಸಿವೆ.

ವಿವಿಧ ತರಕಾರಿ ಸೊಪ್ಪು…
ಒಂದೆಡೆ ಮಡಿಗಳನ್ನು ಮಾಡಿ ಪಾಲಕ್, ಕರಿಬೇವು, ಮೆಂತೆ, ನುಗ್ಗೆ, ಮತ್ತಿತರ ತರಕಾರಿ ಸೊಪ್ಪು ಬೆಳೆಯಲಾಗಿದೆ. ಡಂಬಳ ವಿಕ್ಟೋರಿಯಾ ಕೆರೆ ನೀರಿನಿಂದ ತರಕಾರಿ ಬೆಳೆಯಲಾಗುತ್ತದೆ. ಶಾಲೆಯಲ್ಲಿ ಪ್ರತ್ಯೇಕ ಬೋರ್​ವೆಲ್ ವ್ಯವಸ್ಥೆ ಇದ್ದು, ಗಿಡಮರಗಳಿಗೆ ನೀರುಣಿಸಲಾಗುತ್ತದೆ.

ಶಾಲೆಯಲ್ಲಿ ವಿವಿಧ ವಿಷಯಗಳ ಬಗ್ಗೆ ವಿಶೇಷ ತರಗತಿ ನೀಡುತ್ತಾರೆ. ಮಧ್ಯಾಹ್ನ ಸಮಯದಲ್ಲಿ ಗಿಡ-ಮರಗಳ ನೆರಳಿನಲ್ಲಿ ಕುಳಿತು ಅಭ್ಯಾಸ ಮಾಡಲು ಖುಷಿಯಾಗುತ್ತದೆ. ಶಿಕ್ಷಣದ ಜೊತೆಗೆ ಪರಿಸರ ಕಾಳಜಿ ಕುರಿತು ಶಿಕ್ಷಕರು ಪಾಠ ಮಾಡುತ್ತಾರೆ. ಎಲ್ಲ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸೇರಿ ಪರಿಸರ, ಕೈತೋಟ ಬೆಳೆಸಲು ಕೈಜೋಡಿಸುತ್ತೇವೆ.
| ಜ್ಯೋತಿ ಮಡಿವಾಳರ, ವಿದ್ಯಾರ್ಥಿನಿ

ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಮಾರ್ಗದರ್ಶನದಿಂದ ಬಾಲಕ ಹಾಗೂ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿದ್ದೇವೆ. ಬಿಸಿಯೂಟಕ್ಕೆ ಶಾಲೆಯಲ್ಲಿ ಬೆಳೆದ ಸೊಪ್ಪನ್ನೇ ಬಳಸಲಾಗುತ್ತದೆ. ಶಿಕ್ಷಣ ಪಡೆಯುವುದರ ಜೊತೆಗೆ ಗಿಡಮರಗಳ ಸಂರಕ್ಷಣೆಗೆ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ. ಈ ಬಾರಿ ಶೇ.100ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಿದ್ದೇವೆ.
| ಎಸ್.ಬಿ. ಹೂಗಾರ, ಎಸ್.ಎನ್. ಕಲ್ಲಿಗನೂರ, ಮುಖ್ಯ ಶಿಕ್ಷಕರು