ಪೊಲೀಸರಿಗೇ ಪಿಸ್ತೂಲ್ ತೋರಿಸಿದವ ಅಂದರ್ !

ಹುಬ್ಬಳ್ಳಿ: ಸ್ವಾತಂತ್ರ್ಯೊತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಕೈಗೊಂಡಿದ್ದ ರೈಲ್ವೆ ಸುರಕ್ಷಾ ದಳದ (ಆರ್​ಪಿಎಫ್)ಮುಖ್ಯಪೇದೆಯೊಬ್ಬರಿಗೆ ಪುಂಡನೊಬ್ಬ ಪಿಸ್ತೂಲ್ ತೋರಿಸಿ, ಕಲ್ಲು ತೂರಿದ ಘಟನೆ ಇಲ್ಲಿನ ಜನನಿಬಿಡ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮಂಗಳವಾರ ಸಂಜೆ ನಡೆದಿದೆ. ಕೂಡಲೇ ಎಚ್ಚೆತ್ತ ಆರ್​ಪಿಎಫ್ ಸಿಬ್ಬಂದಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಟೂರು ರಸ್ತೆ ಬ್ಯಾಳಿ ಓಣಿ ನಿವಾಸಿ ಷರೀಫ ಅದ್ವಾನಿ ಪಿಸ್ತೂಲ್ ತೋರಿಸಿ ಬಂಧನಕ್ಕೊಳಗಾದ ಆರೋಪಿ. ಮಜರಲಿ ಜಾಲಗಾರ ಎಂಬಾತನನ್ನೂ ಬಂಧಿಸಲಾಗಿದೆ.

ಬೆಂಗಳೂರು ಮೂಲದ ಆರ್​ಪಿಎಫ್ ಮುಖ್ಯಪೇದೆ ರವಿಕುಮಾರ್ ರೈಲು ನಿಲ್ದಾಣದ ವಿಐಪಿ ಲಾಂಜ್ ಬಳಿ ಶಸ್ತ್ರಾಸ್ತ್ರ(ಎಕೆ 47)ದೊಂದಿಗೆ ಭದ್ರತೆ ಕೈಗೊಂಡಿದ್ದರು. ಸಂಜೆ 7ರ ಸುಮಾರಿಗೆ ಷರೀಫ ಅದ್ವಾನಿ ಹಾಗೂ ಮಜರಲಿ ಜಾಲಗಾರ ಸೇರಿ ಹಲವರು ವಿಐಪಿ ಲಾಂಜ್ ಬಳಿ ಬಂದಿದ್ದರು. ಇಲ್ಲಿ ಬರಬೇಡಿ ಇದು ನಿಷೇಧಿತ ಪ್ರದೇಶ ಎಂದು ರವಿಕುಮಾರ್ ಹೇಳಿದಾಗ ವಾಗ್ವಾದಕ್ಕಿಳಿದಿದ್ದರು. ಆ ವೇಳೆ ರೈಲ್ವೆ ಜಿಎಂ ಎ.ಕೆ. ಸಿಂಗ್ ಪರಿಶೀಲನೆಗೆಂದು ಪಕ್ಕದಲ್ಲೇ ಹೊರಟಿದ್ದರು.

ಕೂಡಲೇ ಜಾಗೃತರಾದ ರವಿಕುಮಾರ್ ‘ಇಲ್ಲಿ ಹೈ ಅಲರ್ಟ್ ಇದೆ. ಜಿಎಂ ಬರುತ್ತಿದ್ದಾರೆ. ನನ್ನ ಬಳಿ ವೆಪನ್ ಇದೆ, ಎಲ್ಲ ಆ ಕಡೆ ಹೋಗಿ’ ಎಂದು ಹೇಳಿದ್ದರು. ಇದರಿಂದ ಆಕ್ರೋಶಗೊಂಡ ಷರೀಫ, ‘ನನ್ನ ಬಳಿಯೂ ಪಿಸ್ತೂಲ್ ಇದೆ’ ಎಂದು ತೋರಿಸಿ ಅವಾಚ್ಯವಾಗಿ ನಿಂದಿಸಿದನು. ಕೂಡಲೇ ರವಿಕುಮಾರ್ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದ ಎಚ್ಚೆತ್ತ ಅಕ್ಕಪಕ್ಕದ ಭದ್ರತಾ ಸಿಬ್ಬಂದಿ ಷರೀಫನನ್ನು ವಶಕ್ಕೆ ಪಡೆದು ಗದಗ ರಸ್ತೆಯ ಆರ್​ಪಿಎಫ್ ಠಾಣೆಗೆ ಕರೆತಂದರು.

ನಂತರ ಠಾಣೆ ಬಳಿ ನೂರಾರು ಜನ ಜಮಾಯಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿ ಗದಗ ರಸ್ತೆಯಲ್ಲಿ ಸಂಚಾರ ವ್ಯತ್ಯಯಕ್ಕೂ ಕಾರಣವಾಯಿತು. ಪೊಲೀಸರು ಬ್ಯಾರಿಕೇಡ್ ಹಾಕುವ ಮೂಲಕ ಹೆಚ್ಚಿನ ಭದ್ರತೆ ಕೈಗೊಂಡಿದ್ದರು.

ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ ?

ಷರೀಫನನ್ನು ಬಂಧಿಸಿ ಗದಗ ರಸ್ತೆಯ ಆರ್​ಪಿಎಫ್ ಠಾಣೆಗೆ ಕರೆತರುತ್ತಿದ್ದಂತೆ ಜಮಾಯಿಸಿದ 50ಕ್ಕೂ ಹೆಚ್ಚು ಜನರಲ್ಲಿ ಷರೀಫನ ಸಹಚರ ಮಜರಲಿ ಜಾಲಗಾರ ಠಾಣೆ ಬಳಿ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದ. ಅದನ್ನು ಪ್ರಶ್ನಿಸಿದ ಮಹಿಳಾ ಪೇದೆಯ ಮೇಲೆ ಕೈಹಾಕಿ, ಹಲ್ಲೆಗೆ ಯತ್ನಿಸಿದ್ದ. ಹಾಗಾಗಿ, ಬೆತ್ತ ಪ್ರಹಾರದ ಮೂಲಕ ಗುಂಪು ಚದುರಿಸಿ ಆತನನ್ನೂ ವಶಕ್ಕೆ ಪಡೆಯಲಾಯಿತು ಎಂದು ತಿಳಿದು ಬಂದಿದೆ.

ಶಾಸಕರೊಬ್ಬರ ಆಪ್ತ?

ಷರೀಫ ಅದ್ವಾನಿ ಸ್ಥಳೀಯ ಶಾಸಕರೊಬ್ಬರ ಆಪ್ತ ಎನ್ನಲಾಗಿದೆ. ಆತನ ಬಳಿ ಇದ್ದ ಪಿಸ್ತೂಲ್​ಗೆ ಲೈಸನ್ಸ್ ಇದೆಯೇ ಎಂಬ ಕುರಿತು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಲೈಸನ್ಸ್ ಹೊಂದಿದ್ದರೂ ಸಾರ್ವಜನಿಕ ಸ್ಥಳದಲ್ಲಿ ವಿನಾಕಾರಣ ಅದನ್ನು ತೆಗೆಯುವಂತಿಲ್ಲ. ಹೀಗಿದ್ದರೂ ರೈಲು ನಿಲ್ದಾಣದಲ್ಲೇ ಪಿಸ್ತೂಲ್ ತೋರಿಸಿದ ಷರೀಫನ ಹಿನ್ನೆಲೆ ಏನು ? ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ.

ಶಹರ ಠಾಣೆಯಲ್ಲಿ ಪ್ರಕರಣ ದಾಖಲು

ರೈಲು ನಿಲ್ದಾಣ ಶಹರ ಠಾಣೆ ವ್ಯಾಪ್ತಿಯಲ್ಲಿದೆ. ಹೀಗಾಗಿ, ಷರೀಫನನ್ನು ಶಹರ ಠಾಣೆ ಪೊಲೀಸರು ರಾತ್ರಿ ಕರೆದೊಯ್ದರು. ಬಳಿಕ ಆರ್​ಪಿಎಫ್ ಸಿಬ್ಬಂದಿ ಹೇಳಿಕೆ ಆಧರಿಸಿ ಕೊಲೆಗೆ ಯತ್ನ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಇತ್ಯಾದಿ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಡಿಸಿಪಿ ನಾಗೇಶ.ಡಿ.ಎಲ್. ತಿಳಿಸಿದ್ದಾರೆ.

ಪಿಸ್ತೂಲ್, 5 ಬುಲೆಟ್ ವಶಕ್ಕೆ !

ಷರೀಫನ ಕೈಯಲ್ಲಿದ್ದ 7.65 ಎಂಎಂ ಪಿಸ್ತೂಲ್​ನಲ್ಲಿ ಒಂದು ಗುಂಡು ತುಂಬಿಕೊಂಡಿತ್ತು. ಟ್ರಿಗರ್ ಮೇಲೆ ಸ್ವಲ್ಪ ಕೈ ಒತ್ತಿದ್ದರೂ ಅಪಾಯವಿತ್ತು. ಸದ್ಯಕ್ಕೆ ಆತನಿಂದ ಒಂದು ಪಿಸ್ತೂಲ್, 5 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *