ಪೊಲೀಸ್ ಖದರ್​ನಲ್ಲಿ ಶಿವಣ್ಣ-ಕೋಮಲ್ ಮಿಂಚಿಂಗ್

ಭಾನುವಾರ ಆಕ್ಷನ್ ಪ್ರಿಯರಿಗೆ ‘ಸೆಂಚುರಿ ಸ್ಟಾರ್’ ಶಿವರಾಜ್​ಕುಮಾರ್ ಮತ್ತು ಕೋಮಲ್ ಮಾಸ್ ಮನರಂಜನೆಯ ಸ್ಯಾಂಪಲ್ ನೀಡಿದ್ದಾರೆ. ಒಂದು ಕಡೆ ಶಿವಣ್ಣ ನಟನೆಯ ‘ರುಸ್ತುಂ’ ಟ್ರೇಲರ್ ಬಿಡುಗಡೆಯಾದರೆ, ಇನ್ನೊಂದೆಡೆ ಹಾಸ್ಯನಟನಾಗಿಯೇ ಮಿಂಚಿದ್ದ ಕೋಮಲ್ ಕುಮಾರ್ ‘ಕೆಂಪೇಗೌಡ 2’ ಮೂಲಕ ಖಡಕ್ ಲುಕ್​ನಲ್ಲಿ ಮರಳಿದ್ದಾರೆ. ಈ ಎರಡು ಸಿನಿಮಾಗಳಲ್ಲಿ ಇಬ್ಬರು ನಾಯಕರು ಪೊಲೀಸ್ ಅಧಿಕಾರಿಗಳೇ ಎಂಬುದು ವಿಶೇಷ!

ಬೆಂಗಳೂರು: ಶಿವರಾಜ್​ಕುಮಾರ್ ನಟನೆಯ ‘ರುಸ್ತುಂ’ ಸಿನಿಮಾ ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆ. ಸಾಹಸ ನಿರ್ದೇಶಕ ರವಿವರ್ಮ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ಬಾಲಿವುಡ್ ನಟ ವಿವೇಕ್ ಓಬೆರಾಯ್ ‘ರುಸ್ತುಂ’ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಬಹುತೇಕ ಕೊನೇ ಹಂತದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡ, ಶೀಘ್ರದಲ್ಲೇ ಬಿಡುಗಡೆಗೆ ದಿನಾಂಕ ಘೋಷಿಸಲಿದೆ. ಅದಕ್ಕೂ ಮುನ್ನ ಭಾನುವಾರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಂಡು ಹುರಿಮೀಸೆ ಲುಕ್​ನಲ್ಲಿ ಆಕ್ಷನ್ ಅವತಾರದಲ್ಲಿ ಶಿವಣ್ಣ ಮಿಂಚಿದ್ದಾರೆ.

ಮಾಸ್ ಪ್ರಿಯರಿಗೆ ಹೇಳಿ ಮಾಡಿಸಿದಂತಿರುವ ‘ರುಸ್ತುಂ’ನಲ್ಲಿ ಖಡಕ್ ಡೈಲಾಗ್​ಗಳೂ ಇವೆ. ‘ನನಗೆ ಅರೆಸ್ಟ್ ಅಂದ್ರೆ ಅಲರ್ಜಿ, ಎನ್​ಕೌಂಟರ್ ಅಂದ್ರೆ ಎನರ್ಜಿ’, ‘ತುಂಬ ಹಿಂದೆನೇ ರೌಡಿಸಂನ ಕಾಂಟ್ರಾಕ್ಟ್ ತೆಗೆದುಕೊಂಡಿದ್ದೀನಿ’ ಎನ್ನುವ ಡೈಲಾಗ್​ಗಳು ಟ್ರೇಲರ್​ನಲ್ಲಿ ಸದ್ದು ಮಾಡುತ್ತಿವೆ. ಅಷ್ಟೇ ಅಲ್ಲ, ಪೊಲೀಸ್ ಆಫೀಸರ್ ಆಗಿ ಗನ್ ಜತೆಗೆ ಲಾಂಗ್ ಹಿಡಿದು ಹಳೇ ಖದರ್ ತೋರಿಸಿದ್ದಾರೆ ಶಿವಣ್ಣ. ಟ್ರೇಲರ್​ನಲ್ಲಿ ಸಿನಿಮಾದ ಮೇಕಿಂಗ್ ಗಮನಸೆಳೆಯುತ್ತದೆ. ವಿವೇಕ್ ಒಬೆರಾಯ್ ಕೂಡ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಶಿವರಾಜ್​ಕುಮಾರ್​ಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ.

ಇನ್ನು 4 ವರ್ಷಗಳ ಗ್ಯಾಪ್ ಬಳಿಕ ಕೋಮಲ್ ಕುಮಾರ್ ಅವರ ಎಂಟ್ರಿಯೂ ಆಗಿದೆ. ಇಷ್ಟು ವರ್ಷ ನಗಿಸುವ ಮೂಲಕ ಪ್ರೇಕ್ಷಕರಿಗೆ ಮನರಂಜನೆ ಉಣಬಡಿಸುತ್ತಿದ್ದ ಕೋಮಲ್, ಇದೀಗ ಮಾಸ್ ಹೀರೋ ಆಗಿ ‘ಕೆಂಪೇಗೌಡ 2’ ಚಿತ್ರದಲ್ಲಿ ಬೇರೆ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಟ್ರೇಲರ್​ನಲ್ಲಿ ಸಿಕ್ಕಿದೆ. ಖಾಕಿ ತೊಟ್ಟು ಭರ್ಜರಿ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡು, ಇಷ್ಟು ದಿವಸ ಕಾಮಿಡಿ ಮಾಡುತ್ತಿದ್ದ ಕೋಮಲ್ ಇವರೇನಾ ಎಂದು ಪ್ರಶ್ನೆ ಮಾಡುವ ಮಟ್ಟಕ್ಕೆ ಬದಲಾಗಿದ್ದಾರೆ. ತೂಕ ಇಳಿಸಿಕೊಂಡು ಖಡಕ್ ಪೊಲೀಸ್ ಅಧಿಕಾರಿಯ ಪೋಸ್ ನೀಡಿದ್ದಾರೆ. ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಶ್ರೀಶಾಂತ್​ಗೆ ವಿಲನ್ ಅವತಾರವಿದೆ. ‘ಲೂಸ್ ಮಾದ’ ಯೋಗಿ ‘ಕೆಂಪೇಗೌಡ 2’ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ. ಕೋಮಲ್​ಗೆ ರಿಷಿಕಾ ಶರ್ಮಾ ಜೋಡಿಯಾಗಿದ್ದು, ಶಂಕರ್ ಗೌಡ ನಿರ್ದೇಶನ ಮಾಡಿದ್ದಾರೆ. ವಿನೋದ್ ಅವರದ್ದು ನಿರ್ವಣದ ಜವಾಬ್ದಾರಿ.