ಪೊಲೀಸರ ಸೋಗಿನಲ್ಲಿ ವ್ಯಾಪಾರಿ ಅಪಹರಣ: ಉಂಗುರ ಕಸಿದುಕೊಂಡಿದ್ದ ರೌಡಿ ಸೇರಿ ನಾಲ್ವರ ಬಂಧಿಸಿದ ಪೊಲೀಸರು

ಬೆಂಗಳೂರು: ನಕಲಿ ಮಾತ್ರೆ ಮಾರಾಟ ಮಾಡುತ್ತಿರುವುದಾಗಿ ಮೆಡಿಕಲ್ ಶಾಪ್ ಮಾಲೀಕನಿಗೆ ಬೆದರಿಸಿ ಪೊಲೀಸರ ಸೋಗಿನಲ್ಲಿ ಅಪಹರಿಸಿ ಸುಲಿಗೆ ಮಾಡಿದ್ದ ರೌಡಿ ಸೇರಿ ನಾಲ್ವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

ದೊಡ್ಡಕನ್ನಳ್ಳಿ ಜನತಾ ಕಾಲನಿಯ ರೌಡಿ ಅಜಯ್ಕುಮಾರ್ ಅಲಿಯಾಸ್ ಪಿಂಟು, ಜಕ್ಕಸಂದ್ರದ ಶಿವಾನಂದ, ವೆಂಕಟಾಪುರದ ಶ್ರೀಧರ ಮತ್ತು ಅತ್ತಿಬೆಲೆಯ ರಘುರಾವ್ ಬಂಧಿತರು. ಮತ್ತೊಬ್ಬ ಆರೋಪಿ ವಿನಯ್ ತಲೆಮರೆಸಿಕೊಂಡಿದ್ದಾನೆ. ಬಂಧಿತ ರಿಂದ 12 ಸಾವಿರ ರೂ. ಮತ್ತು ಚಿನ್ನಾಭರಣ ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಸವನಹಳ್ಳಿ ರಸ್ತೆಯಲ್ಲಿ ಸುಬ್ರಹ್ಮಣಿ ಔಷಧ ಅಂಗಡಿ ಇಟ್ಟುಕೊಂಡಿದ್ದಾರೆ. ಭಾನುವಾರ ಸಂಜೆ 5.30ಕ್ಕೆ ಮೆಡಿಕಲ್ ಶಾಪ್​ನಲ್ಲಿ ಸುಬ್ರಹ್ಮಣಿ ಇದ್ದಾಗ ಆರೋಪಿಗಳು ಬಂದು ಮಫ್ತಿ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದರು.‘ನೀನು ನಿಷೇಧಿತ ಕಂಪನಿಯ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದೀಯಾ’ ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಹೇಳಿ ಬಲವಂತವಾಗಿ ಆಟೋದಲ್ಲಿ ಕೂರಿಸಿಕೊಂಡು ಅಗರ ಕೆರೆ ಬಳಿಗೆ ಕರೆದೊಯ್ದಿದ್ದರು. ಅಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ತನ್ನ ಬಳಿ ಹಣವಿಲ್ಲ ಎಂದು ಹೇಳಿದಾಗ ಸುಬ್ರಹ್ಮಣಿಯಿಂದ ಚಿನ್ನದ ಸರ ಮತ್ತು ಉಂಗುರ ಕಿತ್ತುಕೊಂಡು ಹಣ ನೀಡಿದರೆ ಬಿಡುಗಡೆ ಮಾಡುತ್ತೇವೆ ಎಂದು ತಾಕೀತು ಮಾಡಿದ್ದರು.

ಕೊನೆಗೆ ಸ್ನೇಹಿತ ಮುನಿರಾಜು ಬಳಿಯಿಂದ 15 ಸಾವಿರ ರೂ. ತರಿಸಿಕೊಂಡು ಆರೋಪಿಗಳಿಗೆ ಸುಬ್ರಹ್ಮಣಿ ಕೊಟ್ಟಿದ್ದರು. ಇದಾದ ನಂತರ ಅವರನ್ನು ಆರೋಪಿಗಳು ಬಿಟ್ಟು ಕಳುಹಿಸಿದ್ದರು. ಈ ಬಗ್ಗೆ ಬೆಳ್ಳಂದೂರು ಠಾಣೆಗೆ ದೂರು ಸುಬ್ರಹ್ಮಣಿ ದಾಖಲಿಸಿದ್ದರು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಇನ್​ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದ ತಂಡ, ಘಟನಾ ಸ್ಥಳದ ಸುತ್ತಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿತು. ಆಗ ಸುಬ್ರಹ್ಮಣಿಯನ್ನು ಆಟೋದಲ್ಲಿ ಅಪಹರಿಸಿಕೊಂಡು ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಸುಳಿವಿನ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸರು, ರೌಡಿ ಪಿಂಟು ತಂಡವನ್ನು ಬಂಧಿಸಿದ್ದಾರೆ. ಕೆಲಸವಿಲ್ಲದೆ ಅಲೆಯುತ್ತಿದ್ದ ಆರೋಪಿಗಳು, ಹಣ ದೋಚುವ ದುರುದ್ದೇಶದಿಂದಲೇ ವ್ಯಾಪಾರಿಯನ್ನು ಕಿಡ್ನ್ಯಾಪ್ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *