ಪೊಲೀಸ್ ಕಸ್ಟಡಿಗೆ ಎಂಇಪಿ ಪಕ್ಷದ ಮುಖ್ಯಸ್ಥೆ

ಶಿವಮೊಗ್ಗ: ಆನ್​ಲೈನ್ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಎಂಇಪಿ (ಮಹಿಳಾ ಎಂಪವರ್​ವೆುಂಟ್ ಪಕ್ಷ) ರಾಷ್ಟ್ರೀಯ ಅಧ್ಯಕ್ಷೆ ನೌಹೀರಾ ಶೇಖ್ ಅವರನ್ನು ನ್ಯಾಯಾಲಯ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ಆನ್​ಲೈನ್​ನಲ್ಲಿ ಹೆಚ್ಚಿನ ಲಾಭ ಕೊಡಿಸುವುದಾಗಿ ನಂಬಿಸಿ ವಿನೋಬನಗರ ಸೇರಿ ನಗರದ ಹಲವೆಡೆ 25 ಲಕ್ಷ ರೂ.ಗಳಿಗೂ ಅಧಿಕ ಹಣ ಸಂಗ್ರಹ ಮಾಡಿ ವಂಚಿಸಿರುವ ಆರೋಪ ಕೇಳಿಬಂದಿದ್ದು, ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಿಇಎನ್ ಪೊಲೀಸರು, ವಿಚಾರಣೆಗೆ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಪೊಲೀಸರ ಮನವಿಯನ್ನು ಪುರಸ್ಕರಿಸಿದ ಶಿವಮೊಗ್ಗದ ಪ್ರಿನ್ಸಿಪಲ್ ಸೀನಿಯರ್ ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ಆಗಸ್ಟ್ 5ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತು.

ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿ ಹಲವೆಡೆ 4 ಕೋಟಿ ರೂ. ಗೂ ಅಧಿಕ ಹಣ ವಂಚನೆ ಮಾಡಿರುವ ಪ್ರಕರಣಗಳು ದಾಖಲಾಗಿದ್ದು, ವಿಧಾನಸಭೆ ಚುನಾವಣೆ ಬಳಿಕ ನೌಹೀರಾ ಶೇಖ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಶಿವಮೊಗ್ಗದಲ್ಲಿ 20ಕ್ಕೂ ಹೆಚ್ಚು ವಂಚನೆ ಪ್ರಕರಣ ನೌಹೀರಾ ವಿರುದ್ಧ ದಾಖಲಾಗಿವೆ.