ಚಿತ್ರದುರ್ಗ: ನಗರ, ಹಿರಿಯೂರು ಸೇರಿ ಕೆಲವೆಡೆ ಇತ್ತೀಚೆಗೆ ಪೊಲೀಸರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಆರೋಪಿತರು ಪ್ರಭಾವಿಗಳಾಗಿದ್ದರೂ ಮುಲಾಜು ನೋಡದೆ, ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಸಂಘಟನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಇತ್ತೀಚೆಗೆ ಪೊಲೀಸರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿವೆ. ಸಾರ್ವಜನಿಕರನ್ನು ಕಾಪಾಡಬೇಕಾದ ಪೊಲೀಸರಿಗೆ ರಕ್ಷಣೆ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು.
ಹಲ್ಲೆ ನಡೆದ ಕೂಡಲೇ ಕ್ರಮಕ್ಕೆ ಮುಂದಾಗಬೇಕೆ ಹೊರತು ರಾಜಕೀಯ ಒತ್ತಡಕ್ಕೆ ಇಲಾಖೆ ಮಣಿಯಬಾರದು. ಪೊಲೀಸರಿಗೂ ಹೆಚ್ಚಿನ ಅಧಿಕಾರ, ರಕ್ಷಣೆ ನೀಡಬೇಕಿದೆ ಎಂದು ಕೋರಿದರು.
ಪದಾಧಿಕಾರಿಗಳಾದ ವೀಣಾ ಗೌರಣ್ಣ, ಗೋಪಿನಾಥ್, ರತ್ನಮ್ಮ, ಜಗದೀಶ್, ನಾಗರಾಜ್ ಮುತ್ತು, ಮಧು, ಅಖಿಲೇಶ್, ಶಶಿ, ಮಧುಸೂದನ್, ಅವಿನಾಶ್, ನಾಗೇಶ್ ಇತರರಿದ್ದರು.