ಪೋಲಿಯೋ ಅಭಿಯಾನ ಯಶಸ್ವಿಗೆ ಸೂಚನೆ

ಚಿಕ್ಕಬಳ್ಳಾಪುರ : ಪಲ್ಸ್ ಪೋಲಿಯೋ ಲಸಿಕೆ ಅಭಿಯಾನದಲ್ಲಿ ತಾಲೂಕು ಶೇ.100 ಗುರಿ ಸಾಧಿಸಬೇಕೆಂದು ತಹಸೀಲ್ದಾರ್ ಕೆ.ನರಸಿಂಹಮೂರ್ತಿ ಸೂಚಿಸಿದರು.

ತಾಪಂ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೋಲಿಯೋ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ವಿವಿಧ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ಮೊದಲನೇ ಸುತ್ತಿನ ಅಭಿಯಾನ ಯಶಸ್ವಿಗೊಳಿಸಬೇಕು. ಇದರ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಮಿತ್ರಣ್ಣ ಮಾತನಾಡಿ, ತಾಲೂಕಿನಲ್ಲಿ ಕಳೆದ ವರ್ಷ 24,603 ಮಕ್ಕಳ ಪೈಕಿ 24609 ಮಕ್ಕಳಿಗೆ ಲಸಿಕೆ ಹಾಕಿ, ಶೇ.100.07 ಗುರಿ ಸಾಧಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 23,860 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ 76 ಮತ್ತು ನಗರ ಪ್ರದೇಶದಲ್ಲಿ 34 ಬೂತ್ ಸೇರಿ 110 ಬೂತ್ ಗುರುತಿಸಲಾಗಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲು 4 ಸಂಚಾರಿ ಬೂತ್​ಗಳನ್ನು ಸ್ಥಾಪಿಸಲಾಗುವುದು ಎಂದರು.

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ 0-5 ವಯೋಮಾನದ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಿದ್ದಾರೆ ಎಂದರು. ಪೌರಾಯುಕ್ತ ಉಮಾಕಾಂತ್ ಮತ್ತಿತರರಿದ್ದರು.