ಪೊಲೀಸ್ ಕ್ವಾರ್ಟರ್ಸ್​ನಲ್ಲೇ ಕಳ್ಳರ ಕೈಚಳಕ!

ಹುಬ್ಬಳ್ಳಿ: ತಮ್ಮನ್ನು ಹಿಡಿಯುವ ಪೊಲೀಸರ ಮನೆಗೇ ಕಳ್ಳರು ಕನ್ನ ಹಾಕಿದ ಘಟನೆ ನಗರದಲ್ಲಿ ಸೋಮವಾರ ನಸುಕಿನ ಜಾವ ನಡೆದಿದ್ದು, ಘಟನೆಯಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.

ಇಲ್ಲಿನ ಕಾರವಾರ ರಸ್ತೆ ಪುರಾತನ ಮಾರುತಿ ದೇವಸ್ಥಾನದ ಪಕ್ಕದ ಪೊಲೀಸ್ ವಸತಿಗೃಹ (ಕ್ವಾಟರ್ಸ್)ದಲ್ಲಿ ಎರಡು ಮನೆಗಳ ಕೀಲಿ ಮುರಿದು, 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಲಾಗಿದೆ.

ನಗರ ಸಶಸ್ತ್ರ ಪಡೆ (ಸಿಎಆರ್)ಯ ಎಎಸ್​ಐ ಮಹಾಂತೇಶ ಹೊಸಮನಿ ಹಾಗೂ ಕಮರಿಪೇಟ ಪೊಲೀಸ್ ಠಾಣೆ ಹವಾಲ್ದಾರ ಮಲ್ಲಿಕಾರ್ಜುನ ಕುಡವಕ್ಕಲ ಅವರ ಮನೆಯಲ್ಲಿ ಕಳ್ಳತನ ನಡೆದಿವೆ.

ಮಹಾಂತೇಶ ಭಾನುವಾರ ಬೆಳಗ್ಗೆ ಮನೆಗೆ ಕೀಲಿ ಹಾಕಿಕೊಂಡು ಕುಟುಂಬ ಸಮೇತ ರಾಣೆಬೆನ್ನೂರು ಬಳಿಯ ದೇವರಗುಡ್ಡಕ್ಕೆ ತೆರಳಿದ್ದರು. ಮಲ್ಲಿಕಾರ್ಜುನ ಕೀಲಿ ಹಾಕಿಕೊಂಡು ರಾತ್ರಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆ ವೇಳೆ ಮನೆಯ ಕೀಲಿ ಮುರಿದು ಒಳಗೆ ನುಗ್ಗಿದ ಕಳ್ಳರು ಮನೆ ಜಾಲಾಡಿದ್ದಾರೆ. ಅಲ್ಮೇರಾದಲ್ಲಿ ಇದ್ದ ಸಾಮಾನುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕೈಗೆ ಸಿಕ್ಕ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾಗಿದ್ದಾರೆ.

ಡಿಸಿಪಿ ರವೀಂದ್ರ ಗಡಾದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ತೀವ್ರ ಪರಿಶೀಲನೆ ನಡೆಸಿತು. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಕಾರವಾರ ರಸ್ತೆಯ ನೂತನ ಕ್ವಾಟರ್ಸ್​ಗಳನ್ನು ಸೆಪ್ಟಂಬರ್​ನಲ್ಲಿ ಅಂದಿನ ಗೃಹಸಚಿವ ಡಾ.ಜಿ. ಪರಮೇಶ್ವರ ಉದ್ಘಾಟಿಸಿದ್ದರು.

ಕಳ್ಳತನ ಸಂಖ್ಯೆ 1: ಮಹಾಂತೇಶ ಹೊಸಮನಿ (ಬ್ಲಾಕ್ ನಂ 7, ಮನೆ ನಂ. 73) ಅವರು ಫೆ.17ರಂದು ಬೆಳಗ್ಗೆ 6 ಗಂಟೆಗೆ ಮನೆಗೆ ಕೀಲಿ ಹಾಕಿಕೊಂಡು ದೇವರಗುಡ್ಡಕ್ಕೆ ತೆರಳಿ ಬೆಳಗ್ಗೆ 9.30ಕ್ಕೆ ವಾಪಸ್ ಬಂದಿದ್ದರು. ಅಷ್ಟರಲ್ಲಿ ಕಳ್ಳರು ಚಿಲಕದ ಕೊಂಡಿ ಮುರಿದು 113 ಗ್ರಾಂ ತೂಕದ ಚಿನ್ನಾಭರಣ, 540 ಗ್ರಾಂ ಬೆಳ್ಳಿ ವಸ್ತುಗಳು, 64 ಸಾವಿರ ರೂ. ನಗದು ಸೇರಿ ಒಟ್ಟು 3,74,700 ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು.

ಕಳ್ಳತನ ಸಂಖ್ಯೆ 2: ಮಲ್ಲಿಕಾರ್ಜುನ ಕುಡವಕ್ಕಲ (ಬ್ಲಾಕ್ ನಂ5, ಮನೆ ನಂ 69) ಅವರು ಫೆ.17ರಂದು ರಾತ್ರಿ 9.30ಕ್ಕೆ ಮನೆಗೆ ಕೀಲಿ ಹಾಕಿಕೊಂಡು ಕರ್ತವ್ಯಕ್ಕೆ ತೆರಳಿದ್ದರು. ಫೆ. 18ರಂದು ಬೆಳಗ್ಗೆ 6 ಗಂಟೆಗೆ ವಾಪಸ್ ಬಂದಿದ್ದರು. ಅಷ್ಟರಲ್ಲಿ ಚಿಲಕದ ಕೊಂಡಿ ಮುರಿದು 1,40,400 ರೂ. ಮೌಲ್ಯದ 42 ಗ್ರಾಂ ಚಿನ್ನಾಭರಣ, 360 ಗ್ರಾಂ ಬೆಳ್ಳಿ ವಸ್ತುಗಳನ್ನು ಹೊತ್ತೊಯ್ದಿದ್ದಾರೆ.

ಪೊಲೀಸರಲ್ಲಿ ಮೂಡಿದ ಆತಂಕ

ಕಳ್ಳರನ್ನು ಕಂಬಿ ಹಿಂದೆ ನೂಕಬೇಕಾದ ಪೊಲೀಸರ ಮನೆಗಳಲ್ಲೇ ಕಳ್ಳತನವಾಗಿರುವುದು ತಲೆ ತಗ್ಗಿಸುವಂತಾಗಿದೆ. ಅತ್ಯಂತ ಹೆಚ್ಚು ಭದ್ರತೆ ಹೊಂದಿರುವ ಪೊಲೀಸ್ ಕ್ವಾರ್ಟರ್ಸ್​ನಲ್ಲೇ ಹೀಗಾದರೆ ಸಾಮಾನ್ಯರ ಗತಿ ಏನು ? ಪೊಲೀಸ್ ಕ್ವಾರ್ಟರ್ಸ್​ನಲ್ಲಿ ಕಳ್ಳಕಾಕರ ಹೆದರಿಕೆ ಇಲ್ಲದೇ ನೆಮ್ಮದಿಯಾಗಿ ಇರಬಹುದು ಎಂಬ ಭಾವ ಹಲವರಲ್ಲಿ ಇತ್ತು. ಆದರೆ, ಈ ಘಟನೆಯಿಂದ ಪೊಲೀಸರ ಕುಟುಂಬದವರಲ್ಲೂ ಆತಂಕ ಮಾಡಿದೆ.

ಕ್ವಾರ್ಟರ್ಸ್​ಗೆ ಸೆಕ್ಯುರಿಟಿ, ಸಿಸಿಟಿವಿ ಇಲ್ಲ

ಕಾರವಾರ ರಸ್ತೆಯ ನೂತನ ಕ್ವಾಟರ್ಸ್​ಗಳಲ್ಲಿ ಸೆಕ್ಯುರಿಟಿಯೂ ಇಲ್ಲ, ಸಿಸಿಟಿವಿ ಕ್ಯಾಮರಾವನ್ನೂ ಅಳವಡಿಸಿಲ್ಲ. ಇದರಿಂದಾಗಿ ಕಳ್ಳರು ಸಲೀಸಾಗಿ ಕೈಚಳಕ ತೋರಿದ್ದಾರೆ. ನಿತ್ಯ ಕ್ವಾಟರ್ಸ್​ಗೆ ಸೇಲ್ಸ್​ಮ್ಯಾನ್​ಗಳು, ಭಿಕ್ಷುಕರು ಬರುತ್ತಾರೆ. ಕೆಲವರು ನೇರವಾಗಿ ಮನೆಗೆ ಬಂದು ಬಾಗಿಲು ತಟ್ಟುತ್ತಾರೆ. ಕ್ವಾಟರ್ಸ್​ಗೆ ಮೂರು ಕಡೆ ಗೇಟ್ ಇವೆ. ಸೆಕ್ಯುರಿಟಿ ಇಲ್ಲದ ಕಾರಣ ಯಾರು ಬೇಕಾದರೂ ಬರಬಹುದಾಗಿದೆ. ಪ್ಲೈವುಡ್​ನಿಂದ ನಿರ್ವಿುಸಲಾದ ಬಾಗಿಲುಗಳು ಭದ್ರವಾಗಿಲ್ಲ. ಅದಕ್ಕೆ ಅಳವಡಿಸಿರುವ ಅಲ್ಯುಮಿನಿಯಂ ಚಿಲಕ, ಕೊಂಡಿಗಳು ಗಟ್ಟಿಯಾಗಿಲ್ಲ. ಹಾಗಾಗಿ, ಬೆಂಗಳೂರು ಮಾದರಿಯಲ್ಲಿ ಕ್ವಾಟರ್ಸ್​ಗೆ ಸಿಸಿಟಿವಿ ಅಳವಡಿಸಬೇಕು, ಸೆಕ್ಯುರಿಟಿ ನಿಯೋಜಿಸಬೇಕು ಎಂದು ಪೊಲೀಸ್ ಸಿಬ್ಬಂದಿ ಒತ್ತಾಯಿಸಿದ್ದಾರೆ.