ಪೊಲೀಸ್ ಇಲಾಖೆಯಿಂದ ಸಾರ್ಥಕ ಸೇವೆ

ಧಾರವಾಡ: ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಸಹೋದರತ್ವದ ಪ್ರತೀಕವಾದ ರಕ್ಷಾ ಬಂಧನದ ಆಶಯ ಈಡೇರಿಸುವ ಸಾರ್ಥಕ ಸೇವೆಯನ್ನು ಪೊಲೀಸ್ ಇಲಾಖೆ ನಿತ್ಯ ಮಾಡುತ್ತದೆ. ಇದನ್ನು ಗುರುತಿಸಿ ಗೌರವಿಸಿದ ಸಹೋದರಿಯರಿಗೆ ಧನ್ಯವಾದಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ. ಹೇಳಿದರು.

ಧಾರವಾಡದ ಕಲ್ಪತರು ಮಹಿಳಾ ಸಂಘದ ಸಹೋದರಿಯರು ಗ್ರಾಮೀಣ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆದಾಗ ತಕ್ಷಣ ಸ್ಪಂದಿಸಿ ಅಗತ್ಯ ನೆರವು ಮತ್ತು ಸಹಾಯ ನೀಡಲಾಗುತ್ತಿದೆ ಎಂದರು.

ಉಪ ಪೊಲೀಸ್ ಅಧೀಕ್ಷಕ ಡಾ. ಬಿ.ಪಿ.ಚಂದ್ರಶೇಖರ ಮಾತನಾಡಿದರು. ಕಲ್ಪತರು ಮಹಿಳಾ ಸಂಘದ ಅಧ್ಯಕ್ಷೆ ಆರತಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಪ್ರಶಾಂತ ನಾಯ್ಕ, ಜಿಲ್ಲಾ ಪೊಲೀಸ್ ಅಪರಾಧ ವಿಭಾಗದ ಸಿಪಿಐ ಎಸ್.ಬಿ. ಮಾಳಗೊಂಡ, ವಾರ್ತಾ ಇಲಾಖೆ ಸಹಾಯಕ ಅಧಿಕಾರಿ ಡಾ. ಎಸ್.ಎಂ.ಹಿರೇಮಠ, ಪೊಲೀಸ್ ಸಬ್ ಇನ್ಸಪೆಕ್ಟರ್​ಗಳಾದ ಆನಂದ ಠಕ್ಕಣ್ಣವರ, ಪಿ.ಜಿ. ಕವಟಗಿ ಮತ್ತು ಮಹಿಳಾ ಪೊಲೀಸ್ ಠಾಣೆಯ ಭಾನು ಕುಲಕರ್ಣಿ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

ನಂತರ ಎಸ್​ಪಿ ಸಂಗೀತಾ.ಜಿ ಮತ್ತು ಕಲ್ಪತರು ಸಂಘದ ಸಹೋದರಿಯರು ಪೊಲೀಸ್ ಸಿಬ್ಬಂದಿಗೆ ರಾಖಿ ಕಟ್ಟಿ, ಸಿಹಿ ವಿತರಿಸಿದರು. ಭಾಗೀರತಿ ಕಲ್ಕಂಬಕರ ನಿರೂಪಿಸಿದರು. ಸುಧಾ ಕಬ್ಬೂರ ವಂದಿಸಿದರು.