ಪೊಲೀಸ್ ಸರ್ಪಗಾವಲಿನಲ್ಲಿ ಒತ್ತುವರಿ ತೆರವು

ವಿಜಯವಾಣಿ ಸುದ್ದಿಜಾಲ ಹಾಸನ
ಬಿ.ಎಂ. ರಸ್ತೆ ಮಾರ್ಜಿನ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಗರಸಭೆ ಅಧಿಕಾರಿಗಳು ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಶುಕ್ರವಾರ ನಡೆಸಿದರು.

ಒತ್ತುವರಿ ತೆರವಿಗೆ ಸ್ಥಳೀಯರಿಂದ ಪ್ರತಿರೋಧ ವ್ಯಕ್ತವಾಯಿತಾದರೂ ಜೆಸಿಬಿಗಳು ಯಾವುದನ್ನೂ ಲೆಕ್ಕಿಸದೆ ಕಾರ್ಯ ನಿರ್ವಹಿಸಿದವು. ಮಧ್ಯಾಹ್ನ 12ರಿಂದ ಸಂಜೆ 6ರ ವರೆಗೆ ಕಾರ್ಯಾಚರಣೆ ನಡೆಯಿತು.
ಬಿಎಂ ರಸ್ತೆಯಲ್ಲಿದ್ದ ಲೀಲಾಕುಮಾರ್ ಅವರ ಕಟ್ಟಡ ತೆರವುಗೊಳಿಸಲು ಹೈಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ನಗರಸಭೆಯು ರಸ್ತೆಯ ಇತರ ಒತ್ತುವರಿ ಕಟ್ಟಡಗಳ ತೆರವಿಗೆ ಮುಂದಾಗಿತ್ತು. ಈ ಸಂಬಂಧ ಮೂರು ತಿಂಗಳ ಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರರಾದ ಪ್ರಜ್ವಲ್ ಹಾಗೂ ಡಾ.ಸೂರಜ್ ಸೇರಿದಂತೆ 41 ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ರಸ್ತೆಯಿಂದ 6 ಮೀಟರ್ ಒಳಗಿರುವ ಕಟ್ಟಡ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ನಗರಸಭೆ ನೋಟಿಸ್ ಜಾರಿಯಾದ ದಿನದಿಂದ ಕಟ್ಟಡ ಮಾಲೀಕರು ತೆರವು ಕಾರ್ಯ ಸ್ಥಗಿತಗೊಳಿಸುವ ಎಲ್ಲ ಪ್ರಯತ್ನ ನಡೆಸಿದ್ದರು. ಕೊನೆಗೆ ಯಾವುದೇ ಪ್ರಯೋಜನವಿಲ್ಲವೆಂದು ಅರಿತು ಸುಮ್ಮನಾಗಿದ್ದರು.

ಸ್ವಯಂ ಪ್ರೇರಿತ ತೆರವು:
ನಗರಸಭೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಜೆಸಿಬಿ ಜತೆಗೆ ಬಂದಿರುವುದನ್ನು ಅರಿತ ಕೆಲ ಅಂಗಡಿ, ಹೋಟೆಲ್, ಜನರಲ್ ಸ್ಟೋರ್, ಲಾಡ್ಜ್ ಮಾಲೀಕರು ಸ್ವಯಂ ಪ್ರೇರಿತರಾಗಿ ತೆರವಿಗೆ ಮುಂದಾದರು. ತಮ್ಮ ಕಟ್ಟಡದ ಮುಂದೆ ಹಾಕಿಕೊಂಡಿದ್ದ ನಾಮಫಲಕ ಹಾಗೂ ಮತ್ತಿತರ ವಸ್ತುಗಳನ್ನು ತೆಗೆದುಕೊಂಡರು.
ಕಟ್ಟಡ ತೆರವು ಕಾರ್ಯಾಚರಣೆ ಕೈಗೊಂಡಿರುವ ನಗರಸಭೆ ಮೊದಲ ಹಂತವಾಗಿ ಕಟ್ಟಡದ ಮೆಟ್ಟಿಲು, ವಿದ್ಯುತ್, ನೀರು ಹಾಗೂ ಒಳಚರಂಡಿ ಸಂಪರ್ಕ ಕಡಿತಗೊಳಿಸುತ್ತಿದೆ. ಕಟ್ಟಡ ಮಾಲೀಕರು ವಿದ್ಯುತ್ ಸಂಪರ್ಕ ಪಡೆಯಬೇಕೆಂದರೆ ನಗರಸಭೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು.

2006ರಲ್ಲಿ ಎಚ್.ಡಿ.ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ರೈಲ್ವೆ ನಿಲ್ದಾಣದಿಂದ ತಣ್ಣೀರುಹಳ್ಳದವರೆಗೆ ರಸ್ತೆ ವಿಸ್ತರಣೆ ಮಾಡಲಾಗಿತ್ತು. ಅಂದು ಸರ್ಕಾರಿ ಭೂಮಿಯೊಂದಿಗೆ ಖಾಸಗಿ ಕಟ್ಟಡ ಮಾಲೀಕರಿಗೆ ಸೇರಿದ ಐದರಿಂದ ಹತ್ತು ಅಡಿಯಷ್ಟು ಜಾಗಕ್ಕೆ ಪರಿಹಾರ ನೀಡಲಾಗಿತ್ತು. ಪರಿಹಾರ ಪಡೆದೂ ಕೆಲವರು ತಮ್ಮ ಕಟ್ಟಡಗಳಿಗೆ ಹಾನಿಯಾಗದಂತೆ ಕಾಪಾಡಿಕೊಂಡಿದ್ದರು. ಈ ಎಲ್ಲ ಕಾರಣದಿಂದ ಬಿಎಂ ರಸ್ತೆ ಕೆಲವೆಡೆ ಅಂಕುಡೊಂಕಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಜನಸಂಖ್ಯೆ ಹೆಚ್ಚಳ, ವಾಹನ ದಟ್ಟಣೆ ಸೇರಿದಂತೆ ಬಿಎಂ ರಸ್ತೆ ಸಂಚಾರ ದುಸ್ತರ ಎಂಬಂತಾಗಿ ದಿನ ನಿತ್ಯ ಸಮಸ್ಯೆಯನ್ನು ಎದುರಿಸಬೇಕಾಗಿತ್ತು. ಹೀಗಾಗಿ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ನಗರಸಭೆ ನಡೆಗೆ ಬಿಜೆಪಿ ಖಂಡನೆ:
ಅಧಿಕ ಪ್ರಮಾಣದಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡಿರುವ ಬಿಗ್ ಬಜಾರ್ ಕಟ್ಟಡವನ್ನು ಮೊದಲು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಣ್ಣ ಸಣ್ಣ ಅಂಗಡಿಗಳ ತೆರವುಗೊಳಿಸಿ ದೊಡ್ಡವರನ್ನು ಕಾಪಾಡಲಾಗುತ್ತಿದೆ. ಕಾನೂನು ಎಲ್ಲರಿಗೂ ಒಂದೇಯಾಗಿರಬೇಕು. ನಗರಸಭೆ ಶ್ರೀಮಂತರ ಪರ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಆಯುಕ್ತ ಬಿ.ಎ.ಪರಮೇಶ್ ಹಾಗೂ ಪೊಲೀಸರು, ಕಾನೂನು ಎಲ್ಲರಿಗೂ ಸಮವಾಗಿದೆ. ಬಿಗ್ ಬಜಾರ್ ಕಟ್ಟಡವನ್ನೂ ತೆರವುಗೊಳಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರತಿಭಟನೆಯಿಂದ ಹಿಂದೆ ಸರಿಯದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ಬಿಗ್ ಬಜಾರ್ ಕಟ್ಟಡದ ಮುಂಭಾಗದ ಪ್ರದೇಶವನ್ನು ತೆರವುಗೊಳಿಸಲಾಯಿತು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ನಗರಸಭೆ ಸದಸ್ಯರಾದ ಪುನೀತ್, ಮೋಹನ್, ಉಮೇಶ್ ಇದ್ದರು.

ಮುಂದುವರಿಯಲಿದೆ ಕಾರ್ಯಾಚರಣೆ
ಬಿಎಂ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ. ನೋಟಿಸ್ ಜಾರಿ ಮಾಡಿ 3 ತಿಂಗಳು ಗತಿಸಿದರೂ ಯಾರೂ ತಾವಾಗಿಯೇ ಕಟ್ಟಡ ತೆರವು ಮಾಡದ ಕಾರಣ ನಾವು ಕಾರ್ಯಾಚರಣೆ ಕೈಗೊಳ್ಳಬೇಕಾಯಿತು. ಉಳಿದ ಕಟ್ಟಡಗಳ ತೆರವು ಬಗ್ಗೆ ಮೇಲಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಬೃಹತ್ ಕಟ್ಟಡ ತೆರವುಗೊಳಿಸಲು ನಗರಸಭೆಯಲ್ಲಿ ಅಷ್ಟೊಂದು ಹಣ ಇರುವುದಿಲ್ಲ. ಕಟ್ಟಡ ಪ್ರವೇಶ ದ್ವಾರ ಪ್ರದೇಶವನ್ನು ಮಾತ್ರ ನಾವು ತೆರವು ಮಾಡಿದ್ದೇವೆ. ಉಳಿದ್ದುದನ್ನು ಮಾಲೀಕರು ಮಾಡಿಕೊಳ್ಳಬೇಕು. ತೆರವು ವೇಳೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ವಿದ್ಯುತ್ ಹಾಗೂ ವಾಟರ್ ಸಂಪರ್ಕ ಕಡಿತಗೊಳಿಸಲಾಗಿದೆ.
-ಬಿ.ಎ.ಪರಮೇಶ್, ನಗರಸಭೆ ಆಯುಕ್ತ

Leave a Reply

Your email address will not be published. Required fields are marked *